ಪ್ರವಾಸಿಗರಿಗೆ ರಿಲ್ಯಾಕ್ಸ್ ನೀಡುವ ಮೈಸೂರು

Spread the love

ಪ್ರವಾಸಿಗರಿಗೆ ರಿಲ್ಯಾಕ್ಸ್ ನೀಡುವ ಮೈಸೂರು

ಮೈಸೂರು: ಇದು ಪ್ರವಾಸಿಗರಿಗೆ ಸಕಾಲವಾಗಿದೆ. ಸದಾ ಕೆಲಸದ ಒತ್ತಡದಲ್ಲಿದ್ದವರು ಒಂದಷ್ಟು ಬಿಡುವು ಮಾಡಿಕೊಂಡು ದೂರದ ಊರುಗಳಿಗೆ ಹೋಗಿ ರಿಲ್ಯಾಕ್ಸ್ ಆಗಿ ಬರುವ ಕಾಲವಾಗಿದೆ. ಪ್ರವಾಸಕ್ಕೆ ಆಗಮಿಸುವವರಿಗೆ ಮೈಸೂರು ಸೂಕ್ತ ತಾಣವಾಗಿದೆ.

ಈಗಂತು ದಸರಾ ಸಮಯವಾಗಿರುವುದರಿಂದ ಮೈಸೂರು ಪ್ರವಾಸಿಗರ ಸ್ವಾಗತಕ್ಕಾಗಿ ಕಾಯುತ್ತಿದೆ. ಸೆ.26ರಿಂದ ದಸರಾ ಕಾರ್ಯಕ್ರಮಗಳು ವಿಧ್ಯುಕ್ತವಾಗಿ ಆರಂಭವಾಗಲಿದ್ದು ಪ್ರತಿದಿನವೂ ಕಾರ್ಯಕ್ರಮಗಳು ನಡೆಯಲಿವೆ. ಇದರ ಜತೆಗೆ ದೂರದಿಂದ ಬರುವ ಪ್ರವಾಸಿಗರಿಗೆ ತೆರಿಗೆ ವಿನಾಯಿತಿಯನ್ನು ಸರ್ಕಾರ ಘೋಷಿಸಿದೆ.

ಹಾಗೆನೋಡಿದರೆ ಮೈಸೂರು ಪ್ರವಾಸಿಗರ ಸ್ವರ್ಗವಾಗಿದ್ದು, ಇಲ್ಲಿ ನೋಡತಕ್ಕ ಹಲವಾರು ತಾಣಗಳು ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಊಟ ತಿಂಡಿಗೆ, ವಾಸ್ತವ್ಯಕ್ಕೆ ಯಾವುದೇ ರೀತಿಯ ತೊಂದರೆಗಳು ಕಾಣಿಸುವುದಿಲ್ಲ. ಜತೆಗೆ ಪ್ರವಾಸಿ ತಾಣಗಳು ಕೂಡ ನಗರಕ್ಕೆ ಹೊಂದಿಕೊಂಡಂತೆ ಇವೆ. ಜತೆಗೆ ಟ್ರಾಫಿಕ್ ಕಿರಿಕಿರಿ ಇಲ್ಲಿಲ್ಲ. ಹೀಗಾಗಿಯೇ ಪ್ರವಾಸಿಗರು ಇತ್ತ ಮುಖ ಮಾಡುತ್ತಾರೆ.

ಸದಾ ವಾಹನಗಳಲ್ಲಿ ಓಡಾಡಿ ಬೋರಾಗಿದ್ದರೆ ಟಾಂಗಾ, ಸಾರೋಟ್ ಹತ್ತಿ ನಗರದಲ್ಲಿ ಖುಷಿಯಾಗಿ ಅಡ್ಡಾಡಬಹುದಾಗಿದೆ. ಇನ್ನು ಒತ್ತಡ ತಣಿಸಲು ಚಾಮುಂಡಿಬೆಟ್ಟ, ಪಾರ್ಕ್, ಮೃಗಾಲಯ, ಕಾರಂಜಿಕೆರೆ ಹೀಗೆ ಸುಂದರ, ಪ್ರಶಾಂತ ತಾಣಗಳಿವೆ. ಇಷ್ಟೇ ಅಲ್ಲದೆ ರಾತ್ರಿಯಾಯಿತೆಂದರೆ ಇಂದ್ರನ ಅಮರಾವತಿಯೇ ಧರೆಗಿಳಿದಂತಿರುವ ಭವ್ಯ ಅರಮನೆಯಿದೆ. ಅದರಾಚೆಗೆ ಮೈಸೂರು ಮಹಾರಾಜರು ನಿರ್ಮಿಸಿದ ಇನ್ನಷ್ಟು ಅರಮನೆಗಳಿವೆ. ಗಿಡಮರಗಳ ನಡುವೆ ಆನಂದಿಸಬೇಕೆಂದರೆ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕುಬ್ಜ ವೃಕ್ಷಲೋಕವಿದೆ. ಅಲ್ಲಿಯೇ ಶುಕವನವೂ ಗಮನಸೆಳೆಯಲಿದೆ.

