ಪ್ರತಿಭಟನಾಕಾರರಲ್ಲ.. ನಿಜವಾದ ದೇಶದ್ರೋಹಿ ಪ್ರಧಾನಿ ನರೇಂದ್ರ ಮೋದಿ- ಸೊರಕೆ ಗುಡುಗು

Spread the love

ಪ್ರತಿಭಟನಾಕಾರರಲ್ಲ.. ನಿಜವಾದ ದೇಶದ್ರೋಹಿ ಪ್ರಧಾನಿ ನರೇಂದ್ರ ಮೋದಿ- ಸೊರಕೆ ಗುಡುಗು

ಕುಂದಾಪುರ: ಸರ್ಕಾರದ ಜನವಿರೋಧಿ ನೀತಿಗಳ ವಿರುದ್ದ ಪ್ರತಿಭಟಿಸುವವರಿಗೆ ದೇಶದ್ರೋಹದ ಪಟ್ಟ ಕಟ್ಟಲಾಗುತ್ತಿದೆ. ಇನ್ನೂರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡರೂ ಅದಕ್ಕೆ ಸ್ಪಂದಿಸದ ಪ್ರಧಾನಿ ನರೇಂದ್ರ ಮೋದಿಯರು ನಿಜವಾದ ದೇಶದ್ರೋಹಿ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಗುಡುಗಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ದ ಆರು ದಿನಗಳ ಕಾಲ ಹೆಜಮಾಡಿಯಿಂದ ಬೈಂದೂರಿನ ತನಕ ನಡೆದ ಜನಧ್ವನಿ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಇಪ್ಪತ್ತು ರೂಪಾಯಿಗೆ ಪೆಟ್ರೋಲ್ ನೀಡುತ್ತೇವೆಂದು ನೂರು ರೂಪಾಯಿ ಮಾಡಿದಿರಿ. ನೀವು ನೂರು ರೂಪಾಯಿ ಮಾಡುತ್ತೀರಿಎಂದು ನಾವೂ ನೂರು ಕಿ.ಮೀ ಪಾದಯಾತ್ರೆ ಮಾಡಿದ್ದೇವೆ. ಬ ಹಳ ಶಿಸ್ತುಬದ್ದವಾಗಿ ಒಗ್ಗಟ್ಟಿನಿಂದ ಇಡೀ ರಾಜ್ಯದಲ್ಲೇ ಪ್ರಥಮವಾಗಿ ಉಡುಪಿ ಜಿಲ್ಲೆಯಲ್ಲಿ ಜನಧ್ವನಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದೇವೆ. ಈ ಜನಧ್ವನಿ ಪಾದಯಾತ್ರೆ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಇಡೀ ರಾಜ್ಯದಲ್ಲಿ ನಡೆದರೆ ನೂರಕ್ಕೆ ನೂರು ಪಾಲು ಕೂಡ ಈ ಸರ್ಕಾರದ ಚಟ್ಟ ಕಟ್ಟುವ ಕೆಲಸಗಳು ಆಗುತ್ತದೆ ಎಂದವರು ಜರಿದರು.

ಬಿಜೆಪಿಯವರು ತಮ್ಮ ಅಧಿಕಾರವನ್ನು ಬಳಸಿಕೊಂಡು ಮರಗಳ್ಳತನ, ಮರಳು ಕಳ್ಳತನ, ಕ್ರಶರ್ ದಂದೆ ಸೇರಿದಂತೆ ಇನ್ನಿತರ ಕಾನೂನುಬಾಹಿರ ದಂದೆಗಳನ್ನು ಮಾಡುತ್ತಿದೆ ಬಿಟ್ಟರೆ ಯಾವುದೇ ಅಭಿವೃದ್ದಿ ಕೆಲಸಗಳನ್ನು ನಡೆಸುತ್ತಿಲ್ಲ. ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತಾರಂತೆ. ನಮ್ಮನ್ನೆಲಾ ಏನು ಮಾಡುತ್ತಾರೆ. ಇಷ್ಟೊಂದು ಸಂಖ್ಯೆಯಲ್ಲಿ ನಾವೆಲ್ಲರೂ ಸೇರಿದ್ದೇವೆ. ಬಿಜೆಪಿಯವರ ಕಾಂಗ್ರೆಸ್ ಮುಕ್ತ ಭಾರತದ ಕನಸು ನನಸಾಗಲು ಸಾಧ್ಯವಿಲ್ಲ ಎಂದರು.

