
ಪುತ್ತೂರು, ಸುಳ್ಯ ಸ್ವಯಂಘೋಷಿತ ಬಂದ್; ಪೊಲೀಸ್ ಭದ್ರತೆಯಲ್ಲಿ ಮೃತದೇಹದ ಮೆರವಣಿಗೆ, ಕುಟುಂಬ ಸದಸ್ಯರ ಆಕ್ರೋಶ
ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಪುತ್ತೂರು, ಬೆಳ್ಳಾರೆ, ಸುಳ್ಯ, ಕಡಬ ಪಟ್ಟಣಗಳಲ್ಲಿ ಸ್ವಯಂಘೋಷಿತ ಬಂದ್‌ಗೆ ಹಿಂದುತ್ವ ಪರ ಸಂಘಟನೆಗಳು ಕರೆ ನೀಡಿವೆ. ಈ ಕರೆಗೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಜನಸಂಚಾರ ವಿರಳವಾಗಿದೆ. ಪುತ್ತೂರಿನ ಪುತ್ತೂರಿನ ವಿವೇಕಾನಂದ, ಅಂಬಿಕಾ ಶಿಕ್ಷಣ ಸಂಸ್ಥೆಗಳು ರಜೆ ಘೋಷಿಸಿವೆ. ಪ್ರವೀಣ್ ನೆಟ್ಟಾರು ಮೃತದೇಹವನ್ನು ಪೊಲೀಸ್ ಭದ್ರತೆಯಲ್ಲಿ ಹುಟ್ಟೂರಿಗೆ ಕೊಂಡೊಯ್ಯಲಾಗುತ್ತಿದೆ.
ಪ್ರವೀಣ್ ನೆಟ್ಟಾರು ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಹಿಂದೂ ‘ಪೂಜಾರಿ’ ಪದ್ಧತಿ ಪ್ರಕಾರ ಮನೆ ಸಮೀಪದ ಸ್ವಂತ ಜಾಗದಲ್ಲಿ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಲಸು, ಮಾವು, ಗಂಧದ ಮರದ ತುಂಡುಗಳನ್ನು ಸಂಗ್ರಹಿಸಿರುವ ಕುಟುಂಬದ ಸದಸ್ಯರು ಚಿತೆಯನ್ನು ಸಿದ್ಧಪಡಿಸುತ್ತಿದ್ದಾರೆ.
ಪುತ್ತೂರು ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಪ್ರವೀಣ್ ನೆಟ್ಟಾರು ಮೃತದೇಹವನ್ನು ಬೆಳಗ್ಗೆ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯುತು. ಪುತ್ತೂರಿನಿಂದ ಸವಣೂರು ನಿಂತಿಕಲ್ಲು ಮಾರ್ಗವಾಗಿ ಪ್ರವೀಣ್ ಪಾರ್ಥೀವ ಶರೀರವನ್ನು ಮೆರವಣಿಗೆ ಮೂಲಕ ಕರೆತರಲಾಗುತ್ತಿದ್ದು, ಹುಟ್ಟೂರು ನೆಟ್ಟಾರಿನಲ್ಲಿ ಅಂತ್ಯ ಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು(29) ಅವರನ್ನು ನಗರದ ಬೆಳ್ಳಾರೆ ಪೇಟೆಯಲ್ಲಿ ಹತ್ಯೆ ಮಾಡಲಾಗಿದೆ. ಈ ಬರ್ಬರ ಹತ್ಯೆಯನ್ನು ಖಂಡಿಸಿ ಪುತ್ತೂರು, ಸುಳ್ಯ, ಕಡಬ ತಾಲೂಕಿನಲ್ಲಿ ಸ್ವಯಂಪ್ರೇರಿತ ಬಂದ್‌ಗೆ ವಿಎಚ್‌ಪಿ, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಕರೆ ನೀಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ.
