ಪುತ್ತೂರು: ಹನಿಟ್ರ್ಯಾಪ್ ಪ್ರಕರಣ ಬಯಲಿಗೆ: ಓರ್ವ ಯುವತಿಯ ಬಂಧನ, 5 ಮಂದಿ ಪರಾರಿ

Spread the love

ಪುತ್ತೂರು: ಹನಿಟ್ರ್ಯಾಪ್ ಪ್ರಕರಣ ಬಯಲಿಗೆ: ಓರ್ವ ಯುವತಿಯ ಬಂಧನ, 5 ಮಂದಿ ಪರಾರಿ

ಪುತ್ತೂರು: ಹನಿಟ್ರ್ಯಾಪ್‌ಗೊಳಗಾಗಿ ಲಕ್ಷಾಂತರ ರೂ. ಕಳೆದುಕೊಂಡಿರುವುದಾಗಿ ನೆಟ್ಟಣಿಗೆ ಮುಡ್ನೂರು ನಿವಾಸಿ ಯುವಕನೋರ್ವ 7 ಮಂದಿ ವಿರುದ್ಧ ಪೊಲೀಸ್ ದೂರು ನೀಡಿದ್ದು, ಆರೋಪಿಗಳ ಪೈಕಿ ಯುವತಿಯೋರ್ವಳನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.

ಬಂಧೀತ ಯುವತಿಯನ್ನು ಬಂಟ್ವಾಳ ತಾಲೂಕಿನ ತನಿಷಾ ರಾಜ್ ಎಂದು ಗುರುತಿಸಲಾಗಿದೆ.

ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಚೀಚಗದ್ದೆ ನಿವಾಸಿ, ವೃತ್ತಿಯಲ್ಲಿ ಸೇಲ್ಸ್‌ಮ್ಯಾನ್ ಆಗಿರುವ ಅಬ್ದುಲ್ ನಾಸಿರ್ (25) ಹನಿಟ್ರ್ಯಾಪ್‌ಗೆ ಒಳಗಾದ ಯುವಕ. ಇವರು ವಂಚಕರಿಂದ 30 ಲಕ್ಷ ರೂ. ಕಳೆದುಕೊಂಡಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ವಿವರ

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ನೆಟ್ಟಣಿಗೆ ಮುನ್ನೂರು ಗ್ರಾಮದ ಅಬ್ದುಲ್ ನಾಸಿರ್ ರವರ ಮೊಬೈಲ್ ನಂಬರಿಗೆ ಸುಮಾರು 5 ತಿಂಗಳ ಹಿಂದೆ ಮೊಬೈಲ್ ನಂಬರ್ ಒಂದರಿಂದ Hai ಎಂಬುದಾಗಿ ವಾಟ್ಸಪ್ ಮೆಸೇಜೊಂದು ಬಂದಿದ್ದು, ಅದಕ್ಕೆ ಅಬ್ದುಲ್ ನಾಸಿರ್ ರವರು Who are You? ಅಂತ ವಾಟ್ಸಪ್ ಮೆಸೇಜ್ ಮಾಡಿದಾಗ Sorry wrong number ಎಂಬುದಾಗಿ ಸದ್ರಿ ನಂಬರಿನಿಂದ ಮೆಸೇಜ್ ಬಂದಿರುತ್ತದೆ. ಅದಾದ ಸುಮಾರು 12 ದಿನಗಳ ಬಳಿಕ ಅದೇ ಮೊಬೈಲ್ ನಂಬರಿನಿಂದ Hai ಎಂಬುದಾಗಿ ವಾಟ್ಸಪ್ ಮೆಸೇಜ್ ಬಂದಿದ್ದು, ಅದಕ್ಕೆ ಅಬ್ದುಲ್ ನಾಸಿರ್ ರವರು Hai ಎಂಬುದಾಗಿ ಮರು ಸಂದೇಶ ಕಳಿಸಿದ್ದು, ಕೆಲವು ಗಂಟೆಗಳ ಬಳಿಕ ಅಬ್ದುಲ್ ನಾಸಿರ್ ರವರು ಸದ್ರಿ ನಂಬರಿಗೆ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಿದ ಹುಡುಗಿಯೊಬ್ಬಳು ನಾನು ಮಂಗಳೂರಿನ ತನೀಶಾ ಎಂಬುದಾಗಿ ಹಿಂದಿ ಭಾಷೆಯಲ್ಲಿ ಪರಿಚಯಿಸಿಕೊಂಡಿದ್ದಾಳೆ

