ಪ್ರತಿಯೊಬ್ಬರಲ್ಲೂ ಕನ್ನಡ ಜಾಗೃತಿ ಪ್ರಜ್ಞೆ ಇರಬೇಕು: ಬನ್ನೂರು ರಾಜು

Spread the love

ಪ್ರತಿಯೊಬ್ಬರಲ್ಲೂ ಕನ್ನಡ ಜಾಗೃತಿ ಪ್ರಜ್ಞೆ ಇರಬೇಕು: ಬನ್ನೂರು ರಾಜು

ಮೈಸೂರು: ಕನ್ನಡ ಎನ್ನುವುದು ಎಂದೂ ನಶಿಸದ ಜಗತ್ತಿನ ಸರ್ವ ಶ್ರೇಷ್ಠ ಪ್ರಾಚೀನ ಭಾಷೆಗಳಲ್ಲೊಂದೆಂಬ ಅರಿವು ಮತ್ತು ಜಾಗೃತಿ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಇರಬೇಕೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ನಗರದ ಹೆಗ್ಗಡದೇವನ ಕೋಟೆಯ ಹೆದ್ದಾರಿಯಲ್ಲಿರುವ ಮಹದೇವಪುರ ಬಡಾವಣೆಯಲ್ಲಿ ಜೈ ಭುವನೇಶ್ವರಿ ಕನ್ನಡ ಯುವಕರ ಸಂಘದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಸಂತ ಶ್ರೇಷ್ಠ ದಾರ್ಶನಿಕ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಿದ್ದ ಅವರು, ಜಗದ್ವಿಖ್ಯಾತ ಸಂತ ಕವಿ ಕನಕ ದಾಸರಂಥ ಸಮಾಜ ಸುಧಾರಕರನ್ನು ಹಾಗೂ ಅಲ್ಪಾಯುಷ್ಯದಲ್ಲೇ ಅಪಾರ ಸಾಧನೆ ಮಾಡಿ ಹೋಗಿರುವ ನಟ ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ರಂಥ ಸಮಾಜಮುಖಿ ಕಲಾವಿದರನ್ನು ನಾಡಿಗೆ ನೀಡಿದ ನಮ್ಮ ಕನ್ನಡ ಭಾಷೆ ಜಗತ್ತಿನ ಭಾಷೆಗಳಲ್ಲೇ ಶ್ರೇಷ್ಠಾತಿ ಶ್ರೇಷ್ಠವೆಂದರು.

ಕೇವಲ ಭಾಷಣಗಳಿಂದ ಕನ್ನಡ ಭಾಷೆ ಬೆಳೆಯುವುದಿಲ್ಲ. ಪ್ರತಿಯೊಂದು ಹಂತದಲ್ಲೂ ಪ್ರತಿಯೊಬ್ಬರೂ ಕನ್ನಡವನ್ನು ಬಳಸುತ್ತಾ ಹೋಗಬೇಕು. ಬಳಸಿದಷ್ಟೂ ಕನ್ನಡ ಬೆಳೆಯುತ್ತದೆ. ಕನ್ನಡ ನಾಲಿಗೆಯ ಮಾತಿಗಿಂತ ಹೃದಯದ ಮಾತಾಗಬೇಕು. ಮನಸ್ಪೂರ್ವಕವಾಗಿ ನಾವು ಅದನ್ನು ಪ್ರೀತಿಸಬೇಕು.ವರ ನಟ ಡಾ.ರಾಜಕುಮಾರ್ ಹಾಡಿರುವಂತೆ ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ. ಅದು ನಮ್ಮ ಕನ್ನಡ. ಜೀವನಕ್ಕಾಗಿ ಎಷ್ಟು ಭಾಷೆಗಳನ್ನು ಬೇಕಾದರೂ ಕಲಿಯೋಣ.ಆದರೆ ಕನ್ನಡವನ್ನೇ ಪ್ರೀತಿಸಿ ಅಭಿಮಾನಿಸೋಣ. ಏಕೆಂದರೆ ನಾವು ಕನ್ನಡ ನಾಡಿನ ಮಣ್ಣಿನ ಮಕ್ಕಳು. ಕನ್ನಡವೇ ನಮ್ಮ ಜೀವ ಹಾಗೂ ಜೀವನ ವೆಂದ ಅವರು ಒಟ್ಟಾರೆ ಕನ್ನಡಿಗರಿಗೆ ಕನ್ನಡ ಭಾಷೆಯೇ ಸರ್ವಸ್ವವೆಂದು ಅಭಿಪ್ರಾಯಪಟ್ಟರು.

ಪ್ರಾರಂಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರೊಡಗೂಡಿ ಸಮಸ್ತ ಕನ್ನಡಿಗರ ತಾಯಿ ಭುವನೇಶ್ವರಿ ಮತ್ತು ಸಂತ ಜ್ಞಾನಿ ಕನಕದಾಸರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ವಕೀಲ ರಮೇಶ್ ಅವರು ಕನ್ನಡ ರಾಜ್ಯೋತ್ಸವ ಮತ್ತು ಕನಕದಾಸರ ಜಯಂತಿಯ ಮಹತ್ವವನ್ನು ತಿಳಿಸಿಕೊಟ್ಟರಲ್ಲದೆ ನಾಡು, ನುಡಿ, ನೆಲ, ಜಲ ಸಂರಕ್ಷಣೆಯ ವಿಚಾರದಲ್ಲಿ ಕನ್ನಡಿಗರೆಲ್ಲರೂ ಒಗ್ಗಟ್ಟಾಗಿರಬೇಕು ಹಾಗೆಯೇ ಸಾರ್ಥಕ ಬದುಕಿಗಾಗಿ ಕನಕದಾಸರ ತತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಸಮಾಜಸೇವಕ ಗೆಜ್ಜೆಗಳ್ಳಿ ಮಹೇಶ್, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ನವೀನ್ ಕುಮಾರ್ ಕಾರ್ಯಕ್ರಮ ಕುರಿತು ಮಾತನಾಡಿದರು.

ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಮಾಜಿ ಅಧ್ಯಕ್ಷ ಎಂ. ರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಜೈ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಕಪನೀ ಗೌಡ, ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಬುಲೆಟ್ ಮಹದೇವ್, ಮಂಜುನಾಥ್, ಕಿರಣ್ ಕುಮಾರ್, ಶಿವಣ್ಣ,ಚಂದ್ರು, ನಾಗರಾಜು, ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಸಂಘದ ವತಿಯಿಂದ ಎಲ್ಲರಿಗೂ ಸಿಹಿ ವಿತರಿಸಿ ಕನ್ನಡ ರಾಜ್ಯೋತ್ಸವ ಮತ್ತು ಮಹಾನ್ ಮಾನವತಾವಾದಿ ಕನಕದಾಸರ ಜಯಂತಿಯ ಶುಭಾಶಯಗಳನ್ನು ಕೋರಲಾಯಿತು.


Spread the love

Leave a Reply

Please enter your comment!
Please enter your name here