ಪ್ರಬಲ ಹೋರಾಟದ ಮೂಲಕ ಸ್ಥಳೀಯರು ಟೋಲ್ ಕಟ್ಟುವುದರಿಂದ ಮುಕ್ತರಾಗೋಣ – ಪ್ರತಾಪ್ ಶೆಟ್ಟಿ

Spread the love

ಪ್ರಬಲ ಹೋರಾಟದ ಮೂಲಕ ಸ್ಥಳೀಯರು ಟೋಲ್ ಕಟ್ಟುವುದರಿಂದ ಮುಕ್ತರಾಗೋಣ – ಪ್ರತಾಪ್ ಶೆಟ್ಟಿ

ಉಡುಪಿ: ಟೋಲ್ ವಿನಾಯತಿಗಾಗಿ ನಾವು ಇನ್ನೊಂದು ಸುತ್ತಿನ ಹೋರಾಟಕ್ಕೆ ಸಿದ್ದಗೊಳ್ಳಬೇಕಾಗಿದ್ದು ಒಂದುವೇಳೆ ಹೋರಾಟದಲ್ಲಿ ಹಿಂದೇಟು ಹಾಕಿದ್ದೇ ಆದಲ್ಲಿ ಮುಂದೆ ಜೀವಮಾನವಿಡಿ ಟೋಲ್ ಕಟ್ಟಬೇಕಾದ ಸ್ಥಿತಿ ನಿರ್ಮಾಣಗೊಳ್ಳಬೇಕಾಗುತ್ತದೆ ಆದ್ದರಿಂದ ಸ್ಥಳೀಯರಿಗೆ ಟೋಲ್ ವಿಧಿಸುವ ಆಡಳಿತ ವರ್ಗದ ವಿರುದ್ದ ಪ್ರಬಲ ಹೋರಾಟ ನಡೆಸುವ ಮೂಲಕ ಟೋಲ್ ಕಟ್ಟುವುದರಿಂದ ಮುಕ್ತರಾಗಬೇಕಾಗಿದೆ ಎಂದು ಸಾಸ್ತಾನ ಹೆದ್ದಾರಿ ಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಹೇಳಿದರು.

ಅವರು ಶುಕ್ರವಾರ ಸಾಸ್ತಾನ ಶಿವಕೃಪ ಕಲ್ಯಾಣ ಮಂಟಪದಲ್ಲಿ ಫೆಬ್ರವರಿ 15 ರಿಂದ ಸ್ಥಳೀಯರೂ ಕೂಡ ಟೋಲ್ ಪಾವತಿಸಬೇಕು ಎಂಬ ಸೂಚನೆಯ ಕುರಿತು ಸಮಾಲೋಚಿಸಲು ಕರೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸ್ಥಳೀಯರಾಗಿ ನಮ್ಮ ಹಕ್ಕನ್ನು ಹೋರಾಟ ಮಾಡಿ ಪಡೆಯುವ ಸ್ಥಿತಿ ಒದಗಿ ಬಂದಿರುವುದು ವಿಪರ್ಯಾಸದ ಸಂಗತಿಯಾಗಿದೆ. ನಮ್ಮ ಸಮಸ್ಯೆಯ ಬಗ್ಗೆ ನಾವು ಆರಿಸಿ ಕಳುಹಿಸಿದ ಬಗ್ಗೆ ನಾವುಹೋರಾಟ ಮಾಡಿ ತೆಗೆದುಕೊಳ್ಳುವ ಸ್ಥಿತಿ ಸೃಷ್ಟಿಯಾಗಿರುವುದು ವಿಪರ್ಯಾಸ. ಜನಪ್ರತಿನಿಧಿಗಳು ಇದರ ಬಗ್ಗೆ ಗಮನ ಹರಿಸಬೇಕಿತ್ತು ಆದರೆ ಅವರು ಮೌನವಾಗಿದ್ದು ನಾವು ನಮ್ಮ ಪ್ರಬಲ ಹೋರಾಟ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ತಮ್ಮ ಸಹಕಾರ ನೀಡಬೇಕಾಗಿದ್ದು ಹೋರಾಟದಿಂದ ಹಿಂದೆ ಸರಿಯದಂತೆ ಮನವಿ ಮಾಡಿದರು.

