ಪೌರ ಕಾರ್ಮಿಕನಿಗೆ ಹಲ್ಲೆ ಪ್ರಕರಣ: ಉಡುಪಿ ನಗರಸಭೆಯಿಂದ ಅಂಗಡಿ ಪರವಾನಿಗೆ ರದ್ದತಿಗೆ ನಿರ್ಣಯ

Spread the love

ಪೌರ ಕಾರ್ಮಿಕನಿಗೆ ಹಲ್ಲೆ ಪ್ರಕರಣ: ಉಡುಪಿ ನಗರಸಭೆಯಿಂದ ಅಂಗಡಿ ಪರವಾನಿಗೆ ರದ್ದತಿಗೆ ನಿರ್ಣಯ

ಉಡುಪಿ: ಕಸ ವಿಲೇವಾರಿ ಕಾರ್ಮಿಕನಿಗೆ ಹಲ್ಲೆ ನಡೆಸಿರುವ ಬಗ್ಗೆ ನಗರಸಭೆಯಿಂದ ರವಿವಾರ ಕರೆದ ತುರ್ತು ಕೌನ್ಸಿಲ್ ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ನಗರದ ಸಿಟಿ ಬಸ್ ನಿಲ್ದಾಣದಲ್ಲಿರುವ ಅಸ್ಮಾ ಇಲೆಕ್ಟ್ರಾನಿಕ್ಸ್ ಅಂಗಡಿಯ ವ್ಯಾಪಾರ ಪರವಾನಿಗೆಯನ್ನು ರದ್ದುಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಯಿತು.

ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಮಾತ ನಾಡಿ, ಕಾರ್ಮಿಕರ ಸುರಕ್ಷತೆಯ ಬಗ್ಗೆ ನಗರಸಭೆಗೆ ಬಹಳ ದೊಡ್ಡ ಜವಾಬ್ದಾರಿ ಇದೆ. ಈ ವಿಚಾರದಲ್ಲಿ ಯಾವುದೇ ರಾಜಿ ಮಾಡುವುದಿಲ್ಲ. ಪಕ್ಷಾತೀತವಾಗಿ ಅನ್ಯಾಯ ಆಗಿರುವ ಕಾರ್ಮಿಕನಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಲಾಗುವುದು ಎಂದರು.

ನಾವು ಆರೋಪಿಗಳಿಗೆ ಯಾವುದೇ ರಕ್ಷಣೆ ನೀಡಿಲ್ಲ. ಶಾಸಕರು ಘಟನೆ ನಡೆದ ತಕ್ಷಣವೇ ಎಸ್ಪಿಯವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಕ್ರಮಕ್ಕೆ ಸೂಚಿಸಿದ್ದಾರೆ. ಅದೇ ರೀತಿ ನಗರಸಭೆಯಿಂದ ಪೊಲೀಸರಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಿದ್ದೇವೆ. ನಗರಸಭೆ ಎಂದಿಗೂ ಕಾರ್ಮಿಕರ ಪರವಾಗಿ ನಿಲ್ಲುತ್ತದೆ. ಆದರೆ ಈ ವಿಚಾರವನ್ನು ಕೆಲವು ಸಂಘಟನೆಗಳು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ನಗರಸಭೆ ಇಡೀ ತಂಡ ಪೌರಾಯುಕ್ತರಿಂದ ಪೌರ ಕಾರ್ಮಿಕರವರೆಗಿನ ಎಲ್ಲ ಸಿಬ್ಬಂದಿಗಳ ಪರವಾಗಿ ಇರುತ್ತದೆ. ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಈಗಾಗಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇಂತಹ ಘಟನೆಯನ್ನು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರ ಸಂಬಂಧಿಕರು ಮಾತ್ರವಲ್ಲ ನನ್ನ ಸಂಬಂಧಿಕರಾಗಲಿ, ನಗರಸಭೆ ಸದಸ್ಯರು ಮಾಡಿದರೂ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾರ್ಮಿಕರ ಮೇಲೆ ಹಲ್ಲೆ ನಡೆಸುವಂತಹವರಿಗೆ ಸ್ಪಷ್ಟ ಸಂದೇಶ ನೀಡುವ ನಿಟ್ಟಿನಲ್ಲಿ ಈ ಪ್ರಕರಣದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಅದರಂತೆ ಅಂಗಡಿಯ ಪರವಾನಿಗೆ ರದ್ದುಗೊಳಿಸಿ ಬೀಗ ಹಾಕುವ ಕೆಲಸ ಮಾಡಲಾಗುವುದು. ಇಂತಹ ಘಟನೆಗಳು ಇನ್ನು ಮುಂದೆ ಎಲ್ಲಿಯೂ ಮರುಕಳಿಸಬಾರದು ಎಂದು ಶಾಸಕರು ತಿಳಿಸಿದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಪೌರಾಯುಕ್ತ ಉದಯ ಕುಮಾರ್ ಉಪಸ್ಥಿತರಿದ್ದರು.


Spread the love