ಬಳಿಕ ಸದ್ರಿ ಹುಡುಗಿಯು ಅಬ್ದುಲ್ ನಾಸಿರ್ ರವರನ್ನು ಆಗಾಗ್ಗೆ ಮೊಬೈಲ್ ಕರೆ ಮತ್ತು ವಾಟ್ಸಪ್ ಮೆಸೇಜ್ ಮತ್ತು ವಾಯ್ಸ್ ಮೆಸೇಜ್ ಮೂಲಕ ಪರಸ್ಪರ ಸಂಪರ್ಕಿಸುತ್ತಿದ್ದರು. ಇದಾದ ಬಳಿಕ ದಿನಾಂಕ: 15-04-2021 ರಂದು ಫಿರ್ಯಾದುದಾರರಲ್ಲಿ ಸದ್ರಿ ತನೀಶಾಳು ತನಗೆ ವಾಟ್ಸ್ ಅಫ್ ವೀಡಿಯೋ ಕಾಲ್ ಮಾಡುವಂತೆ ತಿಳಿಸಿದ ಮೇರೆಗೆ ಅಬ್ದುಲ್ ನಾಸಿರ್ ರವರು ಸಲುಗೆ ಮತ್ತು ಅನ್ನೋನ್ಯತೆಯಿಂದ ಸದ್ರಿ ತನಿಷಾಳೊಂದಿಗೆ ವೀಡಿಯೋ ಕಾಲ್ ಸಂಬಾಷಣೆ ಮಾಡಿದ್ದು, ಆ ಬಳಿಕ ತನಿಷಾಳು ತನ್ನ ಮೊಬೈಲಿನಲ್ಲಿ ನನ್ನ ವಾಟ್ಸಪ್ ಕರೆ ಮತ್ತು ವಾಟ್ಸಪ್ ಮೆಸೇಜನ್ನು ಬ್ಲಾಕ್ ಮಾಡಿರುತ್ತಾರೆ. ಅಬ್ದುಲ್ ನಾಸಿರ್ ರವರು ಸದ್ರಿಯವಳಿಗೆ ಮೊಬೈಲ್ ಕರೆ ಮಾಡಿದರೂ ಅವಳು ಕರೆಯನ್ನು ಸ್ವೀಕರಿಸುತ್ತಿರಲಿಲ್ಲ.

ಇದಾದ ಬಳಿಕ ದಿನಾಂಕ: 20-04-2021ರಂದು ಅಬ್ದುಲ್ ನಾಸಿರ್ ರವರನ್ನು ಅಜ್ಞಾತ ಸ್ಥಳಕ್ಕೆ ಕರೆಸಿಕೊಂಡ ಆರೋಪಿಗಳಾದ ಸಯೀದ್‌ಮೋನು, ಮಹಮ್ಮದ್ ಕುಂಞ, ಶಾಫಿ ಮತ್ತು ನಾಸಿರ್, ಅಝರ್ ಎಂಬವರು ಸೇರಿ ನೀನು ತನಿಷಾ ಎಂಬ ಹುಡುಗಿಯನ್ನು ಪ್ರೀತಿಸುವ ನಾಟಕವಾಡಿ ಮೋಸ ಮಾಡಿದ್ದೀಯ. ನೀನು ಅವಳೊಂದಿಗೆ ವಿಡಿಯೋ ಕಾಲ್ ನಲ್ಲಿ ಸಲುಗೆ ಮತ್ತು ಅನ್ನೋನ್ಯತೆಯಿಂದ ಇದ್ದ ವೀಡಿಯೋ ಎಲ್ಲಾ ಇದೆ. ಎಂದು ಮೊಬೈಲಿನಲ್ಲಿ ವೀಡಿಯೋವೊಂದನ್ನು ತೋರಿಸಿ “ನೀನು ನಮಗೆ ಮೂವತ್ತು ಲಕ್ಷ ರೂಪಾಯಿ ಕೊಟ್ಟರ ಈ ವಿಷಯವನ್ನು ಇಲ್ಲಿಗೇ ಮುಗಿಸುವ. ಇಲ್ಲದಿದ್ದರೆ ಈ ವೀಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡುತ್ತೇವೆ. ಅಲ್ಲದೇ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ. ಎಂದು ಹೇಳಿ ಅಬ್ದುಲ್ ನಾಸಿರ್ ರವರ ಮೊಬೈಲನ್ನು ತೆಗೆದುಕೊಂಡು ಅದರಲ್ಲಿ ತನೀಶಾ ಮತ್ತು ಅಬ್ದುಲ್ ನಾಸಿರ್ ರವರ ಮಧ್ಯೆ ನಡೆಸಿದ್ದ ವಾಟ್ಸ್ ಅಪ್ ಚಾಟಿಂಗನ್ನು ಅಳಿಸಿ ಹಾಕಿ ಮೊಬೈಲನ್ನು ಹಿಂದಿರುಗಿಸಿರುತ್ತಾರೆ.

