ಪ್ರಣಾಳಿಕೆಯ ಗ್ಯಾರಂಟಿ ಕೊಡಲಾಗದವರು ಕುಚ್ಚಲಕ್ಕಿಯ ನೆಪ ಹೇಳುತ್ತಾರೆ. – ಕಾಂಗ್ರೇಸ್ ಗೆ ವೀಣಾ ನಾಯಕ್ ತಿರುಗೇಟು

Spread the love

ಪ್ರಣಾಳಿಕೆಯ ಗ್ಯಾರಂಟಿ ಕೊಡಲಾಗದವರು ಕುಚ್ಚಲಕ್ಕಿಯ ನೆಪ ಹೇಳುತ್ತಾರೆ. – ಕಾಂಗ್ರೇಸ್ ಗೆ ವೀಣಾ ನಾಯಕ್ ತಿರುಗೇಟು

ಉಡುಪಿ: ವಿಧಾನಸಭೆಯ ಚುನಾವಣೆಯ ಸಂದರ್ಭ 5 ಗ್ಯಾರಂಟಿಗಳ ಹೆಸರು ಹೇಳಿ, ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ವಿದ್ಯುತ್ ಉಚಿತ , ಬಸ್ ಉಚಿತ, ಮನೆಯೊಡತಿಗೆ 2 ಸಾವಿರ ರೂಪಾಯಿ, ನಿರುದ್ಯೋಗಿಗಳಿಗೆ 3 ಸಾವಿರ ರೂಪಾಯಿ, ರಾಜ್ಯ ಸರ್ಕಾರ ವತಿಯಿಂದ 10 ಕೆ.ಜಿ ಅಕ್ಕಿ ಎಂದೆಲ್ಲಾ ಭರವಸೆ ನೀಡಿ ಮುಗ್ಧ ಬಡ ಜನರಿಂದ ಓಟು ಪಡೆದು ಸ್ವತಃ ಮುಖ್ಯಮಂತ್ರಿ ಆಗಿರುವ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಆಗಿರುವ ಡಿ.ಕೆ ಶಿವಕುಮಾರ್ ಜೂನ್ 1 ನೇ ತಾರೀಖಿನಿಂದ ಕರೆಂಟ್ ಬಿಲ್ ಕಟ್ಟಬೇಡಿ ಎಂದು ಹೇಳಿ, ಇದೀಗ ಹಣ ಪಾವತಿ ಮಾಡದೇ ಇದ್ದರೇ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಬಡ ಜನರು ಕಾಂಗ್ರೇಸ್ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ ಎಂದು ಉಡುಪಿ ಗ್ರಾಮಾಂತರ ಬಿ.ಜೆ.ಪಿ ಮಂಡಲ ಅಧ್ಯಕ್ಷರಾದ ವೀಣಾ ನಾಯಕ್ ಹೇಳಿದ್ದಾರೆ.

ಸರ್ಕಾರಿ ಬಸ್ ಹತ್ತಿದ ಮಹಿಳೆಯರು ಟಿಕೇಟ್ ಮುಖ್ಯಮಂತ್ರಿಗಳಲ್ಲಿ ಕೇಳಿ ಎನ್ನುತ್ತಿದ್ದಾರೆ. 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದ ಸರ್ಕಾರ ಇದೀಗ ಮುನಿಯಪ್ಪರವರ ಮೂಲಕ ಕೇಂದ್ರದ ನರೇಂದ್ರ ಮೋದಿ ಸರ್ಕಾರ ನೀಡುತ್ತಿರುವ 5 ಕೆ.ಜಿ ಅಕ್ಕಿ ಸೇರಿದಂತೆ 10 ಕೆ.ಜಿ ಕೊಡುತ್ತೇವೆ ಎನ್ನುತ್ತಿದೆ. ಕಾಂಗ್ರೇಸ್ ಪ್ರಣಾಳಿಕೆಯಲ್ಲಿ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆ.ಜಿ ಅಕ್ಕಿ ಸೇರಿದಂತೆ, 10 ಕೆ.ಜಿ ಎಂದು ಹೇಳಿಲ್ಲ.

