ಪೌರಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣದ ಚಿಂತನೆ

Spread the love

ಪೌರಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣದ ಚಿಂತನೆ

ಚಾಮರಾಜನಗರ: ರಾಜ್ಯದ ಎಲ್ಲ ಪೌರಕಾರ್ಮಿಕರ ಮಕ್ಕಳಿಗೂ 1ನೇ ತರಗತಿಯಿಂದ ಪದವಿವರೆಗೂ ಉಚಿತ ಶಿಕ್ಷಣ ಕೊಡಿಸುವುದು ಸೇರಿದಂತೆ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನೀಡುವ ಬಗ್ಗೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಚಿಂತನೆ ನಡೆಸಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ. ಶಿವಣ್ಣ (ಕೋಟೆ) ಹೇಳಿದ್ದಾರೆ.

 

ಚಾಮರಾಜನಗರದಲ್ಲಿ ಮಾತನಾಡಿದ ಅವರು, ಕೆ.ಎಸ್.ಎಸ್ ಹಾಗೂ ಎ.ಎಸ್.ಎಸ್ ಗೂ ಕೋಚಿಂಗ್ ನೀಡಲು ಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದರು.

ಚಾಮರಾಜನಗರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ವೈಜ್ಞಾನಿಕ ಆರೋಗ್ಯ ಪರಿಕರಗಳ ಸುರಕ್ಷಾ ಕಿಟ್ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಕೋವಿಡ್ ತಡೆಯುವ ಸಂದರ್ಭದಲ್ಲಿ ಪ್ರಮುಖವಾಗಿ ಪೌರಕಾರ್ಮಿಕರ ಹಿತಕಾಯುವುದು ನಗರ ಸ್ಥಳೀಯ ಸಂಸ್ಥೆಗಳ ಆದ್ಯತಾ ಕೆಲಸವಾಗಿದೆ. ಕೋವಿಡ್ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ನೀಡುವ ಸುರಕ್ಷಾ ಕಿಟ್‌ಗಳು ಉತೃಷ್ಠ ಗುಣಮಟ್ಟದ್ದಾಗಿರಬೇಕು ಎಂದರು.

ಪೌರಕಾರ್ಮಿಕರಿಗೆ ಕೋವಿಡ್ ಲಸಿಕಾಕರಣ ಕಾರ್ಯದಲ್ಲಿ ಮೊದಲ ಡೋಸ್ ನೀಡಿಕೆಯಲ್ಲಿ ಶೇ. 80ರಷ್ಟು ಗುರಿ ಸಾಧಿಸಲಾಗಿದ್ದು, ಎರಡನೇ ಡೋಸ್ ನೀಡಿಕೆಯಲ್ಲೂ ಪ್ರಗತಿ ಕಾಣಬೇಕಿದೆ. ಯಾವುದೇ ಪೌರಕಾರ್ಮಿಕರು ಲಸಿಕೆಯಿಂದ ವಂಚಿತರಾಗದಂತೆ ಅಧಿಕಾರಿಗಳು ಗಮನಹರಿಸಬೇಕು. ಪೌರಕಾರ್ಮಿಕರ ಸಮಸ್ಯೆಗಳನ್ನು ಲಘುವಾಗಿ ಪರಿಗಣಿಸದೇ ಪರಿಹರಿಸಿಕೊಳ್ಳಲು ವಿಶೇಷ ಕ್ರಮವಹಿಸಬೇಕು ಎಂದು ಕಟ್ಟುನಿಟ್ಟಾಗಿ ನಿರ್ದೇಶನ ನೀಡಿದರು.

ಯಾವುದೇ ಪೌರಕಾರ್ಮಿಕರು ಕೋವಿಡ್ ಅಥವಾ ಕೋವಿಡೇತರ ಕಾರಣದಿಂದ ಮರಣ ಹೊಂದಿದಲ್ಲಿ ಅವರ ಕುಟುಂಬಕ್ಕೆ ವಿಳಂಬ ಮಾಡದೇ ಸಕಾಲದಲ್ಲಿ ಇ.ಎಸ್.ಐ, ಪಿ.ಎಫ್ ಸೇರಿದಂತೆ ಇತರೆ ಸೌಲಭ್ಯಗಳನ್ನು ತುರ್ತಾಗಿ ಪಾವತಿಸಬೇಕು. ಈ ಕುರಿತು ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸದೇ ಪೌರಕಾರ್ಮಿಕರ ಕುಟುಂಬಗಳನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದರು.

ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಪೌರಕಾರ್ಮಿಕರನ್ನು ಹೊರತುಪಡಿಸಿ ಬಸ್ ನಿಲ್ದಾಣ, ಇತರೆ ಕಚೇರಿಗಳು, ವಿದ್ಯಾರ್ಥಿನಿಲಯಗಳಲ್ಲಿ ಸ್ವಚ್ಚತಾ ಕೆಲಸ ಮಾಡುವ ಪೌರಕಾರ್ಮಿಕರಿಗೆ ಕನಿಷ್ಠ ವೇತನ ನಿಯಮದಡಿ ಕ್ರಮಬದ್ಧವಾದ ವೇತನ ಪಾವತಿಸಬೇಕು. ಇಂತಹ ಪೌರಕಾರ್ಮಿಕರಿಗೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳು ಪೌರಕಾರ್ಮಿಕರ ದೃಢೀಕರಣ ಪತ್ರ ನೀಡುವಲ್ಲಿ ಮುಂದಾಬೇಕು. ಇದರಿಂದ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ ಎಂದರು.

ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರು ಹಾಗೂ ಇತರೆ ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದ ಅವರು ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸುವುದಾಗಿ ತಿಳಿಸಿದರು.


Spread the love