ಪುಷ್ಪಾನಂದ ಫೌಂಡೇಶನ್ ಮೂಲಕ ಯಶ್‍ಪಾಲ್ ಸುವರ್ಣರ ಸಾಮಾಜಿಕ ಬದ್ಧತೆ ಮಾದರಿ : ಶ್ರೀಕಾಂತ್ ನಾಯಕ್ ಅಲೆವೂರು

Spread the love

ಪುಷ್ಪಾನಂದ ಫೌಂಡೇಶನ್ ಮೂಲಕ ಯಶ್‍ಪಾಲ್ ಸುವರ್ಣರ ಸಾಮಾಜಿಕ ಬದ್ಧತೆ ಮಾದರಿ : ಶ್ರೀಕಾಂತ್ ನಾಯಕ್ ಅಲೆವೂರು

ಪುಷ್ಪಾನಂದ ನಂದ ಫೌಂಡೇಶನ್ ವತಿಯಿಂದ ಕಾಪು ಕ್ಷೇತ್ರದ 29 ಗ್ರಾಮಗಳ 2158 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ವಿತರಿಸುವ ಮೂಲಕ ಯಶ್‍ಪಾಲ್ ಸುವರ್ಣ ತಮ್ಮ ಸಾಮಾಜಿಕ ಬದ್ಧತೆಯನ್ನು ನಿರೂಪಿಸಿದ್ದು, ಸಮಾಜ ಸೇವೆಯ ಸಂಕಲ್ಪದೊಂದಿಗೆ ಜಾತಿ ಮತ ಭೇದವಿಲ್ಲದೇ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರ ನೀಡುವ ಈ ಕಾರ್ಯ ಸರ್ವರಿಗೂ ಮಾದರಿ ಎಂದು ಬಿಜೆಪಿ ಕಾಪು ಮಂಡಲದ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಅಲೆವೂರು ಹೇಳಿದರು.

ಅಲೆವೂರಿನ ಸಂಕಲ್ಪ ಸಭಾಭವನದಲ್ಲಿ ಆಯೋಜಿಸಿದ್ದ ಪುಷ್ಪಾನಂದ ನಂದ ಫೌಂಡೇಶನ್ ಪ್ರತಿಭಾ ಪುರಸ್ಕಾರ ವಿತರಣೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುಷ್ಪಾನಂದ ಫೌಂಡೇಶನ್ ಪ್ರವರ್ತಕರಾದ ಯಶ್‍ಪಾಲ್ ಎ. ಸುವರ್ಣ ಮಾತನಾಡಿ ತಂದೆ ತಾಯಿಯ ಪ್ರೇರಣೆಯಿಂದ ತಮ್ಮ ಫೌಂಡೇಶನ್ ಮೂಲಕ 1456 ಎಸ್ ಎಸ್ ಎಲ್ ಸಿ ಮತ್ತು 702 ಮಂದಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ರೂ. 23,35,500 ಮೊತ್ತದ ಪ್ರತಿಭಾ ಪುರಸ್ಕಾರ ನೀಡಿ ಶಿಕ್ಷಣದಲ್ಲಿ ಅವರ ಮುಂದಿನ ಸಾಧನೆಗೆ ಸಹಕರಿಸಿದ ಸಂತÀೃಪ್ತಿಯಿದೆ, ನಮ್ಮ ಈ ಪ್ರತಿಭಾ ಪುರಸ್ಕಾರ ಯೋಜನೆಗೆ ಕಾಪು ಕ್ಷೇತ್ರದ ಎಲ್ಲಾ ಗ್ರಾಮಗಳ ವಿದ್ಯಾರ್ಥಿಗಳು ನಿರೀಕ್ಷೆಗೂ ಮೀರಿ ಸ್ಪಂದಿಸಿ ಅರ್ಜಿ ಸಲ್ಲಿಸಿದ್ದು ಪ್ರತಿಭಾವಂತ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಜೀವನದಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಸಮಾರಂಭದ ಮುಖ್ಯ ಅತಿಥಿ ವಿ4 ಡೆವಲಪರ್ಸ್ ಆಡಳಿತ ನಿರ್ದೇಶಕರಾದ ಕಾರ್ತಿಕ್ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಶ್ರೀಮತಿ ತಾರಾ ಆಚಾರ್ಯ ಮಾತನಾಡಿ ಯಶ್‍ಪಾಲ್ ಸುವರ್ಣ ನೇತೃತ್ವದಲ್ಲಿ ಪುಷ್ಪಾನಂದ ಫೌಂಡೇಶನ್ ಮೂಲಕ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ಸಾಗಿ ಬರಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ಅಲೆವೂರು ಮತ್ತು ಮರ್ಣೆ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ 102 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಸಮಾರಂಭದಲ್ಲಿ ಕೊರಂಗ್ರಪಾಡಿ ಸಿ ಎ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಹರೀಶ್ ಶೇರಿಗಾರ್, ಅಲೆವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷರಾದ ಮಂಜೇಶ್ ಕುಮಾರ್, ಉದ್ಯಾವರ ಅಲೆವೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅಶೋಕ್ ಭಂಡಾರಿ, ಮರ್ಣೆ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಜ್ವಲ್ ಹೆಗ್ಡೆ, ಪದ್ಮನಾಭ ನಾಯಕ್ ಉಪಸ್ಥಿತರಿದ್ದರು. ಯಶ್‍ಪಾಲ್ ಸುವರ್ಣ ಆಪ್ತ ಕಾರ್ಯದರ್ಶಿ ಮಟ್ಟು ಯತೀಶ್ ಕೋಟ್ಯಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


Spread the love