ಪೊನ್ನಂಪೇಟೆಯಲ್ಲಿ ಪಾಂಡಂಡ ಕುಟ್ಟಪ್ಪ ಸ್ಮರಣಾರ್ಥ ಹಾಕಿ ಹಬ್ಬ

Spread the love

ಪೊನ್ನಂಪೇಟೆಯಲ್ಲಿ ಪಾಂಡಂಡ ಕುಟ್ಟಪ್ಪ ಸ್ಮರಣಾರ್ಥ ಹಾಕಿ ಹಬ್ಬ

ಮಡಿಕೇರಿ: ಮಳೆಗಾಲ ಕಳೆಯುತ್ತಿದ್ದಂತೆಯೇ ವಿವಿಧ ಕ್ರೀಡಾ ಕೂಟಗಳಲ್ಲಿ ತೊಡಗಿಕೊಳ್ಳುತ್ತಿದ್ದ ಕೊಡಗಿನಲ್ಲಿ 2019ರ ನಂತರ ಯಾವುದೇ ರೀತಿಯ ಕ್ರೀಡಾಕೂಟಗಳು ನಡೆದಿರಲಿಲ್ಲ. ಹಲವು ದಶಕಗಳ ಕಾಲ ಯಶಸ್ವಿಯಾಗಿ ನಡೆಯುತ್ತಿದ್ದ ಕೊಡವ ಕುಟುಂಬಗಳ ಹಾಕಿ ಹಬ್ಬ ಹಲವು ಕಾರಣಗಳಿಂದ ನಡೆದಿರಲಿಲ್ಲ.

2018ರಲ್ಲಿ ನಡೆದ ಭೂಕುಸಿತದ ಬಳಿಕ ಕೊಡವ ಕುಟುಂಬಗಳ ನಡುವಿನ ಹಾಕಿ ಹಬ್ಬ ನಡೆದಿರಲಿಲ್ಲ ಎಲ್ಲವೂ ಸರಿಯಾಗಿದ್ದರೆ ಮುಂದಿನ ಬೇಸಿಗೆಯಲ್ಲಿ ಕೊಡವ ಕುಟುಂಬಗಳ ನಡುವಿನ ಹಾಕಿ ಹಬ್ಬ ನಡೆಯಬಹುದೇನೋ? ಆದರೆ ಅದಕ್ಕೂ ಮೊದಲು ಇದೇ ಪ್ರಥಮ ಬಾರಿಗೆ ಕೊಡವ ಹಾಕಿ ಅಕಾಡೆಮಿ ಕೊಡವ ಕುಟುಂಬ ತಂಡಗಳ ನಡುವೆ 5-A ಸೈಡ್ ಹಾಕಿ ಪಂದ್ಯಾವಳಿಯನ್ನು ಅ.27 ರಿಂದ ನ.6ರವರೆಗೆ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ. 180 ತಂಡಗಳು ಪಾಲ್ಗೊಳ್ಳಲಿವೆ ಎಂದು ಅಕಾಡೆಮಿಯ ನೂತನ ಆಡಳಿತ ಮಂಡಳಿ ತಿಳಿಸಿದೆ.

ಈ ಕುರಿತಂತೆ ಮಾಹಿತಿ ನೀಡಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಹಾಗೂ ಪ್ರಮುಖರು ಕೊಡವ ಹಾಕಿ ಹಬ್ಬದ ಜನಕ ಪಾಂಡಂಡ ಕುಟ್ಟಪ್ಪ (ಕುಟ್ಟಣಿ) ಅವರ ಸ್ಮರಣಾರ್ಥ ಪಂದ್ಯಾವಳಿಯನ್ನು ನಡೆಸಲಾಗುತ್ತಿದ್ದು, 2019ರಿಂದ ಇಲ್ಲಿಯವರೆಗೆ ಕೋವಿಡ್ ಹಾಗೂ ಅತಿವೃಷ್ಟಿ ಸಂಕಷ್ಟದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಯಾವುದೇ ಪಂದ್ಯಾವಳಿಗಳನ್ನು ನಡೆಸಲು ಸಾಧ್ಯವಾಗಲಿಲ್ಲ. 2020 ಮೇ 7 ರಂದು ಹಾಕಿ ಹಬ್ಬದ ಜನಕ ಪಾಂಡಂಡ ಕುಟ್ಟಪ್ಪ (ಕುಟ್ಟಣಿ) ಅವರು ವಿಧಿವಶರಾದರು. ಈ ಎಲ್ಲಾ ಕಾರಣಗಳಿಂದ ಪ್ರಸ್ತುತ ಇದೇ ಮೊದಲ ಬಾರಿಗೆ ಕೊಡವ ಕುಟುಂಬಗಳ ನಡುವಿನ ಹಾಕಿ ನಮ್ಮೆಯನ್ನು ನಡೆಸಲು ನಿರ್ಧರಿಸಲಾಗಿದೆ. ಸುಮಾರು 15ಲಕ್ಷ ರೂ.ಗಳನ್ನು ಖರ್ಚು ಮಾಡಲಾಗುತ್ತಿದ್ದು, ನಗದು ಬಹುಮಾನದ ಒಟ್ಟು ಮೊತ್ತ 2ಲಕ್ಷ ರೂ.ಗಳಾಗಿದೆ.

