ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯದ ಸುಸ್ಥಿರ ಸ್ಥಿತಿ ಅವಶ್ಯಕ – ಜಯಪ್ರಕಾಶ್ ಹೆಗ್ಡೆ

Spread the love

ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯದ ಸುಸ್ಥಿರ ಸ್ಥಿತಿ ಅವಶ್ಯಕ – ಜಯಪ್ರಕಾಶ್ ಹೆಗ್ಡೆ

ಕುಂದಾಪುರ: ಒತ್ತಡದ ಜಗತ್ತಿನಲ್ಲಿ ಬದುಕುತ್ತಿರುವ ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯದ ಸುಸ್ಥಿರ ಸ್ಥಿತಿ ಅವಶ್ಯಕವಾಗಿದೆ. ಆರೋಗ್ಯ ಸಮಸ್ಯೆಯಾದಾಗ ವೈದ್ಯರಲ್ಲಿ ತೆರಳಲು ಯಾರು ಅಂಜಿಕೆಯನ್ನು ಇಟ್ಟುಕೊಳ್ಳಬಾರದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಕೋಟೇಶ್ವರದ ಯುವ ಮೆರಿಡಿಯನ್ ಸಭಾಂಗಣದಲ್ಲಿ ಶನಿವಾರ ನಡೆದ ಭಾರತೀಯ ಮನೋ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ 32ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ ಸಮಸ್ಯೆ ಸೇರಿದಂತೆ ಯಾವುದೆ ಆರೋಗ್ಯ ಸಮಸ್ಯೆಗಳಿಗೆ ತಕ್ಷಣವೇ ವೈದ್ಯರನ್ನು ಕಂಡು ಸಮಾಲೋಚನೆ ನಡೆಸಿ, ಚಿಕಿತ್ಸೆ ಪಡೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ವೈದ್ಯರಲ್ಲಿ ಹೋಗದೆ ಇದ್ದಲ್ಲಿ, ಸಮಸ್ಯೆಗೆ ಪರಿಹಾರವೇ ದೊರಕುವುದಿಲ್ಲ. ಇಂದಿನ ಒತ್ತಡದ ಪ್ರಪಂಚದಲ್ಲಿ ಮಾನಸಿಕ ಆರೋಗ್ಯವನ್ನು ಸಮುದಾಯದ ನೆಲೆಯಲ್ಲಿ ವಿಸ್ತರಿಸಲು ನಡೆಯುತ್ತಿರುವ ಈ ಸಮ್ಮೇಳನ ಅರ್ಥಪೂರ್ಣವಾಗಿದೆ ಎಂದರು.
ಟ್ರಸ್ಟ್ ಮೇಲೆ ಟ್ರಸ್ಟ್ ಇಡಿ :
ಮಾನಸಿಕ ಆರೋಗ್ಯ ರಕ್ಷಣೆಗಾಗಿ ನಮ್ಮ ಕುಟುಂಬ ಸದಸ್ಯರ ಸಹಕಾರದೊಂದಿಗೆ ರಚಿಸಲಾದ ಟ್ರಸ್ಟ್ ಮೂಲಕ ಉಡುಪಿ ಜಿಲ್ಲೆಯ ಹೆಸರಾಂತ ಮನೋವೈದ್ಯರ ಸಹಯೋಗದೊಂದಿಗೆ ಒಂದಷ್ಟು ಕೆಲಸಗಳು ನಡೆಯುತ್ತಿದೆ. ಆದರೆ ಜನ ಚಿಕಿತ್ಸೆಗಾಗಿ ಹಣದ ನೆರವನ್ನು ಕೇಳುತ್ತಾರೆಯೇ ಹೊರತು. ಚಿಕಿತ್ಸೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಾರೆ.
