
Spread the love
ಪ್ರಮೋದ್ ಮಧ್ವರಾಜ್ ವಟಗುಟ್ಟುವಿಕೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಲ್ಲ – ಅಶೋಕ್ ಕುಮಾರ್ ಕೊಡವೂರು
ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಗಿಟ್ಟಿಸಿ ಮೆರೆದು ಮತ್ತೇ ಅದೇ ಪಕ್ಷಕ್ಕೆ ದ್ರೋಹ ಬಗೆದು ಇದೀಗ ಎಲ್ಲೂ ಸಲ್ಲದವರಾಗಿ ನಗೆ ಪಾಠಲಿಗೀಡಾಗಿರುವ ಪ್ರಮೋದ್ ಮಧ್ವರಾಜರದ್ದು ಕೂಪ ಮಂಡೂಕದ ಮನಸ್ಥಿತಿ. ಇಂತವರ ವಟಗುಟ್ಟುವಿಕೆ ಯನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ರಾಜಕೀಯ ಸಂಸ್ಕಾರದ ಬಗ್ಗೆ ಮಾತಾನಾಡುವ ಮೊದಲು ಪ್ರಮೋದ್ ಮಧ್ವರಾಜ್ ತನ್ನ ರಾಜಕೀಯ ಸಂಸ್ಕಾರದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷದ ಫಲಾನುಭವಿಯೇ ಹೊರತು ಅದನ್ನು ಕಟ್ಟಿ ಬೆಳೆಸಿದವರಲ್ಲ. ಆ ಭ್ರಮೆ ಬೇಡ. ಪಕ್ಷದಿಂದ ಶಾಸಕನಾಗಿ, ಸಚಿವನಾಗಿ, ಸರಕಾರದಲ್ಲಿ ಅಧಿಕಾರದ ಉನ್ನತ ಹುದ್ದೇಯಲ್ಲಿದ್ದ ಹೊರತಾಗಿಯೂ ಆ ಹುದ್ದೆಗಳಿಗೆ ನ್ಯಾಯ ಒದಗಿಸದೆ, ಪಕ್ಷ ಸಂಘಟನೆಗೆ ಅಸಡ್ಡೆಯೊಡ್ಡಿ ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣರಾದವರು ಯಾರು ಎನ್ನುವುದು ಜಿಲ್ಲೆಯ ಜನರಿಗೆ ತಿಳಿದಿದೆ. ತನ್ನ ರಾಜಕೀಯ ಬದುಕಿನ ಅಸ್ತಿತ್ವಕ್ಕಾಗಿ ನಮ್ಮ ನಾಯಕರಿಗೆ ಡಂಬಾಲು ಬಿದ್ದು ಪಕ್ಷ ಕಾರ್ಯಕರ್ತರ ಇಚ್ಛೆಗೆ ವಿರುದ್ಧವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಅನ್ಯ ಪಕ್ಷದಿಂದ ಸ್ಪರ್ದಿಸಿದ ತಪ್ಪಿಗೆ ಸೋಲಾಗಿದೆಯೇ ಹೊರತು ಕಾಂಗ್ರೆಸ್ ಪಕ್ಷ ಸೋಲಿಸಿದ್ದಲ್ಲ. ಜೆಡಿಎಸ್ ಪಕ್ಷದ ಹಣದಿಂದ ರಾಜಕೀಯ ಮಾಡುವ ದುರಂತ ಪರಿಸ್ಥಿತಿ ಇಲ್ಲಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗಾಗಲಿ ಕಾರ್ಯಕರ್ತರಿಗಾಗಲಿ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕ್ಷೇತ್ರವಿಲ್ಲದೆ ಅಲೆದಾಡುತ್ತಿರುವ ಪ್ರಮೋದ್ ಮಧ್ವರಾಜ್ ತನ್ನ ಬಿಜೆಪಿಯ ನಾಯಕರನ್ನು ರಂಜಿಸಿ ಹೇಗಾದರೂ ಸೀಟುಗಿಟ್ಟಿಸಲು ಇಂತಹ ಅಪಸವ್ಯದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸಭಾ ನಿಯಮಾವಳಿಗಳನ್ನು ಹೇಳುವ ಮೊದಲು ತನ್ನ ಪಕ್ಷದಲ್ಲಿ ತನಗಾಗುತ್ತಿರುವ ತೇಜೋವದೆಯ ಬಗ್ಗೆ ಗಮನ ಹರಿಸಲಿ. ಮುಂದಿನ ಕುರ್ಚಿಯಲ್ಲಿ ಕುಳಿತು ಬೀಗುತ್ತಿದ್ದವರಿಗೆ ಇದೀಗ ಬಿಜೆಪಿಯಲ್ಲಿ ಹಿಂದಿನ ಸೀಟಿನಲ್ಲಿ ಕುಳಿತು ತಗ್ಗಿಬಗ್ಗಿ ಇಣುಕು ಹಾಕುವ ದುರ್ಗತಿ ಬಂದದ್ದು ಕಾಂಗ್ರೆಸ್ ಪಕ್ಷಕ್ಕೆ ಮಾಡಿದ ಮೋಸದ ಪಾಪದ ಫಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Spread the love