ಪೊಲೀಸ್ ಬಲೆಗೆ ಬಿದ್ದ ಫಾಝಿಲ್ ಹಂತಕರು, ಆರು ಮಂದಿಯ ಬಂಧನ

Spread the love

 ಪೊಲೀಸ್ ಬಲೆಗೆ ಬಿದ್ದ ಫಾಝಿಲ್ ಹಂತಕರು, ಆರು ಮಂದಿಯ ಬಂಧನ

 

ಮಂಗಳೂರು: ಸುರತ್ಕಲ್ ಸಮೀಪದ ಮಂಗಳಪೇಟೆ ನಿವಾಸಿ ಮಹಮ್ಮದ್ ಫಾಝಿಲ್ ಹತ್ಯೆಗೆ ಸಂಬಂಧಿಸಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

 

ಘಟನೆಗೆ ಸಂಬಂಧಿಸಿದಂತೆ ದುಷ್ಕರ್ಮಿಗಳು ಹತ್ಯೆಗೆ ಬಳಸಿದ್ದ ಕಾರಿನ ನೋಂದಣಿ‌ ಸಂಖ್ಯೆ ಪತ್ತೆ ಹಚ್ಚಿ ಅದರ‌ ಮಾಲಕ ಅಜಿತ್ ಕ್ರಾಸ್ತ ಎಂಬಾತನನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಹೆಚ್ಚುವರಿ ಹಣ ಪಡೆದು ಕಾರನ್ನು ಬಾಡಿಗೆ ರೂಪದಲ್ಲಿ ನೀಡಿರುವುದಾಗಿ ಮಾಹಿತಿ ನೀಡಿದ್ದ. ಅಜಿತ್ ಕ್ರಾಸ್ತಾ ನೀಡಿದ ಮಾಹಿತಿಯಂತೆ ಕಾರ್ಯ ಪ್ರವೃತ್ತರಾದ ಪೊಲೀಸ್‌ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕಮಿಷನರ್ ಶಶಿಕುಮಾರ್, ಜುಲೈ 28ರಂದು ಫಾಝಿಲ್ ಮೇಲೆ ಕಾರಿನಲ್ಲಿ ಬಂದು ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಡಿಸಿಪಿ ಅನ್ಶು ಕುಮಾರ್ ನೇತೃತ್ವದಲ್ಲಿ ಏಳೆಂಟು ತಂಡದಲ್ಲಿ ತನಿಖೆ ಮಾಡಲಾಗಿತ್ತು. ಹತ್ಯೆಗೆ ಬಳಿಸಿದ ಇಯಾನ್ ಕಾರಿನ ಮಾಲಕನಿಂದ ಆರೋಪಿಗಳ ಮಾಹಿತಿ ಸಿಕ್ಕಿತು.‌ ಹೆಚ್ಚು ಹಣದಾಸೆಗೆ ಅಜಿತ್ ಕ್ರಾಸ್ತಾ ಕಾರು ನೀಡಿದ್ದ. ಮೂರು ದಿನಕ್ಕೆ ಹದಿನೈದು ಸಾವಿರ ಕೊಡುವುದಾಗಿ ಆರೋಪಿಗಳು ಹೇಳಿದ್ದರು ಎಂದು ಮಾಹಿತಿ ನೀಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದೇವೆ. ಆರೋಪಿಗಳಾದ ಬಜಪೆಯ ಸುಹಾಸ್ ಶೆಟ್ಟಿ, ಮೋಹನ್ ಆಲಿಯಾಸ್ ಮೋಹನ್ ಸಿಂಗ್, ಕಾಟಿಪಳ್ಳ ನಿವಾಸಿ ಶ್ರೀನಿವಾಸ್, ಕುಳಾಯಿ ನಿವಾಸಿ ಗಿರಿಧರ್, ಕಾಟಿಪಳ್ಳ ನಿವಾಸಿ ಅಭಿಷೇಕ್ ಮತ್ತು ದೀಕ್ಷಿತ್ ನನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುಹಾಸ್ ಪ್ಲ್ಯಾನ್: ಕೃತ್ಯಕ್ಕೆ ಸುಹಾಸ್ ಶೆಟ್ಟಿ ಮೊದಲು ಅಭಿಷೇಕ್ ನೊಂದಿಗೆ ಯೋಜನೆ ರೂಪಿಸಿದ್ದ. ಅನಂತರ ಉಳಿದವರನ್ನು ಸೇರಿಸಿಕೊಂಡಿದ್ದಾರೆ. ಯಾರಿಗೆ ಹೊಡೆಯುವುದು ಎಂದು ಚರ್ಚಿಸಿದಾಗ ಫಾಝಿಲ್ ಗೆ ಹೊಡೆಯಲು ನಿರ್ಧರಿಸಿದ್ದಾರೆ. ಕೃತ್ಯಕ್ಕೆ ಮೂರು ತಲವಾರು ಉಪಯೋಗಿಸಿದ್ದಾರೆ. ಕೃತ್ಯ ನಡೆಸಿದ ದಿನ ಫಾಝಿಲ್ ಗಾಗಿ ಜಂಕ್ಷನ್ ನಲ್ಲಿ ಓಡಾಡಿದ್ದರು. ನಂತರ ಅಂಗಡಿ ಬಳಿ ಫಾಝಿಲ್ ಸಿಕ್ಕಾಗ ಆತನ ಮೇಲೆ ಸುಹಾಸ್, ಮೋಹನ್ ಮತ್ತು ಅಭಿಷೇಕ್ ನೇರವಾಗಿ ಕೊಲೆ ನಡೆಸಿದ್ದಾರೆ.

