ಪುತ್ತೂರು: ಆಟೋ ಚಾಲಕನ ಮೇಲೆ ಟ್ರಾಫಿಕ್ ಪೊಲೀಸರಿಂದ ಹಲ್ಲೆ ಅವಾಚ್ಯ ಶಬ್ದಗಳಿಂದ ನಿಂದನೆ ವಿಡಿಯೋ ವೈರಲ್ : ಇಲಾಖೆಯಿಂದ ತನಿಖೆ!
ಪುತ್ತೂರು: ದರ್ಬೆ ಸಮೀಪ ಆಟೋ ರಿಕ್ಷಾ ಚಾಲಕರೊಬ್ಬರ ಮೇಲೆ ಸಂಚಾರಿ ಪೊಲೀಸರು ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಇಂದು ಸಂಜೆ ದರ್ಬೆಯಿಂದ ಮಾಣಿ ಮೈಸೂರು ಹೆದ್ದಾರಿಗೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ನಡೆದಿದೆ. ಸಂಚಾರಿ ಪೊಲೀಸರ ವರ್ತನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಸಂಚಾರಿ ಠಾಣೆಯ ಪೊಲೀಸರು ಆಟೋ ರಿಕ್ಷಾಕ್ಕೆ ಅಡ್ಡಲಾಗಿ ಬಂದು ಚಾಲಕನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸುವುದು ಕಂಡುಬರುತ್ತದೆ. ಆದ್ರೆ ಪೊಲೀಸರು ಆಟೋಚಾಲಕನ ವಿರುದ್ಧ ಆ ರೀತಿ ಯಾಕೇ ವರ್ತಿಸಿದ್ದರು ಎನ್ನುವುದು ಸ್ಪಷ್ಟವಾಗಿಲ್ಲ
ಮೂಲಗಳ ಪ್ರಕಾರ, ಹಲ್ಲೆಗೊಳಗಾದ ಆಟೋ ಚಾಲಕ (ಮುಕೈ ನಿವಾಸಿ) ಶುಕ್ರವಾರ ಸಂಜೆ ದರ್ಬೆ ಸಮೀಪದ ಬೈಪಾಸ್ ರಸ್ತೆಯಲ್ಲಿ ಆಟೋ ನಿಲ್ಲಿಸಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಆಗಮಿಸಿದ ಸಂಚಾರಿ ಪೊಲೀಸರು ಆಟೋ ಮುಂದೆ ತಮ್ಮ ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಆಟೋ ಚಾಲಕ ಡಿವೈಡರ್ ದಾಟಿ ಅಶ್ವಿನಿ ವೃತ್ತದ ಕಡೆಗೆ ತೆರಳಿದ್ದಾರೆ ಎನ್ನಲಾಗಿದೆ. ಪೊಲೀಸರು ಆಟೋವನ್ನು ಹಿಂಬಾಲಿಸಿಕೊಂಡು ಬಂದು ಕಾಲೇಜು ಮುಂಭಾಗದ ಮುಖ್ಯರಸ್ತೆಯಲ್ಲಿ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಚಾಲಕ ತಿಳಿಸಿದ್ದಾರೆ. “ಮೊಬೈಲ್ನಲ್ಲಿ ರೆಕಾರ್ಡ್ ಮಾಡುತ್ತೀಯಾ” ಎಂದು ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ.
ಪೊಲೀಸ್ ಠಾಣೆಯಲ್ಲಿ ಬೆದರಿಕೆ:
ಘಟನಾ ಸ್ಥಳದಲ್ಲಿ ಜನ ಸೇರುತ್ತಿದ್ದಂತೆ, ಪೊಲೀಸರು ಚಾಲಕನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ, ವಿಡಿಯೋ ಮಾಡಿದ ಮೊಬೈಲ್ ನೀಡುವಂತೆ ಹೇಳಿದ್ದಲ್ಲದೆ, ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದ್ದಾರೆ ಎಂದು ಚಾಲಕ ನಿಖರ ನ್ಯೂಸ್‌ಗೆ ತಿಳಿಸಿದ್ದಾರೆ. ಆಟೋ ಹಾಗೂ ಅದರ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿಯೂ ಅವರು ಹೇಳಿದ್ದಾರೆ.
ದೂರು ಮತ್ತು ಆಸ್ಪತ್ರೆಗೆ ದಾಖಲು:
ಹಲ್ಲೆಗೊಳಗಾದ ಚಾಲಕ ನಂತರ ಡಿವೈಎಸ್ಪಿ ಕಚೇರಿಗೆ ತೆರಳಿ ಮೌಖಿಕವಾಗಿ ದೂರು ನೀಡಿರುವುದಾಗಿಯೂ, ಹಲ್ಲೆಯಿಂದ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ತಿಳಿಸಿದ್ದಾರೆ. ಡಿವೈಎಸ್ಪಿ ಕಛೇರಿಗೆ ತೆರಳಿ ಮಾಹಿತಿ ನೀಡಿದ ಬಳಿಕ ರಿಕ್ಷಾವನ್ನು ಬಿಟ್ಟು ಕಳುಹಿಸರುವುದಾಗಿ ಅವರು ತಿಳಿಸಿದ್ದಾರೆ
ಪೊಲೀಸ್ ಇಲಾಖೆಯಿಂದ ತನಿಖೆಗೆ ಆದೇಶ:
ವೀಡಿಯೊದಲ್ಲಿ ಇಬ್ಬರು ಪೊಲೀಸರ ತಪ್ಪು ಸ್ಪಷ್ಟವಾಗಿ ತೋರುತ್ತಿದ್ದು, ಘಟನೆಯ ಕಾರಣವನ್ನು ಪರಿಶೀಲಿಸಲಾಗುವುದು ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ. ಸಾರ್ವಜನಿಕ ವಲಯದಲ್ಲಿ ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.