ಇದಾದ ಬಳಿಕ ಮೂರು ದಿನಗಳ ಬಳಿಕ ಇಪ್ಪತ್ತೈದು ಲಕ್ಷ ರೂಪಾಯಿಯನ್ನು ಒಂದು ಸಾರಿ, ಒಂದು ವಾರದ ಬಳಿಕ ಐದು ಲಕ್ಷ ನೀಡಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪಿರ್ಯಾದಿ ನೀಡದಂತೆ ಜೀವ ಬೆದರಿಕೆ ಹಾಕಿ ಬಿಟ್ಟು ಕಳುಹಿಸಿರುತ್ತಾರೆ. ಹೀಗೆ ಅಪರಿಚಿತರಿಂದ ಶ್ರೀಮಂತ ವ್ಯಕ್ತಿಗಳ ಮೊಬೈಲ್ ನಂಬರಿಗೆ ಮೆಸೇಜ್, ವಾಟ್ಸ್ ಆಪ್ ಮೂಲಕ ಹುಡುಗಿಯರು ಕರೆ ಮಾಡಿ ತಮ್ಮನ್ನು ತಾವು ಪರಿಚಯಿಸಿಕೊಂಡು ಸಲುಗೆಯಿಂದ ವರ್ತಿಸಿ ಅವರು ಪ್ರೀತಿಸುವಂತೆ ನಾಟಕವಾಡಿ, ಅವರೊಂದಿಗೆ ಸಲುಗೆಯಿಂದ ಇದ್ದ ಪೊಟೋ ವಿಡಿಯೋ ಚಿತ್ರೀಕರಣ ಮಾಡಿಕೊಂಡು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ಹಣವನ್ನು ಸುಲಿಗೆ ಮಾಡುವ ವ್ಯವಸ್ಥಿತ ಜಾಲವೊಂದು ಬೆಳಕಿಗೆ ಬಂದಿರುತ್ತದೆ.

ಈ ಬಗ್ಗೆ ದಿನಾಂಕ: 30 06-2021ರಂದು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪ್ರಕರಣದ ಓರ್ವ ಆರೋಪಿತ ಮೂಲತ: ಬಂಟ್ವಾಳ ತಾಲೂಕಿನ ತನಿಷಾ ರಾಜ್ ಎಂಬಾಕೆಯನ್ನು ದಿನಾಂಕ: 02-07-2021ರಂದು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಸದ್ರಿ ಪ್ರಕರಣಕ್ಕೆ ಸಂಬಂದಿಸಿದಂತೆ ಇನ್ನುಳಿದ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದ್ದು, ಪೊಲೀಸು ಅಧೀಕ್ಷಕರು, ದ.ಕ ಜಿಲ್ಲೆ, ರವರ ಮಾರ್ಗದರ್ಶನದಲ್ಲಿ, ಗಾನ ಪಿ ಕುಮಾರ್, ಪೊಲೀಸು ಉಪಾಧೀಕ್ಷಕರು ಪುತ್ತೂರು ಉಪ ವಿಭಾಗ ರವರ ನೇತೃತ್ವದಲ್ಲಿ, ತಿಮ್ಮಪ್ಪ ನಾಯ್ಕ, ಪ್ರಬಾರ ಪೊಲೀಸು ವೃತ್ತ ನಿರೀಕ್ಷಕರು ಪುತ್ತೂರು ಗ್ರಾಮಾಂತರ ವೃತ್ತ, ಮತ್ತು ಉದಯರವಿ ಎಂ. ಪಿಎಸ್‌ಐ ಪುತ್ತೂರು ಗ್ರಾಮಾಂತರ ಠಾಣೆ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯದಲ್ಲಿದೆ.


Spread the love