ಸಾಸ್ತಾನ ಹೆದ್ದಾರಿ ಜಾಗೃತಿ ಸಮಿತಿಯ ಶ್ಯಾಮಸುಂದರ ನಾಯಿರಿ, ಮಾತನಾಡಿ 2018 ರಲ್ಲಿ ನಡೆದ ದೊಡ್ಡ ಮಟ್ಟದ ಹೋರಾಟವನ್ನು ಟೋಲ್ ಟೋಲ್ ಗೇಟ್ ಬಳಿ ಹಮ್ಮಿಕೊಂಡಾಗ ಆ ಹೋರಾಟದಲ್ಲಿ ಭಾಗವಹಿಸಿದ್ದ ಸಂಸದರಾದ ಶೋಭಾ ಕರಂದ್ಲಾಜೆ, ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ರಘುಪತಿ ಭಟ್ ಹಾಗೂ ವಿಧಾನಪರಿಷತ್ ಸದಸ್ಯರಾದ ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ಜಿಲ್ಲಾಧಿಕಾರಿಗಳು, ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಸಮ್ಮುಖದಲ್ಲಿ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಾಹನಗಳಿಗೆ ಟೋಲ್ ವಿನಾಯತಿ ಘೋಷಣೆ ಮಾಡಲಾಗಿತ್ತು.

ಆದರೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಹಾಗೂ ಜಿಲ್ಲಾಡಳಿತದ ಹಾಗೂ ಹೆದ್ದಾರಿ ಅಧಿಕಾರಿಗಳ ಸಮ್ಮುಖದಲ್ಲೇ ತೆಗೆದುಕೊಂಡ ಈ ನಿರ್ಣಯ ಜಾರಿಯಲ್ಲಿರುವಂತೆಯೇ ಇದೀಗ ಏಕಾಏಕಿ ಫೆಬ್ರವರಿ 15ರಿಂದ ಸ್ಥಳೀಯರು ಕೂಡ ಟೋಲ್ ಪಾವತಿಸಬೇಕು ಹಾಗೂ ಸ್ಥಳೀಯ ಎಲ್ಲಾ ವಿನಾಯತಿಗಳನ್ನು ರದ್ದುಗೊಳಿಸುವ ಬಗ್ಗೆ ಟೋಲ್ ಅಧಿಕಾರಿಗಳು ಸೂಚನೆಗಳನ್ನು ನೀಡಿದ್ದಾರೆ. ಜಿಲ್ಲಾಡಳಿತ ಏಕಪಕ್ಷೀಯ ನಿರ್ಧಾರವನ್ನು ಪ್ರತಿಯೊಬ್ಬರು ವಿರೋಧಿಸಲಬೇಕಿದ್ದು ಈ ಹಿಂದೆ ಸಿಕ್ಕಿದ್ದ ರಿಯಾಯಿತಿ ಮುಂದುವರಿಸುವಂತಾಗಲು 2018ರಲ್ಲಿ ನಡೆಸಿರುವಂತೆ ತೀವ್ರ ಹೋರಾಟ ಅನಿವಾರ್ಯ. ಈ ನಿಟ್ಟಿನಲ್ಲಿ ಫೆಬ್ರವರಿ 6 ರಂದು ಶನಿವಾರ ಅಪರಾಹ್ನ 2.30ಕ್ಕೆ ಉಡುಪಿಗೆ ತೆರಳಿ ಸಚಿವರು, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಸಭೆಯಲ್ಲಿ ಜಾಗೃತಿ ಸಮಿತಿಯ ಆಲ್ವಿನ್ ಅಂದ್ರಾದೆ, ಪ್ರಶಾಂತ್ ಶೆಟ್ಟಿ, ವಿಠಲ್ ಪೂಜಾರಿ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.


Spread the love