ಇದರಲ್ಲಿ ಮೊದಲನೇ ಬಹುಮಾನ ಒಂದು ಲಕ್ಷ ರೂಪಾಯಿಯನ್ನು ಪಾಂಡಂಡ ಕುಟ್ಟಪ್ಪ ಅವರ ಪತ್ನಿ ಲೀಲಾ ಕುಟ್ಟಪ್ಪ ಅವರು ನೀಡುತ್ತಿದ್ದಾರೆ. 2ನೇ ಬಹುಮಾನ 50ಸಾವಿರ ರೂ., ಸೆಮಿಫೈನಲ್ ನಲ್ಲಿ ಸೋತ ಎರಡು ತಂಡಗಳಿಗೆ ತಲಾ 15ಸಾವಿರ ರೂ. ಮತ್ತು ಕ್ವಾರ್ಟರ್ ಫೈನಲ್ಸ್ ನಲ್ಲಿ ಸೋತ ನಾಲ್ಕು ತಂಡಗಳಿಗೆ ತಲಾ 5 ಸಾವಿರ ರೂ.ಗಳನ್ನು ನೀಡಲಾಗುವುದು. ಕೊಡವ ಕುಟುಂಬಗಳ ನಡುವಿನ ಈ ಹಾಕಿ ನಮ್ಮೆಗೆ ಎಲ್ಲಾ ಹಾಕಿ ಪ್ರೇಮಿಗಳು ಹಲವು ವಿಧದಲ್ಲಿ ನಮಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದರೊಂದಿಗೆ ಬಹುಮಾನದ ಪ್ರಾಯೋಜಕತ್ವವನ್ನು ಕೂಡ ವಹಿಸಿಕೊಳ್ಳುತ್ತಿದ್ದಾರೆ. ಹಾಕಿ ಕರ್ನಾಟಕ ಸಂಪೂರ್ಣ ಸಹಕಾರ ನೀಡುತ್ತಿದ್ದು, ಹಾಕಿಪಟು ಎ.ಬಿ.ಸುಬ್ಬಯ್ಯ ಅವರು ಪಂದ್ಯಾವಳಿಯ ಬೆಂಬಲಕ್ಕೆ ನಿಂತಿರುವುದಾಗಿ ಹೇಳಿದರು.

ಅ.27ರಂದು ಬೆಳಗ್ಗೆ 10 ಗಂಟೆಗೆ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ನಡೆಯಲಿದೆ. ನ.6ರಂದು ಬೆಳಗ್ಗೆ ಎರಡು ಸೆಮಿಫೈನಲ್ ಪಂದ್ಯಾವಳಿಗಳು ನಡೆಯಲಿವೆ. ಅದೇ ದಿನ ಮಧ್ಯಾಹ್ನ 3.30 ಗಂಟೆಗೆ ಫೈನಲ್ ಪಂದ್ಯಾವಳಿ ಹಾಗೂ ಬಹುಮಾನ ವಿತರಣಾ ಸಮಾರಂಭ  ನಡೆಯಲಿದೆ. ನೋಂದಣಿ ಪ್ರಕ್ರಿಯೆ ಅ.1 ರಿಂದ ಆರಂಭಗೊಳ್ಳಲಿದೆ. 180 ತಂಡಗಳು ನೋಂದಣಿ ಮಾಡಿದ ನಂತರ ಬರುವ ತಂಡಗಳಿಗೆ ಅವಕಾಶ ಇರುವುದಿಲ್ಲ. ಎಲ್ಲಾ ಪಂದ್ಯಗಳು ನಾಕೌಟ್ ಮಾದರಿ ನಡೆಯಲಿದೆ ಎಂದರು. ಮಾಹಿತಿಗೆ ಪಾಂಡಂಡ ಕೆ.ಬೋಪಣ್ಣ (98452 55282), ಮಾಳೇಟಿರ ಎ.ಶ್ರೀನಿವಾಸ್ (91108 08009) ಹಾಗೂ ಬಡ್ಕಡ ಡೀನಾ ಪೂವಯ್ಯ (95356 02703) ರನ್ನು ಸಂಪರ್ಕಿಸಬಹುದಾಗಿದೆ.


Spread the love

Leave a Reply

Please enter your comment!
Please enter your name here