
ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ, ಭವಿಷ್ಯವನ್ನು ರೂಪಿಸುವ ಕೆಲಸಗಳು ಆಗಬೇಕಾಗಿದೆ – ಪ್ರಮೋದ್ ಮಧ್ವರಾಜ್
ಕುಂದಾಪುರ: ದೇಶ ಹಾಗೂ ಸಮಾಜಕ್ಕೆ ಕೀರ್ತಿ ತರುವ ಕ್ರೀಡಾಪಟುಗಳನ್ನು ಗುರುತಿಸುವುದರ ಜೊತೆಗೆ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಅವರ ಭವಿಷ್ಯವನ್ನು ರೂಪಿಸುವ ಕೆಲಸಗಳು ಆಗಬೇಕಾಗಿದೆ ಎಂದು ಕ್ರೀಡಾ ಹಾಗೂ ಯುವ ಸಬಲೀಕರಣ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಮಂಗಳೂರು ವಿಶ್ವವಿದ್ಯಾನಿಲಯದ ಜಂಟಿ ಅಶ್ರಯದಲ್ಲಿ ನಡೆದ ಅಂತರ್ ಕಾಲೇಜು ಮಟ್ಟದ ಪುರುಷರ ದೇಹದಾರ್ಢ್ಯ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಕ್ರೀಡಾ ಸಚಿವನಾಗಿದ್ದಾಗ ರಾಜ್ಯಕ್ಕೆ ಸಮಗ್ರವಾದ ಕ್ರೀಡಾ ನೀತಿಯನ್ನು ರೂಪಿಸಲಾಗಿತ್ತು. ಗ್ರಾಮೀಣ ಭಾಗದ ಕ್ರೀಡಾಪಟುಗಳು ಸೇರಿದಂತೆ ದೊಡ್ಡ ಸಂಖ್ಯೆಯ ಕ್ರೀಡಾಳುಗಳಿಗೆ ಸಹಕಾರ ನೀಡುವ ಕಾರ್ಯಗಳು ನಡೆದಿದ್ದವು. ನೇಮಕಾತಿಯ ಸಂದರ್ಭದಲ್ಲಿಯೂ ಪ್ರತಿಭಾನ್ವಿತ ಕ್ರೀಡಾಳುಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ಕುರಿತು ನೀತಿ ರೂಪಿಸಲಾಗಿತ್ತು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು, ಅಶ್ವಿನಿ ಶೆಟ್ಟಿ ಅಕ್ಕುಂಜೆ, ಗುರುರಾಜ್ ಪೂಜಾರಿ ಸೇರಿದಂತೆ ನೂರಾರು ಕ್ರೀಡಾಪಟುಗಳ ಸಾಧನೆಗೆ ಪುಣ್ಯ ಭೂಮಿಯಾದ ಅವಿಭಜಿತ ಕುಂದಾಪುರ ತಾಲ್ಲೂಕು ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನು ನೀಡಿದ ಹಿರಿಮೆಯನ್ನು ಉಳಿಸಿಕೊಂಡಿದೆ ಎಂದರು.
ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಹೆಗ್ಡೆ, ಮಂಗಳೂರು ವಿವಿ ಕ್ರೀಡಾ ವಿಭಾಗ ಸಹನಿರ್ದೇಶಕ ಹರಿದಾಸ ಕೂಳೂರು, ಪತ್ರಕರ್ತ ರಾಜೇಶ್ ಕೆ.ಸಿ, ಕೊಪ್ಪ ಕೌರಿ ಎಸ್ಟೇಟ್ ಮಾಲಕ ಪೃಥ್ವಿರಾಜ್ ಕೌರಿ, ಹಳೆ ವಿದ್ಯಾರ್ಥಿ ಪವನ್ ಶೆಟ್ಟಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್ ಟಿ.ಎನ್. ಉಪಸ್ಥಿತರಿದ್ದರು.
ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಉಮೇಶ್ ಶೆಟ್ಟಿ ಸ್ವಾಗತಿಸಿದರು, ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ವಂದಿಸಿದರು, ಅಭಿಜಿತ್ ಪಾಂಡೇಶ್ವರ ನಿರೂಪಿಸಿದರು.