ಪ್ರಪಂಚದಲ್ಲಿ ನಾಲ್ಕು ಕ್ಯಾಲೆಂಡರ್ ಗಳನ್ನು ಅನುಸರಿಸುವವರು ತುಳುವರು : ಡಾ. ರಾಜೇಶ್ ಆಳ್ವ

Spread the love

ಪ್ರಪಂಚದಲ್ಲಿ ನಾಲ್ಕು ಕ್ಯಾಲೆಂಡರ್ ಗಳನ್ನು ಅನುಸರಿಸುವವರು ತುಳುವರು : ಡಾ. ರಾಜೇಶ್ ಆಳ್ವ

ಬೆಂಗಳೂರು : ತುಳುವರು ನಾಲ್ಕು ಕ್ಯಾಲೆಂಡರ್ ಗಳನ್ನು ಅನುಸರಿಸುತ್ತಿದ್ದಾರೆ ಒಂದು ಸಂವತ್ಸರಾಧಾರಿತ ಮತ್ತು ಸೂರ್ಯಮಾನಾದಾರಿತ ಸಂಸ್ಕೃತ ಕ್ಯಾಲೆಂಡರ್, ಸೂರ್ಯಮಾನಾದಾರಿತ ತುಳುವ ಕ್ಯಾಲೆಂಡರ್, ಚಂದ್ರಮಾನ ಆಧಾರಿತ ಕ್ಯಾಲೆಂಡರ್, ಅದೇ ರೀತಿ ಇಂಗ್ಲಿಷ್ ಕ್ಯಾಲೆಂಡರ್. ಈ ಕಾರಣದಿಂದಾಗಿ ತುಳುವರ ಆಚಾರ ವಿಚಾರ ಧರ್ಮ ಪರಿಪಾಲನೆಯಲ್ಲಿ ಸಂಪೂರ್ಣವಾಗಿ ಗೊಂದಲ ಇದೆ. ತುಳುವರು ಮೊದಲು ಸೂರ್ಯಾದಾರಿತ ಕಾಲ ನಿರ್ಣಯವನ್ನು ಮಾಡುತ್ತಿದ್ದರು. ಅದಕ್ಕೆ ಅನುಗುಣವಾಗಿ ಏಳು ವಾರಗಳು ಪಗ್ಗುವಿನಿಂದ ಸುಗ್ಗಿವರೆಗೆ 12 ತಿಂಗಳುಗಳು ತುಳುವರಿಗೆ ಇದೆ. ಈ ಕ್ಯಾಲೆಂಡರ್ ನಲ್ಲಿ ಬರುವುದು ಸೂರ್ಯ ಆಧಾರಿತ ಪ್ರಕೃತಿಗೆ ಸಂಬಂಧಪಟ್ಟ ಹಬ್ಬ ಹರಿದಿನಗಳು. ಬಾಕಿ ಎಲ್ಲಾ ಕ್ಯಾಲೆಂಡರ್ಗಳಲ್ಲಿ ಬರುವ ಹಬ್ಬಗಳು ವ್ಯವಹಾರಿಕವಾಗಿ ಲಾಭ ಗಳಿಸುತ್ತಿದ್ದಾರೆ. ತುಳುವರ ಎಲ್ಲಾ ಹಬ್ಬಗಳು ವ್ಯವಹಾರಿಕ ದೃಷ್ಟಿಕೋನದಿಂದ ದೂರ ಇದ್ದು ಪ್ರಕೃತಿಯ ಸಂರಕ್ಷಣೆಯನ್ನು ಪ್ರತಿಪಾದಿಸುತ್ತದೆ. ಯಾರಿಗೂ ಲಾಭವಿಲ್ಲದ ಕಾರಣದಿಂದಾಗಿ ತುಳುವರ ಹಬ್ಬ ಹರಿದಿನಗಳು ಸದ್ದಿಲ್ಲದೆ ಮರೆಯಾಗುತ್ತಿದೆ.

