
ಪ್ರತಿಭಾಸಕ್ತಿಗೆ ಅನುಗುಣವಾದ ಶಿಕ್ಷಣ ಅಗತ್ಯ
ಮೈಸೂರು: ಮಕ್ಕಳಲ್ಲಿರುವ ಸಾಹಿತ್ಯ, ಸಂಗೀತ, ರಂಗಶಿಕ್ಷಣ, ಕ್ರೀಡಾಸಕ್ತಿಯನ್ನು ಪೋಷಕರು ಗುರುತಿಸಿ, ಅದಕ್ಕನುಗುಣವಾಗಿ ಅವರಲ್ಲಿ ಆಂತರಿಕವಾಗಿ ಹುದುಗಿರುವ ಪ್ರತಿಭೆಯನ್ನು ವಿಕಾಸಗೊಳಿಸುವಂತಹ ಶಿಕ್ಷಣ ಕೊಡಿಸಲು ಪೋಷಕರು ಮುಂದಾಗಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಹಾಗೂ ಹಿರಿಯ ಸಾಹಿತಿ ಡಾ.ಡಿ.ಕೆ.ರಾಜೇಂದ್ರ ಹೇಳಿದರು.
ನಗರದ ನಗರದ ಜಯಲಕ್ಷ್ಮಿಪುರಂನಲ್ಲಿರುವ ಕುವೆಂಪು ರಂಗಮಂದಿರದಲ್ಲಿ ಅದಮ್ಯ ರಂಗ ಶಾಲೆ ವತಿಯಿಂದ ಯೋಜಿಸಲಾಗಿದ್ದ ಬಾಲಂಗೋಚಿ-ಪುಟಾಣಿಗಳ ಪುಂಡಾಟ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಹಾಗೂ ಮಕ್ಕಳ ನಾಟಕ ಪ್ರದರ್ಶನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳನ್ನು ವರ್ಷವಿಡೀ ಶಾಲೆಗೆ ಕಳುಹಿಸುವುದು, ಆಮೇಲೆ ಮನೆಯಲ್ಲಿ ನಾಲ್ಕು ಗೋಡೆ ಮಧ್ಯೆ ಕೂಡಿ ಹಾಕಿ ಓದಲು ಕೂರಿಸುವುದು, ಹೆಚ್ಚಿನ ಅಂಕಗಳ ಗಳಿಸುವ ಬಗ್ಗೆ ಒತ್ತಾಯ ಹೇರುವುದರತ್ತ ಮಾತ್ರ ಪೋಷಕರು ಗಮನಹರಿಸುತ್ತಾರೆಯೇ ಹೊರತು, ಅವರ ಆಸಕ್ತಿ ಏನೆಂಬುದನ್ನು ತಿಳಿಯುವ ಪ್ರಯತ್ನ ಮಾಡುವುದಿಲ್ಲ. ಇದರಿಂದ ಮಕ್ಕಳಲ್ಲಿನ ಬೇರೆ ಬೇರೆ ಕ್ಷೇತ್ರದ ಆಸಕ್ತಿ ನಶಿಸುತ್ತಿದೆ ಎಂದು ವಿಷಾದಿಸಿದರು.
ಮಕ್ಕಳಲ್ಲಿ ಶಾರೀರಿಕ, ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆ ಸಮತೋಲನವಾಗಿ ನಡೆಯಬೇಕು. ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಪೂರಕವಾದ ಶಿಕ್ಷಣ ವರ್ತಮಾನದ ಸಂದರ್ಭದಲ್ಲಿ ಇಲ್ಲ. ಸಮಸ್ಯೆಗಳನ್ನು ಎದುರಿಸುವ ಶಕ್ತಿ ಕೊಡದ, ಆತ್ಮಸ್ಥೈರ್ಯವನ್ನು ಬೆಳೆಸದ ಶಿಕ್ಷಣ ಯಾವತ್ತಿಗೂ ಸಂಕುಚಿತವಾದದ್ದೇ ಆಗಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷವೂ ಅದಮ್ಯ ರಂಗ ಶಾಲೆ ರಂಗಶಿಕ್ಷಣದ ಮೂಲಕ ಮಕ್ಕಳ ಪ್ರತಿಭೆಯ ಪೋಷಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ದಕ್ಷ ಪದವಿ ಕಾಲೇಜಿನ ಅಧ್ಯಕ್ಷರಾದ ಡಾ.ಬಿ. ಜಯಚಂದ್ರ ರಾಜು, ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ಅಧ್ಯಕ್ಷೆ ಹೆಚ್.ಎಲ್. ಯುಮುನಾ, ಅದಮ್ಯ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ, ಸಾಹಿತಿಗಳಾದ ಟಿ. ಲೋಕೇಶ್ ಹುಣಸೂರು, ಡಾ.ಬಿ. ಬಸವರಾಜು, ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಕೆ.ಎಸ್. ಸತೀಶ್ ಕುಮಾರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಕ್ಕಳಿಂದ ರಂಗಗೀತೆಗಳ ಗಾಯನ, ಜಾನಪದ ಗೀತೆಗಳಿಗೆ ನೃತ್ಯ, ಡಾ.ಎಚ್.ಎಸ್. ವೆಂಕಟೇಶ್ ಮೂರ್ತಿ ರಚನೆಯ ಕಂಸಾಯಣ ಹಾಗೂ ಮೇಳೆಹಳ್ಳಿ ದೇವರಾಜ್ ರಚನೆಯ ಗಡಿಬಿಡಿ ರಾಜ ಎಂಬ ಮಕ್ಕಳ ನಾಟಕ ಪ್ರದರ್ಶನ ನಡೆಯಿತು. ಈ ಎಲ್ಲಾ ಕಾರ್ಯಕ್ರಮಗಳು ರಂಗಮಂದಿರದಲ್ಲಿ ಕಿಕ್ಕಿರಿದಿದ್ದ ಪೋಷಕರು ಮತ್ತು ಪ್ರೇಕ್ಷಕರ ಮನ ಸೆಳೆದು ರಂಜಿಸುವಲ್ಲಿ ಯಶಸ್ವಿಯಾದವು.