
ಪೋಪ್ ಬೆನೆಡಿಕ್ಟ್ 16 ಅವರ ನಿಧನಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಸಂತಾಪ
ಮಂಗಳೂರು: ಕೆಥೋಲಿಕ್ ಕ್ರೈಸ್ತರ ನಿವೃತ್ತ ಪರಮ ಗುರು ಪೋಪ್ ಬೆನೆಡಿಕ್ಟ್ 16 ಅವರ ನಿಧನಕ್ಕೆ ಮಂಗಳೂರಿನ ಬಿಷಪ್ ಅತಿ ನlವಂದನೀಯ ಪೀಟರ್ ಪಾವ್ಲ್ ಸಲ್ದಾನ ಅವರು ಮಂಗಳೂರು ಧರ್ಮಪ್ರಾಂತ್ಯದ ಸಮಸ್ತ ಕೆಥೋಲಿಕ್ ಕ್ರೈಸ್ತರ ಪರವಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ.
2005 ಏಪ್ರಿಲ್ 19 ರಿಂದ 2013 ಫೆಬ್ರರಿ 28 ರ ತನಕ ಪೋಪ್ ಆಗಿ ಸಲ್ಲಿಸಿದ ಸೇವೆಯನ್ನು ಬಿಷಪ್ ಸ್ಮರಿಸಿದ್ದು, ಅವರ ಗೌರವಾರ್ಥ ಇಂದು ಎರಡು ಬಾರಿ ಹಾಗೂ ನಾಳೆ ಮತ್ತು ಅಂತ್ಯ ಸಂಸ್ಕಾರ ನಡೆಯುವಂದು ದಿನಕ್ಕೆ ತಲಾ ಮೂರು ಬಾರಿ ಚರ್ಚ್ ಗಂಟೆ ಭಾರಿಸುವಂತೆ ಸೂಚನೆ ನೀಡಿದ್ದಾರೆ.
ಪೋಪ್ ಬೆನೆಡಿಕ್ಟ್ ಅವರ ಪಾರ್ಥಿವ ಶರೀರದ ಅಂತ್ಯವಿಧಿಗಳು ಜನವರಿ 5 ರಂದು ರೋಮ್ ನ ಸೈಂಟ್ ಪೀಟರ್ ಸ್ಕ್ವೇರ್ ನಲ್ಲಿ ಬೆಳಗ್ಗೆ 9.30 ಗಂಟೆಗೆ (ಭಾರತೀಯ ಕಾಲ ಮಾನ ಮಧ್ಯಾಹ್ನ 2 ಗಂಟೆ) ನಡೆಯಲಿದೆ.ಇಂದು ಮತ್ತು ನಾಳೆ ಆರಾಧನೆಯ ಸಂದರ್ಭದಲ್ಲಿ ದಿವಂಗತ ಪೋಪ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಪೋಪ್ ಬೆನೆಡಿಕ್ಟ್ ಅವರು ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಈಗಿನ ಪೋಪ್ ಫ್ರಾನ್ಸಿಸ್ ಅವರು ಆಗಿಂದಾಗ್ಗೆ ಬೆನೆಡಿಕ್ಟ್ ಅವರ ನಿವಾಸಕ್ಕೆ ತೆರಳಿ ಅವರ ಆರೋಗ್ಯ ವಿಚಾರಿಸುತ್ತಿದ್ದರು. ಇತ್ತೀಚೆಗೆ ಅವರ ಆರೋಗ್ಯ ವಿಷಮ ಸ್ಥಿತಿಗೆ ತಲುಪಿದಾಗ ಡಿಸೆಂಬರ್ 28 ರಂದು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಪೋಪ್ ಫ್ರಾನ್ಸಿಸ್ ಸಾರ್ವಜನಿಕವಾಗಿ ಕರೆ ನೀಡಿದ್ದರು.
ಪೋಪ್ ಬೆನೆಡಿಕ್ಟ್ ಅವರು ಹೆಸರಾಂತ ದೇವ ಶಾಸ್ತ್ರಜ್ಞ ರಾಗಿದ್ದರು ಮಾತ್ರವಲ್ಲದೆ ವಿದ್ವಾಂಸರೂ ಆಗಿದ್ದರು. ಈ ಕುರಿತಂತೆ ಅನೇಕ ಲೇಖನಗಳನ್ನು ಬರೆದಿದ್ದಾರೆ. ಪರಿಸರ ಸಂರಕ್ಷಣೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ದೇವರ ಮೇಲೆ ಅಪಾರ ಪ್ರೀತಿ ಮತ್ತು ವಿಶ್ವಾಸ ಹೊಂದಿದ್ದರು. ಅವರ ನಿಧದಿಂದಾಗಿ ಮಹಾನ್ ವ್ಯಕ್ತಿಯನ್ನು ಕಳೆದು ಕೊಂಡಿದ್ದೇವೆ ಎಂದು ಬಿಷಪ್ ಪೀಟರ್ ಪಾವ್ಲ್ ಸಲ್ದಾನ ಅವರು ತಿಳಿಸಿದ್ದಾರೆ