ಮಾನಸಿಕ ಆರೋಗ್ಯ ಪಡೆಯಲು ಹಿಂಜರಿಯಲು ಕಾರಣವಾಗಿರುವ ಇಂತಹ ಮೌಢ್ಯತೆ ಸಮಾಜದಿಂದ ದೂರವಾಗದ ಹೊರತು ಸಮಸ್ಯೆ ಬಗೆಹರಿಯುವುದಿಲ್ಲ. ಸಮ್ಮೇಳನದ ಆಶಯಗಳು ಜಾರಿಯಾಗಲು ಒಳ್ಳೆಯ ಉದ್ದೇಶಗಳನ್ನು ಹೊಂದಿರುವ ಟ್ರಸ್ಟ್‍ಗಳ ಮೇಲೆ ಜನರು ಟ್ರಸ್ಟ್ ( ನಂಬಿಕೆ ) ಇಡಲಿ ಎಂದು ಜಯಪ್ರಕಾಶ ಹೆಗ್ಡೆ ನುಡಿದರು.
ಭಾರತೀಯ ಮನೋ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಎನ್.ಎನ್.ರಾಜು, ಕರ್ನಾಟಕ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ದೇಶದಲ್ಲಿಯೇ ಮುಂಚೂಣಿಯ ಸ್ಥಾನದಲ್ಲಿದೆ. ಹೊಸ ಬದಲಾವಣೆ ಹಾಗೂ ಯೋಜನೆಗಳ ಅನುಷ್ಠಾನದಲ್ಲಿಯೂ ಮುಂದಿದೆ. ಕುಂದಾಪುರ ಸಣ್ಣ ನಗರವಾಗಿದ್ದರೂ, ಇಲ್ಲಿನ ಡಾ.ಕೆ.ಎಸ್.ಕಾರಂತರಂತಹ ಹಿರಿಯ ಮನೋವೈದ್ಯರು ನೀಡುತ್ತಿರುವ ಉತ್ತಮ ಸೇವೆ ದೇಶ ವ್ಯಾಪಿ ಮನೆ ಮಾತಾಗಿದೆ ಎಂದರು.
ಭಾರತೀಯ ಮನೋ ವೈದ್ಯಕೀಯ ಸಂಘ ಕರ್ನಾಟಕ ಶಾಖೆ ಅಧ್ಯಕ್ಷ ಡಾ.ಪಿ.ಕಿರಣ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಿಯೋಜಿತ ಅಧ್ಯಕ್ಷ ಡಾ.ವಿನಯಕುಮಾರ್, ದಕ್ಷಿಣ ವಲಯ ಅಧ್ಯಕ್ಷ ಡಾ.ಉದಯಕುಮಾರ್, ಕರ್ನಾಟಕ ಶಾಖೆಯ ನಿಯೋಜಿತ ಅಧ್ಯಕ್ಷ ಡಾ.ಎನ್.ಎಂ.ಪಾಟೀಲ್, ಗೌರವ ಕಾರ್ಯದರ್ಶಿ ಡಾ.ಸೋಮಶೇಖರ್ ಬಿಜ್ಜಲ್ ಇದ್ದರು.
ದೇಶದ ವಿವಿಧ ಭಾಗಗಳಿಂದ ಬಂದಿದ್ದ ಮನೋ ವೈದ್ಯರು ಹಾಗೂ ಇತರ ವೈದ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಹಿರಿಯ ವೃತ್ತಿ ಪರ ಮನೋ ವೈದ್ಯರನ್ನು ಗೌರವಿಸಲಾಯಿತು. ವಿವಿಧ ಪ್ರಶಸ್ತಿ ವಿಜೇತರನ್ನು ಪುರಸ್ಕರಿಸಲಾಯಿತು. ಸಮ್ಮೇಳನ ಸಮಿತಿಯ ಕಾರ್ಯದರ್ಶಿ ಡಾ.ರವೀಂದ್ರ ಮುನೋಳಿ ವಂದಿಸಿದರು.

Spread the love

Leave a Reply

Please enter your comment!
Please enter your name here