
ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಸಹೋದರರ ಅಪಹರಣ ಪ್ರಕರಣ – ಐವರ ಬಂಧನ
ಮಂಗಳೂರು: ಉಪ್ಪಿನಂಗಡಿಯ ಸಹೋದರರ ಕಿಡ್ನ್ಯಾಪ್ ಕೇಸ್ ಮತ್ತು ಅರ್ಕುಳದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣವನ್ನು ಬೇಧಿಸಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಉಪ್ಪಿನಂಗಡಿ ಸಹೋದರರ ಅಪಹರಣಕ್ಕೆ ಕುಮ್ಮಕ್ಕು ನೀಡಿರುವ ರೌಡಿಶೀಟರ್ ಒಬ್ಬನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಂಧಿತರನ್ನು ಉಪ್ಪಿನಂಗಡಿಯ ಅಬೂಬಕ್ಕರ್ ಸಿದ್ದಿಕ್ ಯಾನೆ ಜೆಸಿಬಿ ಸಿದ್ದಿಕ್ (39), ಬಂಟ್ವಾಳದ ಕಲಂದರ್ ಶಾಫಿ ಗಡಿಯಾರ (22), ಬಂಟ್ವಾಳದ ಇರ್ಫಾನ್ (38), ಪಾಂಡೇಶ್ವರದ ಮೊಹಮ್ಮದ್ ರಿಯಾಜ್ (33) ಮತ್ತು ಬೆಳ್ತಂಗಡಿಯ ಮೊಹಮ್ಮದ್ ಇರ್ಷಾದ್ (28) ಎಂದು ಗುರುತಿಸಲಾಗಿದೆ.
ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪೆರ್ನೆ ಬಳಿ ವಿದೇಶದಿಂದ ಬಂದ ಸಹೋದರರಿಬ್ಬರನ್ನು ಗುರುವಾರ ಅಪಹರಿಸಿ ಹಲ್ಲೆ ನಡೆಸಿದ ದುಷ್ಕರ್ಮಿಗಳು ಅವರಲ್ಲಿ ತಮ್ಮನನ್ನು ಒತ್ತೆ ಇರಿಸಿಕೊಂಡು ಹಣ ತರುವಂತೆ ಬೇಡಿಕೆಯಿಟ್ಟು ಅಣ್ಣನನ್ನು ಮನೆಗೆ ಕಳುಹಿಸಿದ್ದರು. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಣ್ಣ ನಿಜಾಮುದ್ದೀನ್ ಮತ್ತು ತಮ್ಮ ಶಾರುಕ್ ನನ್ನು ಅಪಹರಿಸಲಾಗಿತ್ತು.
ಗುರುವಾರ ತಡರಾತ್ರಿ ಮಂಗಳೂರು ಗ್ರಾಮಾಂತರ ವ್ಯಾಪ್ತಿಯ ಅರ್ಕುಳ ಗ್ರಾಮದ ತುಪ್ಪೆಕಲ್ಲು ಎಂಬಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಅಂಗಡಿ ಮತ್ತು ಪ್ರದೀಪ್ ಎಂಬವರು ಗಸ್ತು ತಿರುಗುತ್ತಿದ್ದರು. ಈ ವೇಳೆ ರೈಲ್ವೆ ಹಳಿ ಬಳಿ ಕೆಲವರು ಮಾತನಾಡುತ್ತಿದ್ದದ್ದನ್ನು ಕಂಡು ವಿಚಾರಿಸಲು ಹೋದಾಗ ಅವರು ಪೊಲೀಸರ ಮೇಲೆ ಕಲ್ಲು ಎಸೆದು ಹಲ್ಲೆ ಮಾಡಿ, ಕಾರು ಹಾಯಿಸಿ ಕೊಲೆ ಯತ್ನ ನಡೆಸಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಮಂಗಳೂರು ಪೊಲೀಸರು ಸಿದ್ದಿಕ್, ಕಲಂದರ್ ಶಾಫಿ ಗಡಿಯಾರ, ಇರ್ಫಾನ್ ಮತ್ತು ಮೊಹಮ್ಮದ್ ಇರ್ಷಾದ್ ನನ್ನು ದಸ್ತಗಿರಿ ಮಾಡಿದ್ದರು. ಇವರನ್ನು ವಿಚಾರಣೆ ಮಾಡುವ ವೇಳೆ ಉಪ್ಪಿನಂಗಡಿ ಕಿಡ್ನಾಪ್ ರಹಸ್ಯ ಹೊರಬಿದ್ದಿದೆ.
ಐವರು ಆರೋಪಿಗಳ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನ ರೌಡಿ ಶೀಟರ್ ಒಬ್ಬನ ನಿರ್ದೇಶನದ ಮೇರೆಗೆ ಶಾರುಖ್ ನನ್ನು ಕಿಡ್ನಾಪ್ ಮಾಡಿದೆ. ಪ್ರಮುಖ ಆರೋಪಿಯನ್ನು ಇನ್ನಷ್ಟೆ ಬಂಧಿಸಬೇಕಿದೆ. ಈ ರೌಡಿ ಶೀಟರ್ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ಮಾಹಿತಿ ನೀಡಿದರು.