ಪ್ರಕೃತಿ ಚಿಕಿತ್ಸಾ ಕೇಂದ್ರ ಕ್ಷೇಮವನದ ಉದ್ಘಾಟನೆ

Spread the love

ಪ್ರಕೃತಿ ಚಿಕಿತ್ಸಾ ಕೇಂದ್ರ ಕ್ಷೇಮವನದ ಉದ್ಘಾಟನೆ

ಬೆಂಗಳೂರು: ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕೇಂದ್ರದ ವತಿಯಿಂದ ನೂತನವಾಗಿ ನಿರ್ಮಿಸಿರುವ ಪ್ರಕೃತಿ ಚಿಕಿತ್ಸಾ ಕೇಂದ್ರ ಕ್ಷೇಮವನದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ವನ ಎಂದರೆ ಹಸಿರು, ಸಮೃದ್ಧಿ ಹಾಗೂ ಆಮ್ಲಜನಕ. ಆಮ್ಲಜನಕ ಜೀವನದ ಸೂತ್ರ. ಅಂದರೆ ಆಮ್ಲಜನಕ. ಜೀವನದ ಸೂತ್ರ ಆಮ್ಲಜನಕ. ಈ ಕ್ಷೇಮವನ ಜೀವನದ ಸೂತ್ರವಾಗಲಿ. ಕ್ಷೇಮವನ ಎಂಬ ಹೆಸರಿನಲ್ಲಿಯೇ ನೆಮ್ಮದಿ ಇದೆ. ಮೊದಲು ಪತ್ರ ಬರೆಯುವಾಗ ಕ್ಷೇಮ ಎಂದು ಬರೆದೇ ಪ್ರಾರಂಭ ಮಾಡುತ್ತಿದ್ದೆವು. ಆರೋಗ್ಯ ಎಂಬುದು ಅತ್ಯಂತ ಪ್ರಮುಖ ಸಂಗತಿ ಎನ್ನುವುದನ್ನು ನಮ್ಮ ಪೂರ್ವಜರು ಅರಿತಿದ್ದರು. ನಾವು ಈಗ ಇದನ್ನು ತಿರುವು ಮುರುವು ಮಾಡಿದ್ದೇವೆ. ಬೇಡವಾದುದ್ದನ್ನು ದೇಹಕ್ಕೆ ಸೇರಿಸಿಕೊಂಡು ಕಷ್ಟಪಡುತ್ತಿದ್ದೇವೆ. ದೇಹದೊಳಗಿನ ವಿಷಕಾರಿ ಅಂಶಗಳನ್ನು ಹೊರತೆಗೆದು ದೇಹ ಮತ್ತು ಮನಸ್ಸುಗಳಿಗೆ ಆರೋಗ್ಯ ನೀಡುವ ಕೆಲಸವನ್ನು ಕ್ಷೇಮವನ ಮಾಡಲಿದೆ ಎಂದು ತಿಳಿಸಿದರು.

