ಪುತ್ತೂರು : ಗಾಂಜಾ ಸಾಗಾಟ ಪತ್ತೆ -ಮೂವರು ಆರೋಪಿಗಳ ಬಂಧನ

Spread the love

ಪುತ್ತೂರು : ಗಾಂಜಾ ಸಾಗಾಟ ಪತ್ತೆ -ಮೂವರು ಆರೋಪಿಗಳ ಬಂಧನ

ಪುತ್ತೂರು: ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿದ ಪುತ್ತೂರು ನಗರ ಪೊಲೀಸರು ಗಾಂಜಾ ಸರಬರಾಜುದಾರನ ಸಹಿತ ಮೂವರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಹಾಗೂ ಸೊತ್ತನ್ನು ವಶಪಡಿಸಿಕೊಂಡ ಪ್ರಕರಣ ರವಿವಾರ ವರದಿಯಾಗಿದೆ.

ಖಚಿತ ವರ್ತಮಾನದ ಮೇರೆಗೆ ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ವೀರಮಂಗಲ ಎಂಬಲ್ಲಿ ಕಾರ್ಯಾಚರಣೆ ನಡೆಸಿದ ವೇಳೆ ಇಲ್ಲಿನ ರೈಲ್ವೇ ಹಳಿಯ ಬಳಿಯಲ್ಲಿ ಗಾಂಜಾ ಇರಿಸಿಕೊಂಡಿದ್ದ ಇಬ್ಬರು ಆರೋಪಿಗಳು ಪತ್ತೆಯಾಗಿದ್ದಾರೆ. ಕಡಬ ತಾಲೂಕಿನ ಕುಂತೂರು ಪೆರಾಬೆ ಗ್ರಾಮದ ಕೋಚಟ್ಟೆ ನಿವಾಸಿ ಶಫೀಕ್ ಕೆ.ವಿ(24) ಮತ್ತು ಕುಂತೂರು ಎರ್ಮಲ ನಿವಾಸಿ ರಾಝಿಕ್(25) ಬಂಧಿತ ಆರೋಪಿಗಳು. ಇವರಿಂದ 21,500 ರೂ. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಂಜಾ ಸಾಗಾಟದಾರರ ಆರೋಪಿಗಳನ್ನು ಬಂಧಿಸಿದ ಪೊಲೀಸರು ಅವರ ತನಿಖೆ ನಡೆಸುತ್ತಿದ್ದ ವೇಳೆಯಲ್ಲಿ ಬಂಧಿತ ಆರೋಪಿಗಳು ನೀಡಿದ ಮಾಹಿತಿಯಂತೆ ಗಾಂಜಾ ಸರಬರಾಜುದಾರನೊಬ್ಬನನ್ನೂ ಬಳಿಕ ಕೆದಿಲ ಗ್ರಾಮದ ಪೇರಮೊಗ್ರು ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲ ಕುಂಡಡ್ಕ ನಿವಾಸಿ ಮಹಮ್ಮದ್ ಮುವಾಝ್(30) ಬಂಧಿತ ಆರೋಪಿ.

ಬಂಧಿತ ಆರೋಪಿಯಿಂದ 2 ಕೆಜಿ ಗಾಂಜಾ, ಪರವಾನಿಗೆರಹಿತ ಪಿಸ್ತೂಲ್, ಸಜೀವ ಗುಂಡುಗಳು, ಕಾರು, ನಗದು, ಪಾನ್‌ಕಾರ್ಡ್, ಎಟಿಎಂ ಕಾರ್ಡ್, ಮೊಬೈಲ್ ಸೇರಿದಂತೆ ಒಟ್ಟು 5,86,530 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


Spread the love