ಮೀನುಗಾರರಿಗೆ ಆರು ತಿಂಗಳಿಂದ ಡಿಸೇಲ್ ಸಬ್ಸಿಡಿ ಕೊಟ್ಟಿಲ್ಲ. ಪಿಂಚಣಿದಾರರಿಗೆ ಪಿಂಚಣಿ ಕೊಡಲು ಈ ಸರ್ಕಾರಕ್ಕೆ ತಾಕತ್ತಿಲ್ಲ. ನೆರೆ ಬಂದು ಮನೆ ಕಳೆದುಕೊಂಡವರಿಗೆ ಮನೆ ಕೊಟ್ಟಿಲ್ಲ. ಆಶ್ರಯ ಮನೆಗಳನ್ನು ಕೊಟ್ಟಿಲ್ಲ. ಈ ಸರ್ಕಾರಕ್ಕೆ ಬಡವರಿಗೆ ಐದು ಸೆಂಟ್ಸ್ ಜಾಗ ಕೊಡಿಸುವ ಯೋಗ್ಯತೆ ಇಲ್ಲ. ಹಿಂದೆ ಭೂಮಸೂದೆ ಕಾಯ್ದೆಯಡಿಯಲ್ಲಿ ಕಾಂಗ್ರೆಸ್ ಕೊಟ್ಟಂತಹ ಭೂಮಿಗಳನ್ನು ವಾಪಾಸ್ ಕಿತ್ತುಕೊಳ್ಳುವಂತಹ ಕಾನೂನನ್ನು ತರುತ್ತಿದೆ. ಕೊರೋನಾ ಸಂದರ್ಭದಲ್ಲಿ ಪಕ್ಕದ ಕೇರಳ ಸರ್ಕಾರ ಇಪ್ಪತ್ತು ಸಾವಿರ ಕೋಟಿಗಳನ್ನು ಸ್ತ್ರೀ ಶಕ್ತಿ, ಸ್ವಸಹಾಯ ಗುಂಪುಗಳ ಮೂಲಕ ಕೊಟ್ಟರೆ ಇಲ್ಲಿನ ಸರ್ಕಾರ ಅದೇ ಕೊರೋನಾ ಸಂದರ್ಭಗಳನ್ನು ಬಳಸಿಕೊಂಡು ಭ್ರಷ್ಟಾಚಾರ ಮಾಡಿತು. ಇವತ್ತು ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾವೆಲ್ಲರೂ ಸನ್ನದ್ದರಾಗಬೇಕು ಎಂದರು.

ಕೊಂಚ ಯಾಮಾರಿದರೂ ಮರುಚುನಾವಣೆ ಬರುತ್ತಿತ್ತು: ಸೊರಕೆ ವ್ಯಂಗ್ಯ
ಗೋಪಾಲ ಪೂಜಾರಿಯವರು ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಕೋಟಿ-ಕೋಟಿ ಅನುದಾನ ತಂದು ಈ ಕ್ಷೇತ್ರದ ಅಭಿವೃದ್ದಿ ಕೆಲಸಗಳನ್ನು ಮಾಡುವಲ್ಲಿ ಯಶಸ್ವಿಯಾದರು. ಆದರೆ ಈಗಿನ ಶಾಸಕ ಸುಕುಮಾರ್ ಶೆಟ್ಟಿಯವರು, ಮೆಡಿಕಲ್ ಕಾಲೇಜು, ಏರ್ಪೋರ್ಟ್, ಸರ್ಕಾರಿ ಇಂಜಿನಿಯರ್ ಕಾಲೇಜು, ಐದು ನದಿಗಳ ಜೋಡಣೆ ಎನ್ನುತ್ತಾ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಬೆಂಬಲಿಗರ ಮಾತು ಕೇಳದೆ ಅಮವಾಸ್ಯೆಯ ದಿನ ಸಮುದ್ರ ಸ್ನಾನಕ್ಕೆ ಹೋಗಿ ಅಲೆಗಳ ರಭೆಸಕ್ಕೆ ಹೋಗುತ್ತಿದ್ದರು. ಇವರು ಶಾಸಕರೆಂದು ಸಮುದ್ರದ ಅಲೆಗಳಿಗೇನು ಗೊತ್ತು. ಆ ಸಂದರ್ಭದಲ್ಲಿ ಅಕ್ಕ-ಪಕ್ಕದಲ್ಲಿದ್ದ ಬೆಂಬಲಿಗರು ಅವರನ್ನು ಹಿಡಿದುಕೊಳ್ಳದಿದ್ದರೆ ಈ ಕ್ಷೇತ್ರಕ್ಕೆ ಮರು ಚುನಾವಣೆ ಬರುತ್ತಿತ್ತು ಎಂದು ವ್ಯಂಗ್ಯವಾಡಿದ ಸೊರಕೆ, ಶಾಸಕರಾದವರು ದುರಹಂಕಾರದ ಮನೋಭಾವ ಹೊಂದಿರಬಾರದು. ಜನಪ್ರತಿನಿಧಿ ಜನರ ಸೇವಕನಾಗಿ ದುಡಿಯಬೇಕು ಎಂದು ಕಿವಿಮಾತು ಹೇಳಿದರು.


Spread the love