ರಾಜ್ಯಾದ್ಯಂತ ಜನ ಕಾಂಗ್ರೇಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಗ್ಯಾರಂಟಿಗಳನ್ನು ಜಾರಿ ಮಾಡದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ವಿದ್ಯುತ್ ಬಿಲ್ ಪಾವತಿ ಹೆಸರಿನಲ್ಲಿ ಸರ್ಕಾರ ನೀಡಿದ ಭರವಸೆ ಈಡೇರಿಸದೆ ಇರುವುದರಿಂದ ಜನ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದನ್ನೆಲ್ಲಾ ಗಮನಿಸಿ ಮಾಜಿ ಸಚಿವ  ಕೋಟ ಶ್ರೀನಿವಾಸ ಪೂಜಾರಿಯವರು ಕಾಂಗ್ರೇಸ್ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಜನರ ಪರವಾಗಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳುವ ಪಕ್ಷವೊಂದು ಆಡಿದ ಮಾತನ್ನು ತಪ್ಪಿದರೆ ಜನರ ರಕ್ಷಣೆಗೆ ವಿರೋಧ ಪಕ್ಷ ಬರಬೇಕಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯಿಲ್ಲದ ಉಡುಪಿ ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್ ರವರು ಕುಚ್ಚಲಕ್ಕಿಯ ನೆಪ ಹಿಡಿದು ವಿವಾದವನ್ನು ಎಬ್ಬಿಸುತ್ತಿದ್ದಾರೆ. ಕಾಂಗ್ರೇಸ್ ನ 6 ದಶಕದ ಆಡಳಿತದ ಅವಧಿಯಲ್ಲಿ ಕರಾವಳಿ ಜಿಲ್ಲೆಗಳ ಜನತೆಗೆ ಘಾಟಿ ಅಕ್ಕಿಯನ್ನು ಪಡಿತರ ಮೂಲಕ ನೀಡಿ, ಊಟ ಮಾಡಲಾಗದ ಅಕ್ಕಿಯನ್ನು ಪಡಿತರ ಚೀಟಿದಾರರು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿರುವ ಸಂದರ್ಭ ಕೋಟ ಶ್ರೀನಿವಾಸ ಪೂಜಾರಿಯವರು ಕುಚ್ಚಲಕ್ಕಿ ತಯಾರಿಸುವ ಭತ್ತದ ತಳಿಗಳಿಗೆ ಬೆಂಬಲ ಬೆಲೆಯನ್ನು ಘೋಷಿಸಿ ಮಾನ್ಯ ಮುಖ್ಯಮಂತ್ರಿಗಳ ಮೂಲಕ ಕುಚ್ಚಲಕ್ಕಿ ತಯಾರಿಸುವ ಭತ್ತಕ್ಕೆ ಕ್ವಿಂಟಾಲ್ ಗೆ 500 ರೂಪಾಯಿ ಹೆಚ್ಚು ಮೊತ್ತ ನಿಗದಿಕರಿಸಿ ಭತ್ತ ಖರೀದಿಸಲು ಖರೀದಿ ಕೇಂದ್ರ ತೆರೆದಿದ್ದರು. ಕುಚ್ಚಲಕ್ಕಿ ಎನ್ನುವುದು ಪ್ರಣಾಳಿಕೆಯಲ್ಲಿ ಮತ ಪಡೆಯಲು ಬೇಕಾಗಿ ಹೇಳಿರುವ ಭರವಸೆಯಲ್ಲ. ಬದಲಾಗಿ ಕಾಂಗ್ರೇಸ್ ನೀಡುತ್ತಿರುವ ಪಡಿತರ ಅಕ್ಕಿಯನ್ನು ಉಣ್ಣಲಾಗದ ಬಡವರಿಗೆ ಬದಲಿ ವ್ಯವಸ್ಥೆಯಾಗಿ ಪೂಜಾರಿಯವರು ಯೋಜನೆ ರೂಪಿಸಿದ್ದರು. ಇದೆಲ್ಲಾ ಅರ್ಥ ಮಾಡಿಕೊಳ್ಳಲಾಗದ ರಮೇಶ್ ಕಾಂಚನ್ ರವರ ಕಾಂಗ್ರೇಸ್ ಪಕ್ಷ ಕುಚ್ಚಲಕ್ಕಿ ಕನಸನ್ನೇ ಕಾಣದೇ ಆರೋಪ ಮಾಡುತ್ತಿರುವುದು ಅರ್ಥಹೀನ ಮಾತ್ರವಲ್ಲ ತಾವು ಅದಿಕಾರಕ್ಕೆ ಬಂದರೆ ಒಂದೇ ತಿಂಗಳಲ್ಲಿ ಕುಚ್ಚಲಕ್ಕಿ ಕೊಡುತ್ತೇವೆ ಎನ್ನುವ ಭರವಸೆ ನೀಡಿದ ರಮೇಶ್ ಕಾಂಚನ್ ಇಚ್ಛಾ ಶಕ್ತಿಯಿದ್ದರೆ ಇನ್ನೊಂದು ತಿಂಗಳಿನಲ್ಲಿ ಕುಚ್ಚಲಕ್ಕಿ ಪಡಿತರ ವ್ಯವಸ್ಥೆಯಲ್ಲಿ ನೀಡಿ ಮಾತನಾಡುವುದು ಉತ್ತಮ.

ಉಡುಪಿ ಜಿಲ್ಲೆಯ ಕಾಂಗ್ರೇಸ್ ಸ್ಥಿತಿಗತಿಗಳನ್ನು ಅವಲೋಕನ ಮಾಡಿಕೊಂಡು ಜನಾದೇಶವನ್ನು ಗೌರವಪೂರ್ವಕವಾಗಿ ಸ್ವೀಕರಿಸಬೇಕೇ ಹೊರತು ವಿರೋಧ ಪಕ್ಷದ ಮುಖಂಡರ ಹೇಳಿಕೆಯನ್ನು ತಿರುಚುವ ಭರದಲ್ಲಿ ಗೊಂದಲ ಸೃಷ್ಟಿ ಮಾಡಿಕೊಳ್ಳಬಾರದು, ಗ್ಯಾರಂಟಿ ಕಾರ್ಡ್ ಹೆಸರಿನಲ್ಲಿ ಬಡವರಿಗೆ ಸವಲತ್ತನ್ನು ಕಾಂಗ್ರೇಸ್ ಸರ್ಕಾರ ನೀಡದೇ ಇದ್ದರೆ ಜನಸಾಮಾನ್ಯರೊಂದಿಗೆ ಭಾರತೀಯ ಜನತಾ ಪಾರ್ಟಿ ಗ್ಯಾರಂಟಿ ಕಾರ್ಡ್ ಅನುಷ್ಠಾನ ಮಾಡಲು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಉಡುಪಿ ಗ್ರಾಮಾಂತರ ಬಿ.ಜೆ.ಪಿ ಮಂಡಲ ಅಧ್ಯಕ್ಷರಾದ ವೀಣಾ ನಾಯಕ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love