ಪ್ರಧಾನಿ ಮೋದಿ ಕಾರ್ಪೊರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ – ಬಾಲಕೃಷ್ಣ ಶೆಟ್ಟಿ

Spread the love

ಪ್ರಧಾನಿ ಮೋದಿ ಕಾರ್ಪೊರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ – ಬಾಲಕೃಷ್ಣ ಶೆಟ್ಟಿ

ಉಡುಪಿ: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ನೂತನ ರೈತರ ಕಾಯ್ದೆ ತಿದ್ದುಪಡಿ ರೈತ ವಿರೋಧಿಯಾಗಿದ್ದು. ದೇಶದ ಪ್ರಧಾನಿ ನರೇಂದ್ರ ಮೋದಿ ಕಾರ್ಪೊರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಿ ಪಿ ಐ ಎಂ ನಾಯಕ ಬಾಲಕೃಷ್ಣ ಶೆಟ್ಟಿ ಹೇಳಿದರು.

ಅವರು ಮಂಗಳವಾರ ಉಡುಪಿಯಲ್ಲಿ ಭಾರತ್ ಬಂದ್ ಪ್ರಯುಕ್ತ ವಿವಿಧ ಸಂಘಟನೆಗಳು ಜಂಟಿಯಾಗಿ ಆಯೋಜಿಸಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಅದಾನಿ ಅಂಬಾನಿ ಗಳಿಗೆ ಬೆಂಬಲ ನೀಡುವ ಇಂತಹ ಕಾಯ್ದೆಗಳಿಗೆ ನಮ್ಮ ಬೆಂಬಲವಿಲ್ಲ. ಕೇಂದ್ರ ಸರಕಾರದ ಜೊತೆ ಆರು ಸುತ್ತುಗಳ ಮಾತುಕತೆ ನಡೆದರೂ ಫಲ ನೀಡದ ಕಾರಣ ಭಾರತದ ನಡೆಸುವುದು ಅನಿವಾರ್ಯವಾಗಿದೆ. ಮೋದಿ ಸರ್ಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ. ಬಿಜೆಪಿ ಸರಕಾರ ಬಹುರಾಷ್ಟ್ರೀಯ ಕಂಪೆನಿಗಳ ಪರವಾಗಿ ಇದೆಯೇ ಹೊರತು ರೈತರ, ಕಾರ್ಮಿಕರ ಪರವಾಗಿಲ್ಲ ಎಂಬುದು ಇದೀಗ ಅರ್ಥವಾಗು ತ್ತಿದೆ. ಸಣ್ಣ ರೈತರ ಭೂಮಿಗಳನ್ನು ಬಹುರಾಷ್ಟ್ರೀಯ ಕಂಪೆನಿಗಳ ಕೈಗೆ ಒಪ್ಪಿಸಿ ರೈತರನ್ನು ಕೂಲಿಗಳಾಗಿ ದುಡಿಸಿಕೊಳ್ಳಲಾಗುತ್ತದೆ. ರೈತರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಈ ಹೋರಾಟ ಮಾಡುತ್ತಿದ್ದಾರೆ. ದೇಶದ ಬಹುತೇಕ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತಿರುವ ಕೇಂದ್ರ ಸರಕಾರ, ಇದೀಗ ಕೃಷಿ ಕ್ಷೇತ್ರವನ್ನು ಕೂಡ ಖಾಸಗಿಯವರಿಗೆ ಒಪ್ಪಿಸಲು ಹೊರಟಿದೆ ಎಂದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಕಿಸಾನ್ ಕಾಂಗ್ರೆಸ್ನ ಶಶಿಧರ್ ಶೆಟ್ಟಿ ಎರ್ಮಾಳ್, ಜಿಲ್ಲಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಅಣ್ಣಯ್ಯ ಶೇರಿಗಾರ್,ಜೆ ಡಿ ಎಸ್ ನ ಎಸ್ ಪಿ ಬಾರ್ಬೋಜಾ, ಸಿಐಟಿಯು ಮುಖಂಡ ವಿಶ್ವನಾಥ್ ರೈ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಆತ್ರಾಡಿ, ವೆಲ್ಫೇರ್ ಪಾರ್ಟಿಯ ಅಬ್ದುಲ್ ಅಝೀಝ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಳೆ, ಹುಸೇನ್ ಕೋಡಿಬೆಂಗ್ರೆ, ಸಲಾವುದ್ದೀನ್ ಅಬ್ದುಲ್ಲಾ, ಎನ್ಎಸ್ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್, ಪ್ರಶಾಂತ್ ಜತ್ತನ್ನ, ಇದ್ರೀಸ್ ಹೂಡೆ ಮೊದಲಾದವರು ಉಪಸ್ಥಿತರಿದ್ದರು.


Spread the love