ಪೊಲೀಸ್ ಗೆ ಸೇರುವವರಿಗೆ ಅರ್ಪಣಾ ಮನೋಭಾವ ಅಗತ್ಯ

Spread the love

ಪೊಲೀಸ್ ಗೆ ಸೇರುವವರಿಗೆ ಅರ್ಪಣಾ ಮನೋಭಾವ ಅಗತ್ಯ

ಮೈಸೂರು: ಪೊಲೀಸ್ ಇಲಾಖೆಗೆ ಸೇರ ಬಯಸುವ ಅಭ್ಯರ್ಥಿಗಳು ಸಾರ್ವಜನಿಕ ಸೇವೆಗೆ ತಮ್ಮ ಜೀವನ ಅರ್ಪಿಸಿಕೊಳ್ಳುವ ಮನೋಭಾವ ಹೊಂದಿರಬೇಕು ಎಂದು ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಉಪ ಆಯುಕ್ತ ಪ್ರದೀಪ್‌ಗುಂಟಿ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪಿಎಸ್‌ಐ ಹುದ್ದೆಗಳ ನೇಮಕಾತಿ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ಎರಡು ಅಪರಾಧ ಪ್ರಕರಣಗಳು ಇಡೀ ದೇಶದ ಗಮನ ಸೆಳೆದವು. ಮೂರೇ ದಿನದಲ್ಲಿ ಪ್ರಕರಣ ಬೇಧಿಸಿದಾಗ ಮೈಸೂರು ಪೊಲೀಸರು ಅತ್ಯುತ್ತಮ ಎನ್ನುವುದು ದೃಢವಾಯಿತು. ಇಂಥ ಸನ್ನಿವೇಶದಲ್ಲಿ ಯಾರಿಗಾದರೂ ನಾನೂ ಪೊಲೀಸ್ ಇಲಾಖೆ ಸೇರಬೇಕು ಅನ್ನಿಸದೇ ಇರದು ಎಂದರು.

ಮೈಸೂರಿನಲ್ಲಿ ನಡೆದ ಎರಡು ಅಪರಾಧ ಕೃತ್ಯಗಳು ಇಡೀ ದೇಶದ ಗಮನ ಸೆಳೆದಿದ್ದವು. ಈ ಸಂದರ್ಭ ಎದುರಾದ ಪರಿಸ್ಥಿತಿಯನ್ನು ನಾವು ಸವಾಲಾಗಿ ತೆಗೆದುಕೊಂಡು ಪ್ರಕರಣವನ್ನು ಮೂರ್ನಾಲ್ಕು ದಿನಗಳಲ್ಲಿ ಭೇದಿಸಿ ಆರೋಪಿಗಳನ್ನು ಬಂಧಿಸಿದೆವು. ಇದರಿಂದ ನಮ್ಮ ಕೆಲಸದ ಮೇಲೆ ನಮಗೆ ತೃಪ್ತಿ ಒಂದೆಡೆಯಾದರೆ ಎಂತಹ ಪರಿಸ್ಥಿತಿ ಎದುರಾದರೂ ನಿಭಾಯಿಸುವ ಛಲ ಹುಟ್ಟುತ್ತದೆ. ಪೊಲೀಸ್ ಇಲಾಖೆ ಸೇರುವವರಿಗೂ ಆಸಕ್ತಿ ಬಂದೇ ಬರುತ್ತದೆ ಎಂದು ತಮ್ಮ ಅನುಭವಗಳನ್ನು ಬಿಡಿಸಿಟ್ಟರು.

ಸಮಾಜದಲ್ಲಿ ಪೊಲೀಸರ ಮೇಲೆ ಅಪಾರ ಗೌರವವಿದೆ. ಜೊತೆಗೆ ಸರ್ಕಾರವೂ ಇಲಾಖೆಗೆ ವಿಶೇಷ ಒತ್ತು ನೀಡುತ್ತಿದೆ. ಪೊಲೀಸರ ಪಾತ್ರ ಕೇವಲ ಇಲಾಖೆಗೆ ಸೀಮಿತವಾಗದೇ ಸಮಾಜದ ಎಲ್ಲಾ ಸ್ತರ ಹಾಗೂ ಇಲಾಖೆಗಳಲ್ಲೂ ಚಾಚಿಕೊಂಡಿದೆ. ಜನರೊಂದಿಗೆ ನೇರ ಸಂಪರ್ಕದಲ್ಲಿರುವ, ಅವರ ಕಷ್ಟ ಕಾರ್ಪಣ್ಯಗಳನ್ನು ಹತ್ತಿರದಿಂದ ಬಲ್ಲವರು ಪೊಲೀಸರು ಮಾತ್ರ. ಈ ನಿಟ್ಟಿನಲ್ಲಿ ಇಲಾಖೆ ಸೇರ ಬಯಸುವ ಅಭ್ಯರ್ಥಿಗಳು ಸಾರ್ವಜನಿಕ ಸೇವೆಗೆ ತಮ್ಮ ಜೀವನ ಅರ್ಪಿಸಿಕೊಳ್ಳುವ ಮನೋಭಾವ ಇಟ್ಟುಕೊಂಡು ಬರಬೇಕು ಎಂದು ಹೇಳಿದರು.