ತುಳುವರಿಗೆ ಪ್ರತ್ಯೇಕ ಧರ್ಮವಿಲ್ಲ ಹಾಗೆಯೇ ಎಲ್ಲಾ ಧರ್ಮದವರು ತುಳುವನ್ನು ಅಪ್ಪಿಕೊಂಡಿದ್ದಾರೆ ಒಪ್ಪಿಕೊಂಡಿದ್ದಾರೆ. ಆದರೆ ತುಳುವರಿಗೆ ಊರಿಗೊಂದು ನಿಯಮವಿದೆ ನೇಮವಿದೆ. ಈ ನೇಮವನ್ನು ಅನುಸರಿಸುವಲ್ಲಿ ತುಳುವರು ವಿಫಲರಾಗುತ್ತಿದ್ದಾರೆ. ತುಳುವರು ನೇಮ ನಿಯಮಗಳನ್ನು ಪಾಲಿಸಿಕೊಂಡು ತುಳು ಕಾಲ ನಿರ್ಣಯವನ್ನು ಅನುಸರಿಸಿಕೊಂಡು ಮುನ್ನಡೆದರೆ ಜಗತ್ತಿನ ಅತ್ಯಂತ ಶ್ರೇಷ್ಠ ಸಂಸ್ಕೃತಿಯನ್ನು ಉಳಿಸಿಕೊಂಡಂತಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ತುಳುವನು ಕಾರ್ಯ ಪ್ರವೃತ್ತರಾಗಬೇಕೆಂದು ಅಖಿಲ ಭಾರತ ತುಳು ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಡಾ. ರಾಜೇಶ್ ಆಳ್ವರವರು ಅಭಿಪ್ರಾಯ ಪಟ್ಟರು.

ಅವರು ತುಳುವೆರೆಂಕುಲು ಬೆಂಗಳೂರು ಇವರು ಬೆಂಗಳೂರು ನಯನ ಸಭಾಂಗಣದಲ್ಲಿ ನಡೆಸಿದ ಬಿಸು ಪರ್ಬ ಮತ್ತು ವಸಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತುಳುವೆರೆಂಕುಲು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯಂತ್ ರಾವ್ ಅವರು ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ ರಮಾನಾಥ್ ಭಟ್, ಮಾಜಿ ಅಧ್ಯಕ್ಷರು ತುಳುವೆರೆಂಕುಲು,ಕೆ ಪಿ ಪುತ್ತೂರಾಯ . ಮಾಜಿ ಅಧ್ಯಕ್ಷರು ತುಳುವೆರೆಂಕುಲು ಮೊದಲಾದವರು ಮಾತನಾಡಿದರು.
ವಿಶೇಷ ಅಭ್ಯಾಗತರಾಗಿ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕರಾದ ಡಾ.ರಮೇಶ್ ಚಂದ್ರ, ಜಗದೀಶ ಅಧಿಕಾರಿ ಮೂಡುಬಿದಿರೆ, ಡಾ. ಭರತ್ ಶೆಟ್ಟಿ ಕುಂಪಳ, ರೇಣುಕಾ ಪ್ರಸಾದ್ ಬೆಂಗಳೂರು, ಸುಂದರ್ ರಾಜ್ ರೈ ಬೆಂಗಳೂರು, ರಾಮಕೃಷ್ಣ ಭಟ್ ಮೈರುಗ ಮೊದಲಾದವರು ಉಪಸ್ಥಿತರಿದ್ದರು.
ತುಳುವೆರೆಂಕುಲು ಕಾರ್ಯದರ್ಶಿ ಪಳ್ಳಿ ವಿಶ್ವನಾಥ್ ರೈ ಸ್ವಾಗತಿಸಿ ಉಪಾಧ್ಯಕ್ಷರು ಚಂದ್ರಹಾಸ್ ವಂದನಾರ್ಪಣೆ ಮಾಡಿದರು. ಡಾ. ಕೆ ಎನ್ ಅಡಿಗ ಅಡೂರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಕಾರ್ಯಕ್ರಮದ ಉದ್ದಗಲಕ್ಕೂ ನಡೆದ ತುಳು ರಸಮಂಜರಿ ಕಾರ್ಯಕ್ರಮವು ಮುಕುಂದ ಪೈ ತಂಡದವರಿಂದ ಸುಂದರವಾಗಿ ಮೂಡಿ ಬಂತು.
ಶ್ರೀಮತಿ ಅರ್ಚನಾ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಣೆ ಮಾಡಿದರು. ತುಳುನಾಡಿನ ಪ್ರಕೃತಿ ಆರಾಧನೆ, ಪ್ರಾಕೃತಿಕ ಸೊಬಗು, ಭೂತಾರಾಧನೆ, ಕೋಲ ತಂಬಿಲ, ವೀರ ಪುರುಷರಾದ ಕೋಟಿ ಚೆನ್ನಯರ ಪ್ರಾತ್ಯಕ್ಸಿತೆಯನ್ನು ಸಾರುವ ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು. ಮೊದಲಿಗೆ ತುಳು ಭಾಷೆಯ ಖ್ಯಾತ ಸಂಗೀತ ರಚನಾಕಾರರಾದ ಶ್ರೀ ವಿದ್ಯಾಭೂಷಣ, ವೆಂಕಟ ರಾಜ್ ಪುಣಿಚಿತ್ತಾಯ ಇವರು ರಚಿಸಿದ ದೇವರ ಹಾಡುಗಳನ್ನು ಹಾಡಿದರು.

