ಪುತ್ತೂರಿನ ಪೊಲೀಸ್ ದೌರ್ಜನ್ಯಕ್ಕೆ ಕಲ್ಕಡ್ಕ ಭಟ್, ನಳಿನ್ ನೇರ ಹೊಣೆ: ಅಭಯಚಂದ್ರ ಜೈನ್

Spread the love

ಪುತ್ತೂರಿನ ಪೊಲೀಸ್ ದೌರ್ಜನ್ಯಕ್ಕೆ ಕಲ್ಕಡ್ಕ ಭಟ್, ನಳಿನ್ ನೇರ ಹೊಣೆ: ಅಭಯಚಂದ್ರ ಜೈನ್

ಮಂಗಳೂರು: ಪುತ್ತೂರಿನಲ್ಲಿ ನಳಿನ್ ಕುಮಾರ್ ಕಟೀಲು ಹಾಗೂ ಡಿ ವಿ ಸದಾನಂದ ಗೌಡರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿರುವ ಆರೋಪದಲ್ಲಿ ಬಂಧಿತ ಯುವಕರ ಮೇಲೆ ನಡೆದಿರುವ ಪೊಲೀಸ್ ದೌರ್ಜನ್ಯಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಕಲ್ಲಡ್ಕ ಪ್ರಭಾಕರ ಭಟ್ ನೇರ ಹೊಣೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಆರೋಪಿಸಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡನಾಡಿ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಹಂಗಾಮಿ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರುವಾಗ ಈ ಘಟನೆ ನಡೆದಿದ್ದು, ಅದಾಗ್ಯೂ ಪ್ರಭಾಕರ ಭಟ್ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು.

ರಾಜ್ಯದಲ್ಲಿ ಸಿದ್ದರಾಮಯ್ಯರ ನೇತೃತ್ವದಲ್ಲಿ ಸರಕಾರ ರಚನೆಯಾಗುತ್ತಿದ್ದು ನೂತನ ಸಚಿವ ಸಂಪುಟದಲ್ಲಿ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಕೆ ಹರಿಪ್ರಸಾದ್ ಅವರಿಗೆ ಗೃಹ ಸಚಿವ ಹುದ್ದೆ ಸಿಕ್ಕರೆ ಸೂಕ್ತ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಬಹುತೇಕ ಕಡೆ ಜಯ ಗಳಿಸಿದ್ದರೂ ಕರಾವಳಿಯಲ್ಲಿ ಹಿನ್ನಡೆ ಅನುಭವಿಸಿದೆ. ಈ ಹಿಂದೆ ಆಸ್ಕರ್ ಫೆರ್ನಾಂಡಿಸ್, ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ ಸಕ್ರಿಯಾವಾಗಿದ್ದಾಗ ನಾಯಕರ ಕೊರತೆ ಇರಲಿಲ್ಲ. ಈ ಕೊರತೆ ನೀಗಿಸುವಲ್ಲಿ ಹರಿಪ್ರಸಾದ್ ರಾಜ್ಯದ ಗೃಹ ಸಚಿವರಾಗಬೇಕಾಗಿದೆ. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿಯೂ ಅವರನ್ನೇ ನೇಮಕ ಮಾಡುವುದು ಸೂಕ್ತ. ಇದರಿಂದ ಜಿಲ್ಲೆಯಲ್ಲಿ ಸಾಮರಸ್ಯದೊಂದಿಗೆ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ನೂತನ ಸರ್ಕಾರಕ್ಕೆ ಜನರಿಗೆ ನೀಡಿರುವ 5 ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡುವ ಹೊಣೆಗಾರಿಕೆ ಇದೆ. ಅದನ್ನು ಸಮರ್ಪಕವಾಗಿ ನಿಭಾಯಿಸುತ್ತಾರೆ ಎನ್ನುವ ವಿಶ್ವಾಸವಿದೆ.

ಯುವಕರಿಗೆ ಅವಕಾಶ ನೀಡಬೇಕು. ಈ ಹಿನ್ನಲೆಯಲ್ಲಿ ನಾನು ವಿಧಾನ ಪರಿಷತ್ ಸದಸ್ಯತ್ವದ ಆಕಾಂಕ್ಷಿಯಲ್ಲ. ಆದರೆ ಮೂಡುಬಿದಿರೆ ಕ್ಷೇತ್ರದಲ್ಲಿ ಪರಾಜಿತರಾಗಿರುವ ಮಿಥುನ್ ರೈಯವರಿಗೆ ವಿಧಾನ ಪರಿಷತ್ ಸದಸ್ಯತ್ವ ನೀಡಬಹುದು ಎಂದು ಅಭಯಚಂದ್ರ ಜೈನ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಐದನೇ ಬಾರಿಗೆ ಆಯ್ಕೆಯಾಗಿರುವ ಯು.ಟಿ.ಖಾದರ್ ಗೆ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆ ನೀಡಬೇಕು. ರಮಾನಾಥ ರೈಯವರಿಗೆ ಖಾತೆ ನೀಡಿದರೂ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದರು.


Spread the love

Leave a Reply

Please enter your comment!
Please enter your name here