ಕ್ಷೇಮವನ ಎನ್ನುವುದು ಅದ್ಭುತ ಕಲ್ಪನೆ. ಬಾಹ್ಯದಿಂದ ಚಿಕಿತ್ಸೆ, ಔಷಧ ನೀಡದೇ ಸಹಜ ರೀತಿಯಲ್ಲಿ ಚಿಕಿತ್ಸೆ ನೀಡಿ ವಾಸಿ ಮಾಡುವ ಕ್ಷೇತ್ರವಿದು. ಚಿಕಿತ್ಸೆಯಲ್ಲಿ ಧರ್ಮವನ್ನು ಸೇರಿಸುವ ಕ್ಷೇತ್ರ ಕ್ಷೇಮವನ ಎಂದರು. ಆರೋಗ್ಯ ಎನ್ನುವುದು ಮನಸ್ಥಿತಿಯಿಂದ ಪ್ರಾರಂಭವಾಗುತ್ತದೆ. ಮನಸ್ಸು ಮತ್ತು ದೇಹದ ಉತ್ತಮ ಸ್ಥಿತಿಯೇ ಆರೋಗ್ಯ. ಸಂಯಮದ ಮನಸ್ಥಿತಿ ಅಗತ್ಯ. ಮನಸ್ಸು ಹತೋಟಿಯಲ್ಲಿದ್ದರೆ ಸ್ಥಿತಪ್ರಜ್ಞತೆಗೆ ದಾರಿಮಾಡಿಕೊಡುತ್ತದೆ. ವಾಸ್ತವವಲ್ಲದ್ದನ್ನು ದೇಹ ಮತ್ತು ಮನಸ್ಸಿನೊಳಗೆ ಬಿಟ್ಟುಕೊಳ್ಳದಿರುವುದೇ ಸ್ಥಿತಪ್ರಜ್ಞತೆ. ಸ್ಥಿತಪ್ರಜ್ಞತೆಯ ಸ್ಥಿತಿಗೆ ಕ್ಷೇಮವನ ಕೊಂಡೊಯ್ಯುತ್ತದೆ ಎಂದು ತಿಳಿಸಿದರಲ್ಲದೇ ಮಾನವನ ಪ್ರತಿ ಅಂಗಾಂಗ ಕ್ಷೇಮವಾಗಿರಬೇಕು. ದಿನಚರಿ ಅಶಿಸ್ತಿನಿಂದ ಕೂಡಿದ್ದರೆ ದೇಹ ಮತ್ತು ಮನಸ್ಸು ಶಿಥಿಲಗೊಳ್ಳತ್ತದೆ. ಕ್ಷೇಮವನ ದೇಹ ಮತ್ತು ಮನಸ್ಸುಗಳನ್ನು ಸಮತೋಲನ ಕಾಯುತ್ತದೆ ಎಂದರು.

ಉತ್ತರ ಪ್ರದೇಶ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಅವರು ರಾಜ್ಯಕ್ಕೆ ಆಗಮಿಸಿರುವುದು ನಮಗೆ ಸಂಭ್ರಮ ಮತ್ತು ಹೆಮ್ಮೆ. ಉತ್ತರದಿಂದ ದಕ್ಷಿಣದವರೆಗೂ ಅವರು ಮನೆ ಮಾತಾಗಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಗುರುಗಳಾಗಿದ್ದವರು. ನಮ್ಮ ಧರ್ಮ ಮತ್ತು ಸಮಾಜದಲ್ಲಿ ಗುರುಗಳಿಗೆ ಅತ್ಯುತ್ತಮ ಸ್ಥಾನವಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿದ್ದಾರೆ. ಆದರ್ಶಪ್ರಾಯ, ಮಾದರಿಯಾಗಿ, ಸಾರ್ವಜನಿಕ ಜೀವನವನ್ನು ಅತಿ ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ನುಡಿದಂತೆ ನಡೆಯುತ್ತಾರೆ. ಗುರುಗಳು ಕೂಡ ದಕ್ಷ ಆಡಳಿತಗಾರರಾಗಬಹುದೆಂದು ಅವರು ನಿರೂಪಿಸಿದ್ದಾರೆ. ತತ್ವಜ್ಞಾನ ಮತ್ತು ಆಡಳಿತ ಒಂದೇ ನಾಣ್ಯದ ಎರಡು ಮುಖಗಳೆಂದು ತೋರಿಸಿಕೊಟ್ಟಿದ್ದರೆ ಹಾಗೂ ಆಧ್ಯಾತ್ಮ ಮತ್ತು ಆಡಳಿತವೂ ಒಂದೇ ನಾಣ್ಯದ ಎರಡು ಮುಖಗಳೆಂದು ನಿರೂಪಿಸಿದ್ದಾರೆ. ದುಷ್ಟರ ಶಿಕ್ಷೆ, ಶಿಷ್ಟರ ರಕ್ಷಣೆ ಅವರ ಆಡಳಿತದ ಪ್ರಮುಖ ಅಂಶ. ಹಲವಾರು ಸಮುದಾಯಗಳಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಅವರು ಮಾಡಿದ್ದಾರೆ. ಪ್ರಜಾಸತ್ತಾತ್ಮಕ, ಬಹು ಸಂಸ್ಕೃತಿಯ ಭಾರತದಲ್ಲಿ ಹೊಸ ಅಧ್ಯಾಯವನ್ನು ಅವರು ಬರೆದಿದ್ದಾರೆ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ಡಿ.ವೀರೇಂದ್ರ ಹೆಗ್ಗಡೆ, ಸಚಿವರಾದ ಡಾ. ಕೆ. ಸುಧಾಕರ್, ನಾರಾಯಣಗೌಡ ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.


Spread the love