1970ರ ದಶಕದ ಜನಪ್ರಿಯ ಚಿತ್ರಗೀತೆಗಳಾದ ಕೆಮ್ಮಲೆತಾ ಬ್ರಹ್ಮ, ಮೋಕೆದ ಸಿಂಗಾರಿ, ಇಂಪು ಸಂಪು ಜಾಗೆ, ದಾನೆ ಪೊಣೈ, ಎಕ್ಕ ಸಕ ಎಕ್ಕ ಸಕ, ಇತ್ಯಾದಿ ಹಾಡುಗಳ ಮೂಲಕ ಪ್ರೇಕ್ಷಕರ ಮನ ಸೂರೆಗೊಂಡಿತು. ತುಳು ಭಾಷೆಯ ಖ್ಯಾತ ಕವಿಗಳಾದ ರಘುನಾಥ ರೈ ನುಳಿಯಾಲು, ಪಾಲ್ತಾಡಿ ರಾಮಕೃಷ್ಣ ಆಚಾರ್ ರವರ ಭಾವಗೀತೆಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ಮಾಸ್ಟರ್ ಚಿನ್ಮಯ್ ಪೈ ಯವರು ವೇಣು ವಾದನದಲ್ಲಿ ವಾತಾಪಿ ಗಣಪತಿಂಬಜೆ ಹಾಡಿನೊಂದಿಗೆ ಪ್ರಾರಂಭಿಸಿ ಬಾರಿ ಭಾಗ್ಯದ ನಿಧಿಯೆ, ಬ್ರಿಂದವನಿ ಸಾರಂಗ್, ಪಿಲ್ಲಂಗೋವಿಯ ಇತ್ಯಾದಿ ಹಾಡುಗಳು ವಿಶೇಷ ಆಕರ್ಷಣೆಯಾಗಿತ್ತು.

ಮಾಸ್ಟರ್ ಭುವನ್ ಶೆಟ್ಟಿ, ಕುಮಾರಿ ಅರ್ಚಿಷಾ ರಾವ್, ಶ್ರೀ ಮಾನಸ, ಶ್ರೀ ಮುಕುಂದ ಪೈ, ಶ್ರೀಮತಿ ವಂದನಾ ಮೂರ್ತಿ ಇವರುಗಳು ಹಾಡಿದರು, ಖ್ಯಾತ ಕೀ ಬೋರ್ಡ್ ವಾದಕರಾದ ರಮೇಶ್ ಹಾಗೂ ಖ್ಯಾತ ತಬಲಾ ವಾದಕರಾದ ಪ್ರಕಾಶ್ ರವರು ಪಕ್ಕ ವಾದ್ಯದಲ್ಲಿ ಸಹಕರಿಸಿದರು
ತುಳುನಾಡಿನ ವಿಶೇಷ ಹಬ್ಬವಾದ ವಿಷು ಹಬ್ಬದ ವಿಷು ಕಣಿ ಮತ್ತು ವಿಷು ಪೂಜೆಯನ್ನು ನಾಗರಾಜ ಉಪಾದ್ಯಾಯರವರು ನೆರವೇರಿಸಿಕೊಟ್ಟರು. ಲಘು ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.


Spread the love