ಪುಸ್ತಕ ಹಿಡಿಯುವ ಕೈಯಲ್ಲಿ ಪೊರಕೆ ಹಿಡಿದ ವಿದ್ಯಾರ್ಥಿಗಳು!

Spread the love

ಪುಸ್ತಕ ಹಿಡಿಯುವ ಕೈಯಲ್ಲಿ ಪೊರಕೆ ಹಿಡಿದ ವಿದ್ಯಾರ್ಥಿಗಳು!

ಚಾಮರಾಜನಗರ: 6 ರಿಂದ 8 ನೇ ತರಗತಿ ಆರಂಭವಾದ ಮೊದಲ ದಿನವೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದಲೇ ಶಿಕ್ಷಕರು ಪೊರಕೆ ಹಿಡಿಸಿ ಕಸ ಗೂಡಿಸಿರುವ ಘಟನೆ ನಡೆದಿದೆ.

ಗಡಿ‌ಜಿಲ್ಲೆ ಚಾಮರಾಜನಗರದ ಚನ್ನೀಪುರಮೋಳೆ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.‌ಸೋಮವಾರ ಎರಡನೇ ಹಂತದಲ್ಲಿ 6 ರಿಂದ 8. ನೇ ತರಗತಿ ಶಾಲೆಗಳು ಆರಂಭವಾಗಿದ್ದು ಶಾಲೆ ಆರಂಭದ ಮೊದಲ ದಿನವೇ ಶಿಕ್ಷಕರು ಮಕ್ಕಳ ಕೈಗೆ ಪೊರಕೆ ಕೊಟ್ಟು ಸ್ವಚ್ಚತಾ ಕಾರ್ಯ ಮಾಡಿಸಿದ್ದಾರೆ.

ವಿದ್ಯಾರ್ಥಿಗಳ ಕೈಗೆ ಪೊರಕೆ ಕೊಟ್ಟ ಸರ್ಕಾರಿ ಶಾಲೆಯ ಶಿಕ್ಷಕರು ಶಾಲೆಯ ಆವರಣ ಹಾಗೂ ಕೊಠಡಿಗಳನ್ನು ಸ್ವಚ್ಚಗೊಳಿಸಿದ್ದಾರೆ. ಪೊರಕೆ ಹಿಡಿದು ಕಸ ಗೂಡಿಸಿದ ಎಳೆಮಕ್ಕಳು ಶಿಕ್ಷಕರು ಹೇಳಿದಂತೆ ಕೆಲಸ ಮಾಡಿದ್ದಾರೆ. ಇದಕ್ಕೂ ಮೊದಲು ಶಿಕ್ಷಕರಿಗಿಂತ ಮೊದಲೇ ವಿದ್ಯಾರ್ಥಿಗಳು ಅಗಮಿಸಿ ಶಾಲೆ ಗೇಟ್ ತೆಗೆಯುವುದನ್ನೇ ಕಾದು ನಿಂತಿದ್ದರು. ನಂತರ ಬಂದ ಶಾಲಾ ಶಿಕ್ಷಕರು ಮಕ್ಕಳಿಗೆ ಸ್ವಚ್ಚತೆ ಮಾಡುವಂತೆ ಸೂಚನೆ ನೀಡಿದರು. ಕೂಡಲೆ ಮಕ್ಕಳು ತಳಿರು ತೋರಣ ಕಟ್ಟಿ ಸಿಂಗಾರಗೊಳಿಸಲು ಮುಂದಾದರು.

ಎರಡನೇ ಹಂತದಲ್ಲಿ 6 ರಿಂದ 8 ನೇ ತರಗತಿವರೆಗೆ ಇಂದಿನಿಂದ ಶಾಲಾ ಆರಂಭವಾಗುತ್ತಿದ್ದು ಮೊದಲ ದಿನವೇ ಶಿಕ್ಚಕರು ಎಡವಟ್ಟು ಮಾಡಿಕೊಂಡಿದ್ದಾರೆ. ಈಗಾಗಲೆ ಕೊರೋನಾದಿಂದ ಭಯಗೊಂಡಿರುವ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದುಮುಂದು ನೋಡುತ್ತಿರುವಾಗ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವ ಬದಲು ಶಾಲೆ ಆರಂಭವಾದ ಮೊದಲ ದಿನವೇ ಶಿಕ್ಷಕರು ಮಕ್ಕಳ ಕೈಗೆ ಪೊರಕೆ ಕೊಟ್ಟು ಕಸ ಗುಡಿಸುತ್ತಿರುವ ವಿಚಾರ ತಿಳಿದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲೆಗಳಲ್ಲಿ ಡಿ.ಗ್ರೂಪ್ ನೌಕರರು ಇದ್ದರೂ ಕೂಡ ಶಾಲಾ ಮಕ್ಕಳ ಕೈಗೆ ಪೊರಕೆ ಕೊಟ್ಟಿದ್ದಕ್ಕೆ ಈಗಾಗಲೆ ವಿರೋಧ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿ ದೇವಿ ಪ್ರತಿಕ್ರಿಯೆ ನೀಡಿ, ಶಾಲೆ ಆರಂಭದ ಮೊದಲೇ ದಿನವೇ ವಿದಾರ್ಥಿಗಳಿಂದ ಕಸ ಗುಡಿಸಲು ಸೂಚನೆ ನೀಡಿದ ಶಿಕ್ಷಕರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಸ್ಥಳದಲ್ಲೇ ಇದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಿಪತಿಗೆ ಸೂಚನೆ ನೀಡಿದ್ದಾರೆ.

ಈಕುರಿತಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಿ ಪತಿ ಪ್ರತಿಕ್ರಿಯೆ ನೀಡಿ, ಶಾಲೆಗಳಲ್ಲಿ ಡಿ ಗ್ರೂಪ್ ನೌಕರರ ಕೊರತೆಯಿದ್ದು, ಶಿಕ್ಷಕರು ಸ್ವಚ್ಚ ಮಾಡುವ ಕೆಲಸ ಮಾಡಬೇಕಿತ್ತು ಆದರೆ ವಿದ್ಯಾರ್ಥಿಗಳ ಮೂಲಕ ಪೊರಕೆ ಹಿಡಿದು ಕಸ ಗುಡಿಸಲು ಸೂಚನೆ ನೀಡಿದ್ದರ ಬಗ್ಗೆ ಕಾರಣ ಕೇಳಿ ನೊಟೀಸ್ ಜಾರಿ ಮಾಡುವುದಾಗಿ ಹೇಳಿದ್ದಾರೆ.


Spread the love