Home Mangalorean News Kannada News ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಇನ್ನಿಲ್ಲ

ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಇನ್ನಿಲ್ಲ

Spread the love

ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಇನ್ನಿಲ್ಲ

ಉಡುಪಿ: ಶ್ವಾಸಕೋಶ ಉಸಿರಾಟ ಸಮಸ್ಯೆಯಿಂದ ಮಣಿಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ(88) ಅವರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಪೇಜಾವರ ಮಠದಲ್ಲಿ ಶ್ರೀ ಕೃಷ್ಣನಲ್ಲಿ ಲೀನರಾದರು.

ಪೇಜಾವರ ಶ್ರೀಗಳು ಕೀರ್ತಿಶೇಷರಾದ ಘೋಷಣೆಯನ್ನು ಗೋವಿಂದಾ ಹಾಗೂ ಶ್ರೀವಿಶ್ವೇಶತೀರ್ಥರ ಪಾದಾರವಿಂದಕ್ಕೆ ಗೋವಿಂದಾ ಎಂದು ಮೂರು‌ ಬಾರಿ ಹೇಳಿ 9.20ಕ್ಕೆ ಘೋಷಿಸಲಾಯಿತು.

ನ್ಯುಮೋನಿಯಾ (ಶ್ವಾಸಕೋಶ ಉಸಿರಾಟ ಸಮಸ್ಯೆ)ಯಿಂದಾಗಿ ಡಿ.20 ಶುಕ್ರವಾರ ಮುಂಜಾನೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಶ್ರೀಗಳನ್ನು ದಾಖಲಿಸಲಾಗಿತ್ತು. ತಜ್ಞ ವೈದ್ಯರ ತಂಡ ಶ್ರೀಗಳಿಗೆ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತಿದ್ದರು. ಕಳೆದ ಎಂಟು ದಿನಗಳ ನಡುವೆ ಆರೋಗ್ಯ ತುಸು ಚೇತರಿಕೆ ಕಂಡಿದ್ದರೂ ಕೃತಕ ಉಸಿರಾಟ ಮೂಲಕ ಗಂಭೀರ ಸ್ಥಿತಿಯಲ್ಲೆ ಚಿಕಿತ್ಸೆ ಮುಂದುವರೆಸಲಾಗಿತ್ತು.

ಆದರೆ, ಶುಕ್ರವಾರ ಮತ್ತು ಶನಿವಾರ ಶ್ರೀಗಳ ದೇಹ ಸ್ಥಿತಿ ಚಿಂತಾಜನಕವಾಗಿತ್ತು. ಶನಿವಾರ ಸಾಯಂಕಾಲ ಮಿದುಳು ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ವೈದ್ಯರು ತಿಳಿಸಿದ್ದರು. ಪೇಜಾವರ ಕಿರಿಯ ಶ್ರೀಗಳು ಗುರುಗಳ ಆರೋಗ್ಯ ಸುಧಾರಣೆ ಕಂಡಿಲ್ಲ. ಅವರ ಇಚ್ಛೆಯಂತೆ ಮಠಕ್ಕೆ ಕರೆದುಕೊಂಡು ಹೋಗುವುದಾಗಿ ಶನಿವಾರ ತಿಳಿಸಿದ್ದರು.

ಸ್ವಾಮೀಜಿಯ ನಿಧನದ ಕುರಿತ ಮಾಹಿತಿ ನೀಡಿದ ಉಡುಪಿ ಶಾಸಕ ರಘುಪತಿ ಭಟ್   ಶ್ರೀಗಳ ಅಂತಿಮ ದರ್ಶನದ ವ್ಯವಸ್ಥೆಯನ್ನು ಬೆಳಿಗ್ಗೆ 10  ಗಂಟೆಗೆ ಅಜ್ಜರಕಾಡು ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗಿದೆ ಹಾಗೂ ನಂತರ ಅಲ್ಲಿಂದ ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕ ತೆರಳಿ ಅಲ್ಲಿ ಸಂಜೆ ೪ ಗಂಟೆಗೆ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ,ತದನಂತರ ಬೆಂಗಳೂರಿನ ವಿದ್ಯಾಪೀಠದಲ್ಲಿ ಬೃಂದಾವನ ವಿಧಿವಿಧಾನ ಕಾರ್ಯ ನಡೆಯಲಿದೆ, ಎಂದು  ತಿಳಿಸಿದ್ದಾರೆ.


Spread the love

Exit mobile version