ಈ ನಡುವೆ ಕರಾವಳಿಯ ಬಿಜೆಪಿ ಮುಖಂಡರ ವಿರುದ್ಧ ಪ್ರವೀಣ್ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರಾದ ಅಂಗಾರ, ಸುನಿಲ್ ಕುಮಾರ್, ನಳಿನ್ ಕುಮಾರ್ ಕಟೀಲ್ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೆರವಣಿಗೆಯಲ್ಲಿ ಶವ ಕೊಂಡೊಯ್ಯಲು ಪ್ರವೀಣ್ ಸಂಬಂಧಿಕರು ಡಿವೈಎಸ್ಪಿ ಗಾನ ಪಿ.ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಆದರೆ ಪೊಲೀಸರು ಅನುಮತಿ ನಿರಾಕರಿಸಿದರು. ‘ಮೆರವಣಿಗೆ ವೇಳೆ ಅವಘಡವಾದರೆ ನೀವೇ ಹೊಣೆಗಾರರು’ ಎಂದು ಡಿವೈಎಸ್ಪಿ ಎಚ್ಚರಿಸಿದರು. ಡಿವೈಎಸ್ಪಿ ಮಾತು ಒಪ್ಪದ ಮೃತರ ಸಂಬಂಧಿ ಜಯರಾಮ್, ನಾವು ಶಾಂತಿಯುತವಾಗಿ ಶೋಭಾಯಾತ್ರೆ ಮಾಡುತ್ತೇವೆ. ನಮ್ಮ ಶೋಭಾಯಾತ್ರೆಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ವಿನಂತಿಸಿದರು. ಮೃತರ ಕುಟುಂಬಕ್ಕೆ ಸರ್ಕಾರ ₹ 50 ಲಕ್ಷ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಕಾರ್ಯಕರ್ತರ ಆಕ್ರೋಶ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ್ ನಿಟ್ಟಾರು ಬರ್ಬರ ಹತ್ಯೆಯು ಬಿಜೆಪಿ ಕಾರ್ಯಕರ್ತರಲ್ಲಿ ವ್ಯಾಪಕ ಆಕ್ರೋಶ ಹುಟ್ಟುಹಾಕಿದೆ. ‘ನಮ್ಮದೇ ಸರ್ಕಾರ ಇದ್ದರೂ ನಮ್ಮ ಕಾರ್ಯಕರ್ತರಿಗಿಲ್ಲವೇ ಭದ್ರತೆ’ ಎಂದು ಕಿಡಿಕಾರಿದ್ದಾರೆ.
ಶರತ್ ಮತ್ತು ಪ್ರವೀಣ್ ಕೊಲೆಯಲ್ಲಿ ಹೋಲಿಕೆ
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಇತ್ತೀಚೆಗೆ ಶರತ್ ಮಡಿವಾಳ ಎಂಬಾತನ ಕೊಲೆಯಾಗಿತ್ತು. ಆ ಕೊಲೆಗೂ ಇದೀಗ ಕೊಲೆಯಾಗಿರುವ ಪ್ರವೀಣ್ ನೆಟ್ಟಾರು ಕೊಲೆಗೂ ಹೋಲಿಕೆಯಿರುವುದು ಗೊತ್ತಾಗಿದೆ. ಲಾಂಡ್ರಿ ಅಂಗಡಿ ಮುಚ್ಚುವಾಗ ಶರತ್ನನ್ನು ಕೊಲೆ ಮಾಡಿದ್ದರು. ನಿನ್ನೆ ಕೋಳಿ ಅಂಗಡಿ ಬಂದ್ ಮಾಡುವಾಗ ಪ್ರವೀಣ್ ಹತ್ಯೆಯಾಗಿದೆ. ಇಬ್ಬರ ಕೊಲೆ ನಡೆದ ರೀತಿ ಒಂದೇ ರೀತಿ ಇರುವುದು ಗಮನಾರ್ಹ ಅಂಶವಾಗಿದೆ.