ವಿದ್ಯಾರ್ಥಿ ಜೀವನದ ನಂತರ ವೃತ್ತಿ ಜೀವನದೆಡೆಗೆ ಹೋಗಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಈ ಸಂದರ್ಭ ಗೆಳೆಯರು, ಸಾಮಾಜಿಕ ಮಾಧ್ಯಮಗಳಲ್ಲೇ ಸಮಯ ಕಳೆಯದೇ, ಅನಗತ್ಯವಾಗಿ ಓಡಾಡದೇ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ತರಬೇತಿ ಶಿಬಿರಗಳಲ್ಲಿ ಮಾರ್ಗದರ್ಶಕರು ನೀಡುವ ಸಲಹೆಗಳನ್ನು ಪಾಲಿಸಿ ಎಂದು ಸಲಹೆ ನೀಡಿದರು. ಪೊಲೀಸ್ ಹುದ್ದೆಗಳ ನೇಮಕಾತಿ ಪರೀಕ್ಷೆಯೇ ನಿಮಗೆ ಅಂತಿಮವಾಗಿರುವುದಿಲ್ಲ. ವೃತ್ತಿಗೆ ಸೇರಿದ ನಂತರ ನಿತ್ಯವೂ ಒಂದೊಂದು ಸವಾಲು ಮತ್ತು ಪರೀಕ್ಷೆಗಳು ಎದುರಾಗುತ್ತವೆ. ಆ ಸಂದರ್ಭ ಅವುಗಳನ್ನು ಸಮರ್ಥವಾಗಿ ಎದುರಿಸುವ ಮತ್ತು ನಿಭಾಯಿಸುವ ಚಾಕಚಕ್ಯತೆಯನ್ನು ನೀವು ಬೆಳೆಸಿಕೊಳ್ಳಬೇಕು. ಇಲಾಖೆ ಸೇರಿದ ಮೇಲೆ ನಿಮ್ಮಲ್ಲಿರುವ ಕೌಶಲ್ಯ ಹಾಗೂ ನೈಪುಣ್ಯತೆ ಆಧಾರದಲ್ಲಿ ಇಲಾಖೆಯ ವಿವಿಧ ವಿಭಾಗಗಳಲ್ಲಿ ನೀವು ಸೇವೆ ಸಲ್ಲಿಸುವ ಅವಕಾಶವಿರುತ್ತದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ಮಾತನಾಡಿ, ಶಿಕ್ಷಣ ಪೂರೈಸಿದ ನಂತರ ವಿದ್ಯಾರ್ಥಿಗಳು ಒಂದಲ್ಲ ಒಂದು ಗುರಿ ಇಟ್ಟುಕೊಂಡಿರುತ್ತಾರೆ. ಆ ಗುರಿ ಮುಟ್ಟುವ ಮಾರ್ಗ ದೊಡ್ಡದಿರುತ್ತದೆ. ಅದನ್ನು ಕ್ರಮಿಬೇಕಾದರೆ ಏಕಾಗ್ರತೆ, ಶ್ರದ್ಧೆ, ಕಠಿಣ ಪರಿಶ್ರಮ ಹಾಗೂ ನಿರಂತರ ಅಧ್ಯಯನ ಶೀಲತೆ ಬಹಳ ಮುಖ್ಯವಾಗಿರುತ್ತದೆ ಇಂದು ಸಾಧನೆಗೆ ಮತ್ತು ಕಲಿಕೆಗೆ ಬಹಳಷ್ಟು ಮಾರ್ಗಗಳಿವೆ. ಜೊತೆಗೆ ತಂತ್ರಜ್ಞಾನ ಬಹಳಷ್ಟು ಬೆಳೆದಿದೆ. ಇದನ್ನು ಬಳಸಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಆರ್. ರಾಜಣ್ಣ, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ.ಎಂ. ಮಹದೇವನ್, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿಬ್ಬಂದಿಗಳಾದ ಕೆ.ಜಿ.ಕೊಪ್ಪಲು ಗಣೇಶ್, ಸಿದ್ದೇಶ್ ಹೊನ್ನೂರು ಇತರರು ಇದ್ದರು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿರುವ ಅಭ್ಯರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.


Spread the love