ಪ್ರತಿಯೊಬ್ಬ ನಾಗರಿಕನಿಗೆ ಹರ್ಷ ತಂದಾಗ ಮಾತ್ರ ದೇಶಕ್ಕೆ ಸಿಕ್ಕಿದ ಸ್ವಾತಂತ್ರ್ಯ ಸಾರ್ಥಕ – ಬಿಷಪ್ ಜೆರಾಲ್ಡ್ ಲೋಬೊ

Spread the love

ಪ್ರತಿಯೊಬ್ಬ ನಾಗರಿಕನಿಗೆ ಹರ್ಷ ತಂದಾಗ ಮಾತ್ರ ದೇಶಕ್ಕೆ ಸಿಕ್ಕಿದ ಸ್ವಾತಂತ್ರ್ಯ ಸಾರ್ಥಕ – ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ: ಈ ದೇಶದ ಅತಿ ಕನಿಷ್ಠ ನಾಗರಿಕನು ಮೂಲಭೂತ ಹಕ್ಕುಗಳನ್ನು ಗಳಿಸಿ, ಸ್ವಾತಂತ್ರ್ಯದ ಅನುಭವವನ್ನು ಪಡೆದಾಗಲೇ ಈ ದೇಶಕ್ಕೆ ಸಿಕ್ಕಿದ ಸ್ವಾತಂತ್ರ್ಯ ಸಾರ್ಥಕ ಎಂದು ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ

ಸ್ವಾತಂತ್ರದ ಅಮೃತ ಮಹೋತ್ಸವವು ಈ ಭವ್ಯ ಭಾರತ ದೇಶದ ಪ್ರಜೆಗಳಾದ ನಮಗೆಲ್ಲರಿಗೂ ಹೆಮ್ಮೆಯ ಹಾಗೂ ಅತೀವ ಆನಂದದ ದಿನ. ಸ್ವಾತಂತ್ರ್ಯ ದಿನವನ್ನು ಆಚರಿಸುವ ಮುಖ್ಯ ಗುರಿ ಸಕಲ ಭಾರತೀಯರಿಗೆ ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ದೇಶಭಕ್ತಿ ಮತ್ತು ಧೈರ್ಯಗಳಿಂದ ಪ್ರೇರಿತರಾಗುವಂತೆ ಮಾಡುವುದು. ಎಲ್ಲಾ ಸಾಂಸ್ಕೃತಿಕ ಭಿನ್ನತೆಗಳನ್ನು ಬದಿಗೊತ್ತಿ ನಿಜವಾದ ಭಾರತೀಯರಾಗಿ ಒಂದಾಗುವ ದಿನವಿದು. ಒಗ್ಗಟ್ಟಿನಿಂದ ಹೋರಾಡಿದರೆ ಜಯವು ಶತಸಿದ್ಧ ಎಂದು ಮತ್ತೊಮ್ಮೆ ಒಪ್ಪಿಕೊಳ್ಳುವ ದಿನ.

ದೇಶದ ಸ್ವಾತಂತ್ರದ ಅಮೃತ ಮಹೋತ್ಸವದ ಈ ದಿನವು ದೇಶದ ವೈವಿಧ್ಯತೆಯಲ್ಲಿ ನಮ್ಮ ಹೆಮ್ಮೆ ಮತ್ತು ಒಗ್ಗಟ್ಟನ್ನು ಪ್ರತಿಬಿಂಬಿಸುತ್ತದೆ. ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ವೈವಿಧ್ಯಮಯ ಸಮಾಜದಲ್ಲಿ ಎಲ್ಲಾ ಧರ್ಮಗಳ ಜನರು ಒಟ್ಟಾಗಿ ವಾಸಿಸುವ ಭಾರತವು ಈ ಮಹತ್ವದ ಸಂದರ್ಭವನ್ನು ಸಂತೋಷದಿಂದ ಆಚರಿಸುತ್ತದೆ. ದೇಶದ ಘನತೆ ಮತ್ತು ಸಾರ್ವಭೌಮತ್ವದ ಮೇಲಿನ ಯಾವುದೇ ದಾಳಿಯ ವಿರುದ್ಧ ನಮ್ಮ ಮಾತೃಭೂಮಿಯನ್ನು ರಕ್ಷಿಸಲು ಇದು ನಮ್ಮನ್ನು ಪ್ರೇರೇಪಿಸುತ್ತದೆ.

ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡ ಭಾರತ ದೇಶವು ಹಲವು ಹೊಸತುಗಳನ್ನು ಕಂಡಿದೆ. ಹಲವು ಸಾಧನೆಗಳಿಗೆ ಸಾಕ್ಷಿಯಾಗಿದೆ. ಈ ಸಾಧನೆ, ಅಭಿವೃದ್ಧಿಗಳ ಸಂಖ್ಯೆ ಸ್ವತಂತ್ರ ಭಾರತದಲ್ಲಿ ಹೆಚ್ಚುತ್ತಲೇ ಇರುತ್ತದೆ ಹೊರತು, ಎಂದಿಗೂ ಇದಕ್ಕೆ ಅಂತ್ಯ ಎನ್ನುವುದಿಲ್ಲ. ಎಲ್ಲಿ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತದೋ, ಎಲ್ಲಿಯವರೆಗೆ ಪ್ರಜೆಗಳು ಸ್ವಾತಂತ್ರ್ಯರಾಗಿರುತ್ತಾರೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ, ಪ್ರಜೆಗಳ ಅಭಿವೃದ್ಧಿ, ನಾಡಿನ ಅಭಿವೃದ್ಧಿ, ಮತ್ತು ಕುಟುಂಬಗಳ ಅಭಿವೃದ್ಧಿ ನಿರಂತರವಾಗಿ ಸಾಗುತ್ತಿರುತ್ತದೆ. ಅದಕ್ಕೆ ಇಂದಿನ ಭಾರತವೇ ಸಾಕ್ಷಿ.

ಸ್ವಾತಂತ್ರ ಹೋರಾಟಗಾರರು ತಮ್ಮ ರಕ್ತವನ್ನೇ ಹರಿಸಿ, ಗಳಿಸಿದ ಸ್ವಾತಂತ್ರ್ಯವನ್ನು ಕಾಪಾಡುವ ಅತ್ಯಂತ ಗಂಭೀರ ಜವಾಬ್ದಾರಿ ನಮ್ಮದಾಗಿದೆ. ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ ಈ ದೇಶದಲ್ಲಿ ಸಮರ್ಥ ನಾಯಕರನ್ನು ಆರಿಸುವುದರಿಂದ ಹಿಡಿದು ಅವರು ತಮ್ಮ ಕರ್ತವ್ಯವನ್ನು ಪಾಲಿಸುವಂತೆ ನೋಡಿಕೊಳ್ಳುವುದು ಪ್ರಜೆಗಳ ಕರ್ತವ್ಯವಾಗಿದೆ. ಈ ಮಹಾನ್ ದೇಶವನ್ನು ಸಕಲ ವೈವಿಧ್ಯತೆಗಳ ರಾಷ್ಟ್ರವಾಗಿ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದು.

ಈ ವರ್ಷದ ಆಗಸ್ಟ್ 15 ಕೇವಲ ಆಚರಣೆಯಾಗಬಾರದು, ಬದಲಾಗಿ ಇನ್ನೂ ಬಡತನ, ಹಸಿವು ಮತ್ತು ಗುಲಾಮಗಿರಿಯಿಂದ ಮುಕ್ತವಾಗದ ಬಡವರ ಬಗ್ಗೆ ನಾವು ಯೋಚಿಸಬೇಕು. ಸ್ವಾತಂತ್ರ್ಯ ಪ್ರತಿಯೊಬ್ಬ ಭಾರತೀಯನಿಗೂ ಹರ್ಷ ತರಬೇಕು. ಈ ದೇಶದ ಅತಿ ಕನಿಷ್ಠ ನಾಗರಿಕನು ಮೂಲಭೂತ ಹಕ್ಕುಗಳನ್ನು ಗಳಿಸಿ, ಸ್ವಾತಂತ್ರ್ಯದ ಅನುಭವವನ್ನು ಪಡೆದಾಗಲೇ ಈ ದೇಶದ ಸಿಕ್ಕಿದ ಸ್ವಾತಂತ್ರ್ಯ ಸಾರ್ಥಕ.

ಭವ್ಯ ಭಾರತದ ಸಕಲ ಪ್ರಜೆಗಳಿಗೂ ರಾಷ್ಟ್ರದ ಸ್ವಾತಂತ್ರದ ಅಮೃತ ಮಹೋತ್ಸವದ ಶುಭಾಷಯಗಳನ್ನು ಕೋರುತ್ತೇನೆ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.


Spread the love