ಗುರುವಾರ ರಾತ್ರಿ ಕೃತ್ಯ ನಡೆಸಿದ ಆರೋಪಿಗಳು ಪಲಿಮಾರು ರಸ್ತೆಯ ಮೂಲಕ ಪಡುಬಿದ್ರಿ ಸಮೀಪದ ಇನ್ನಾಕ್ಕೆ ಹೋಗಿ ಅಲ್ಲಿ ಕಾರನ್ನಿಟ್ಟು, ಅಲ್ಲಿಂದ ಬೇರೆ ಕಾರಿನಲ್ಲಿ ತೆರಳಿದ್ದರು. ತನಿಖೆಯ ಬಳಿಕ ಇಂದು‌ ಬೆಳಗ್ಗೆ ಖಚಿತ ಮಾಹಿತಿ ಮೇರೆಗೆ ಉದ್ಯಾವರ ಸಮೀಪ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಶಶಿಕುಮಾರ್ ಹೇಳಿದರು.

ಬೇರೆ ಗುರಿಯಲ್ಲ: ಸುರತ್ಕಲ್ ನಲ್ಲಿ ಬೇರೆಯವರನ್ನು ಹತ್ಯೆ ಮಾಡಲು ಹೋಗಿ ಫಾಜಿಲ್ ಕೊಲೆ ಮಾಡಿದ್ದರು ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಈ ಹಂತಕರು ಫಾಝಿಲ್ ಗೆ ಗುರಿ ಇಟ್ಟಿದ್ದರು. ಕೃತ್ಯಕ್ಕೆ ಮೊದಲು ಚರ್ಚೆಯ ವೇಳೆ ಆರರಿಂದ ಏಳು ಜನಕ್ಕೆ ಹೊಡೆಯುವ ಬಗ್ಗೆ ನಿರ್ಧರಿಸಿ ಅಂತಿಮವಾಗಿ ಫಾಝಿಲ್ ಗೆ ಗುರಿ ಇಟ್ಟಿದ್ದರು ಎಂದರು.

ಈ ಆರೋಪಿಗಳು ಫಾಝಿಲ್ ನನ್ನೇ ಯಾಕೆ ಟಾರ್ಗೆಟ್ ಮಾಡಿದ್ದರು ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. ಪ್ರಮುಖ ಆರೋಪಿ ಸುಹಾಸ್ ಮೇಲೆ ಒಂದು ಕೊಲೆ ಸಹಿತ ನಾಲ್ಕು ಪ್ರಕರಣಗಳಿವೆ.

ಬೆಳ್ಳಾರೆ ಪ್ರವೀಣ್ ಘಟನೆ ನಡೆದ ದಿನ ರಾತ್ರಿ ಮತ್ತು ಮರುದಿನ ಯಾರಿಗಾದರೂ ಹೊಡೆಯಬೇಕೆಂದು‌ ನಿರ್ಧರಿಸಿದ್ದರು. ಆದರೆ ಪ್ರವೀಣ್ ಕೊಲೆಗೆ ಪ್ರತೀಕಾರಕ್ಕಾಗಿಯೇ ನಡೆದಿದೆ ಎಂಬುದನ್ನು ಈಗ ಸ್ಪಷ್ಟವಾಗಿ ಹೇಳಲಾಗದು ಎಂದು ಕಮಿಷನರ್ ಹೇಳಿದರು.


Spread the love

Leave a Reply

Please enter your comment!
Please enter your name here