ಪ್ರಧಾನಿ ಭೇಟಿ ಹಿನ್ನಲೆ: ಕೃಷ್ಣ ಮಠ ಸುತ್ತಮುತ್ತ ಅಂಗಡಿ ಬಂದ್ ಮತ್ತು ‘ನೋ ಫ್ಲೈ ಝೋನ್’ ಆದೇಶ
ಉಡುಪಿ: ಭಾರತದ ಪ್ರಧಾನಮಂತ್ರಿಯವರು ದಿನಾಂಕ 28 ನವೆಂಬರ್ 2025ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಶಿಷ್ಟಾಚಾರ ಹಾಗೂ ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಲುವಾಗಿ ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸ್ವರೂಪ ಟಿ.ಕೆ., ಭಾ.ಆ.ಸೇ. ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023ರ ಸೆಕ್ಷನ್ 163 ಅಡಿಯಲ್ಲಿ ಮಹತ್ವದ ಆದೇಶಗಳನ್ನು ಹೊರಡಿಸಿದ್ದಾರೆ.
- ಪ್ರಧಾನಮಂತ್ರಿಗಳ ಭೇಟಿಯ ಹಿನ್ನೆಲೆಯಲ್ಲಿ ಅವರ ಸಂಚಾರ ಮಾರ್ಗದ ಎರಡು ಕಡೆಗಳಲ್ಲಿ ಇರುವ ಹೆಲಿಪ್ಯಾಡ್ ವಠಾರ, ಶ್ರೀ ಕೃಷ್ಣ ಮಠ ವಠಾರ ಹಾಗೂ ಪ್ರವಾಸಿ ಮಂದಿರದ ಸುತ್ತಮುತ್ತಲ ಅಂಗಡಿ-ಮುಂಗಟ್ಟುಗಳನ್ನು ದಿನಾಂಕ 28/11/2025ರಂದು ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯವರೆಗೆ ಮುಚ್ಚುವಂತೆ ಆದೇಶಿಸಲಾಗಿದೆ.
- ಇದಲ್ಲದೆ, ಭದ್ರತೆಯ ದೃಷ್ಟಿಯಿಂದ 26/11/2025ರ ಬೆಳಿಗ್ಗೆ 6.00 ಗಂಟೆಯಿಂದ 28/11/2025ರ ಸಂಜೆ 6.00 ಗಂಟೆಯವರೆಗೆ ಉಡುಪಿ ನಗರ ವ್ಯಾಪ್ತಿಯ 5 ಕಿ.ಮೀ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ “ನೋ ಫ್ಲೈ ಝೋನ್” ಎಂದು ಘೋಷಿಸಲಾಗಿದೆ.
- ಪ್ರಧಾನಮಂತ್ರಿಗಳ ಕಾರ್ಯಕ್ರಮ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರು ಯಾವುದೇ ತರದ ಬ್ಯಾಗುಗಳು, ನೀರಿನ ಬಾಟಲಿಗಳು, ಧ್ವಜಗಳು, ಸ್ಟಿಕ್ಕರ್ಗಳು, ಬಲೂನ್ಸ್, ಪಟಾಕಿಗಳು ಹಾಗೂ ಲೂಸ್ ಪಾಲಿಥಿನ್ ಸಾಮಗ್ರಿಗಳನ್ನು ತರುವುದನ್ನು ನಿಷೇಧಿಸಲಾಗಿದೆ.
ಈ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ BNSS 2023ರ ಸೆಕ್ಷನ್ 163 ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