ಮೈಸೂರಿನ ಮುಕುಟಮಣಿಯಂತಿರುವ ಚಾಮುಂಡಿಬೆಟ್ಟವಂತೂ ಆಸ್ತಿಕ-ನಾಸ್ತಿಕ ಎನ್ನದೆ ಎಲ್ಲರನ್ನು ಸೆಳೆಯುತ್ತದೆ. ಮನಶಾಂತಿಗೆ ಇಲ್ಲಿನ ನಿಸರ್ಗವಿದೆ. ಈ ಬೆಟ್ಟದಲ್ಲಿ ಮತ್ತೊಂದು ಆಕರ್ಷಣೀಯ ಸಮ್ಮರ್ ಪ್ಯಾಲೇಸ್ ಎಂದು ಕರೆಯಲ್ಪಡುವ ರಾಜೇಂದ್ರ ವಿಲಾಸ ಅರಮನೆ ಇದೆ. ಜತೆಗೆ ಬೆಟ್ಟದ 700 ಮೆಟ್ಟಿಲುಗಳ ಬಳಿ ದೊಡ್ಡದೇವರಾಜ ಒಡೆಯರ್ ಅವರಿಂದ ನಿರ್ಮಿಸಲ್ಪಟ್ಟಿರುವ 16 ಅಡಿ ಎತ್ತರ 26 ಅಡಿ ಉದ್ದದ ಕಲ್ಲಿನ ಬೃಹತ್ ನಂದಿಯಿದೆ.

ನಗರದಲ್ಲಿರುವ ಸಂತ ಫಿಲೋಮಿನಾ ಚರ್ಚ್. ಮತ್ತು ಪ್ರಾಣಿ ಪಕ್ಷಿ ಪ್ರಿಯರಿಗೆ ಮೃಗಾಲಯವಿದೆ. ದೋಣಿ ವಿಹಾರಕ್ಕೆ ಕಾರಂಜಿ ಕೆರೆ ಇದೆ. ವಾಯುವಿಹಾರಕ್ಕೆ ಕುಕ್ಕರಹಳ್ಳಿ ಕೆರೆ ಏರಿ ಇದೆ. ಮಕ್ಕಳ ಮನೋರಂಜನೆಗೆ ರೈಲ್ ಮ್ಯೂಸಿಯಂ ಮತ್ತು ಜವಾಹರ್ ಬಾಲಭವನ, ಗಾಂಧಿವನ ಇದೆ. ರುಚಿ ರುಚಿ ತಿನಿಸು, ಜೊತೆ ಜೊತೆಯಲ್ಲಿ ನಲಿವಿನ ಆಟ, ಸೊಗಸಿನ ನೋಟಕ್ಕೆ ಹಲವು ತಾಣಗಳಿವೆ.

ಕೆ.ಆರ್.ಎಸ್ ಜಲಾಶಯ, ಬೃಂದಾವನ, ದಕ್ಷಿಣದ ಶ್ರೀಶೈಲ ಮುಡುಕುತೊರೆ ಬೆಟ್ಟ, ದಕ್ಷಿಣಕಾಶಿ ನಂಜನಗೂಡು ನಂಜುಂಡೇಶ್ವರ, ಇತಿಹಾಸ ಪ್ರಸಿದ್ಧ ಸೋಮನಾಥಪುರದ ಶ್ರೀ ಚನ್ನಕೇಶವ, ತಲಕಾಡು ಪಂಚಲಿಂಗೇಶ್ವರ, ತಿರುಮಕೂಡಲಿನ ತ್ರಿವೇಣಿ ಸಂಗಮ, ಶ್ರೀರಂಗಪಟ್ಟಣದ ಪಕ್ಷಿಧಾಮ, ಶ್ರೀರಂಗನಾಥ ದೇಗುಲ, ದರಿಯಾದೌಲತ್, ಗಂಜಾಂನ ನಿಮಿಷಾಂಬ ದೇವಿ, ಬೆಳಗೊಳದ ಬಲಮುರಿ ಹಾಗೂ ಎಡಮುರಿ, ನಾಗರಹೊಳೆ ಉದ್ಯಾನ, ಕಬಿನಿ ಜಲಾಶಯ ಹೀಗೆ ಹತ್ತಾರು ಪ್ರವಾಸಿ ತಾಣಗಳು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.


Spread the love

Leave a Reply

Please enter your comment!
Please enter your name here