ಪೇಜಾವರ ಶ್ರೀಗಳಿಂದ ಕೊಡವೂರು ಗೋಶಾಲೆ ನೂತನ‌ ಕಟ್ಟಡಕ್ಕೆ ಶಿಲಾನ್ಯಾಸ

Spread the love

ಪೇಜಾವರ ಶ್ರೀಗಳಿಂದ ಕೊಡವೂರು ಗೋಶಾಲೆ ನೂತನ‌ ಕಟ್ಟಡಕ್ಕೆ ಶಿಲಾನ್ಯಾಸ

ಉಡುಪಿ: ದೇವಸ್ಥಾನಗಳಲ್ಲಿ ಶಿಲಾ ವಿಗ್ರಹ ಪ್ರತಿಮೆಗಳಲ್ಲಿ ಭಗವಂತನ ಚೈತನ್ಯವನ್ನು ತುಂಬಿ ಆರಾಧಿಸಲಾಗುತ್ತದೆ. ಗೋವುಗಳಲ್ಲಿ ದೇವಾನುದೇವತೆಗಳ ಸನ್ನಿಧಾನ ನಿತ್ಯ ಜಾಗೃತವಾಗಿರುತ್ತದೆ . ಚೈತನ್ಯ ತುಂಬಿದ ವಿಗ್ರಹದಷ್ಟೇ ಗೋವುಗಳೂ ಪ್ರಮುಖವಾಗಿವೆ . ಆದ್ದರಿಂದ ದೇವಳಗಳ ಜೀರ್ಣೋದ್ಧಾರಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಗೋಶಾಲೆಗಳ ನಿರ್ಮಾಣ , ನವೀಕರಣಗಳಿಗೂ ನೀಡಬೇಕು ಎಂದು ಗೋವರ್ಧನಗಿರಿ ಟ್ರಸ್ಟ್ ಮುಖ್ಯಸ್ಥರೂ ಹಾಗೂ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ .

ಟ್ರಸ್ಟ್ ವತಿಯಿಂದ ನಡೆಸಲ್ಪಡುತ್ತಿರುವ ಉಡುಪಿ ಕೊಡವೂರು ಸಮೀಪವಿರುವ ನಂದಗೋಕುಲ ಗೋಶಾಲೆಯ ನೂತನ ಕಟ್ಟಡಕ್ಕೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿ ಸಂದೇಶ ನೀಡಿದರು .

ಕೆ ಎಂ ಎಫ್ ಅಧ್ಯಕ್ಷ ಕೆ ರವಿರಾಜ ಹೆಗ್ಡೆ , ಆಸ್ಟ್ರೇಲಿಯಾ ದಲ್ಲಿ ಯೋಗ ಶಿಕ್ಷಕರಾಗಿರುವ ರಾಜೇಂದ್ರ ಎಂಕಣ್ಣಮೂಲೆ ಶುಭ ಕೋರಿ ಮಾತಾಡಿದರು . ಬಡಾನಿಡಿಯೂರಿನ ಬಾಲಯ್ಯ ಕುಟುಂಬಿಕರ ಪಂಜುರ್ಲಿ ಟ್ರಸ್ಟ್ ಮುಖ್ಯಸ್ಥ , ದಾನಿ ಉಮೇಶ್ ರಾವ್ , ಕೊಡವೂರು ಶಂಕರನಾರಾಯಣ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಕೆ ಸುಧೀರ್ ರಾವ್ , ನಗರಸಭಾ ಸದಸ್ಯ ವಿಜಯ್ ಕೊಡವೂರು , ಡಾ ಸರ್ವೋತ್ತಮ ಉಡುಪ , ನಾಗರಾಜ ಪುರಾಣಿಕ್ , ಇಂಜಿನಿಯರ್ ರಾಜೇಂದ್ರ ಮಯ್ಯ , ಚಂದ್ರಶೇಖರ್ , ಗೋಶಾಲೆ ನಿರ್ವಾಹಕಿ ಪ್ರಮೀಳಾ ಜೋಶಿ ಮೊದಲಾದವರು ಉಪಸ್ಥಿತರಿದ್ದು ಶಿಲಾನ್ಯಾಸ ನೆರವೇರಿಸಿದರು .

ಈ ಗೋಶಾಲೆಯು ಒಂದೂವರೆ ಎಕ್ರೆ ಪ್ರದೇಶದಲ್ಲಿ 1984 ರಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸ್ಥಾಪಿಸಿದ ಮೊದಲ ಗೋಶಾಲೆಯಾಗಿದ್ದು 150 ಗೋವುಗಳು ಪೋಷಿಸಲ್ಪಡುತ್ತಿವೆ .

ಪ್ರಸ್ತುತ ನೂತನ ಒಂದು ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಟ್ರಸ್ಟ್ ವ್ಯವಸ್ಥಾಪಕ ರಘುರಾಮಾಚಾರ್ಯ ವಿವರಿಸಿದರು .

ಸ್ಥಳದಲ್ಲೇ ದನಸಹಾಯ ನೀಡಿದ ಮಹನೀಯರು : ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಸ್ಟ್ರೇಲಿಯಾ ದ ಯೋಗ ಶಿಕ್ಷಕ ರಾಜೇಂದ್ರ ಎಂಕಣ್ಣಮೂಲೆ ಎರಡು ಲಕ್ಷರೂ , ಕೆ ಎಂ ಎಫ್ ಪರವಾಗಿ ಅಧ್ಯಕ್ಷ ರವಿರಾಜ ಹೆಗ್ಡೆ ಒಂದು ಲಕ್ಷ ರೂ ದೇಣಿಗೆ ಹಸ್ತಾಂತರಿಸಿದರು

ವಾಸುದೇವ ಭಟ್ ಪೆರಂಪಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು .‌ . ವೇಣುಗೋಪಾಲ ಸಾಮಗರು ಧಾರ್ಮಿಕ ವಿಧಿ ನೆರವೇರಿಸಿದರು. ಕೃಷ್ಣ ಭಟ್ , ವಿಷ್ಣುಮೂರ್ತಿ ಆಚಾರ್ಯ , ಪ್ರಾಣೇಶ್ ಜೋಶಿ ಸಹಕರಿಸಿದರು .


Spread the love