ಪ್ರವಾಸಿಗರ ವೀಕೆಂಡ್ ಸ್ಪಾಟ್ ಕರಿವರದರಾಜಸ್ವಾಮಿಬೆಟ್ಟ

Spread the love

ಪ್ರವಾಸಿಗರ ವೀಕೆಂಡ್ ಸ್ಪಾಟ್ ಕರಿವರದರಾಜಸ್ವಾಮಿಬೆಟ್ಟ

ಚಾಮರಾಜನಗರದಲ್ಲಿರುವ ಕರಿವರದರಾಜಸ್ವಾಮಿಬೆಟ್ಟ ಪ್ರವಾಸಿಗರ ವೀಕೆಂಡ್ ಸ್ಪಾಟ್ ಆಗಿದ್ದು ಹೆಚ್ಚಿನ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇತ್ತ ಬರುತ್ತಾರೆ. ಸಾಮಾನ್ಯವಾಗಿ ಸದಾ ಕೆಲಸದ ಒತ್ತಡದಲ್ಲಿ ಸಿಲುಕಿದವರು ತಮ್ಮೆಲ್ಲ ಜಂಜಾಟಗಳನ್ನು ಮರೆತು ಒಂದಷ್ಟು ಹೊತ್ತು ಕಳೆಯಲು ಇದು ಹೇಳಿ ಮಾಡಿಸಿದ ತಾಣವಾಗಿದೆ.

ದೇವರ ಸೃಷ್ಠಿಯೋ? ಪ್ರಕೃತಿಯ ವರದಾನವೋ ಒಂದಲ್ಲ ಒಂದು ರೀತಿಯಲ್ಲಿ ಸುಂದರ ಪ್ರಕೃತಿಯ ರಮಣೀಯ ತಾಣಗಳು ಅಲ್ಲಲ್ಲಿ ಕಾಣಸಿಗುತ್ತವೆ. ಅವು ಐತಿಹಾಸಿಕ ಮತ್ತು ಪೌರಾಣಿಕವಾಗಿಯೂ ಗಮನಸೆಳೆಯುತ್ತವೆ. ಇಂತಹ ತಾಣಗಳ ಸಾಲಿಗೆ  ಚಾಮರಾಜನಗರದ ಹೊರವಲಯದಲ್ಲಿರುವ  ಐತಿಹಾಸಿಕ ಕರಿವರದರಾಜಸ್ವಾಮಿಬೆಟ್ಟವೂ ಸೇರುತ್ತದೆ.

ನಗರದ ಮತ್ತು ಸುತ್ತಮುತ್ತಲಿನ ನಿಸರ್ಗಪ್ರೇಮಿಗಳಿಗೆ ಇದೊಂದು ವರದಾನ ಎಂದರೂ ತಪ್ಪಾಗಲಾರದು. ಒಂದಷ್ಟು ಸಮಯಗಳನ್ನು ಪ್ರಕೃತಿಯ ನಡುವೆ ಕಳೆದುಹೋಗಲು ಸ್ಥಳೀಯರು ಸೇರಿದಂತೆ ಪ್ರವಾಸಿಗರು ಆಗಾಗ್ಗೆ ಭೇಟಿ ನೀಡುತ್ತಲೇ ಇರುತ್ತಾರೆ.

ಪ್ರವಾಸಿಗರ ಅನುಕೂಲಕ್ಕಾಗಿ ಕೆಲವರ್ಷಗಳ ಹಿಂದೆ ಇಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಪ್ರವಾಸಿಗರಿಗೆ ಕುಳಿತು ಅನುಕೂಲವಾಗಲೆಂದು ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಇಲ್ಲಿರುವ ನೆಲಬಾವಿಗೆ ಸುರಕ್ಷತೆಯ ದೃಷ್ಠಿಯಿಂದ ಕಬ್ಬಿಣದ ಗ್ರಿಲ್‌ಗಳನ್ನು ಅಳವಡಿಸಲಾಗಿದೆ.

ಕರಿವರದರಾಜಬೆಟ್ಟವು ಚಾಮರಾಜನಗರದಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿದ್ದು, ಸಮುದ್ರಮಟ್ಟದಿಂದ 480 ಅಡಿ ಎತ್ತರದಲ್ಲಿದೆ. ಈ ಬೆಟ್ಟವನ್ನು ಹಿಂದಿನ ಕಾಲದಲ್ಲಿ ವೃದ್ಧಾಚಲ ಪರ್ವತಸ್ತೋಮ ಎಂದೇ ಕರೆಯಲಾಗುತ್ತಿತ್ತಂತೆ. ಕಲ್ಲುಬಂಡೆಗಳ ಪರ್ವತ ಹೊಂದಿರುವ ಇಲ್ಲಿಂದ ನಿಂತು ಇಣುಕಿದರೆ ಸುಂದರ ನಿಸರ್ಗ ರಮಣೀಯ ನೋಟ ಲಭ್ಯವಾಗುತ್ತದೆ.

ಈ ಬೆಟ್ಟದಲ್ಲಿ ಹೊಯ್ಸಳರ ಕಾಲದು ಎನ್ನಲಾದ ಸಂಜೀವಿನಿ ಆಂಜನೇಯಗುಡಿಯಿದ್ದು, ಈ ಗುಡಿಯಲ್ಲಿ ಸುಮಾರು ಎರಡೂವರೆ ಅಡಿ ಎತ್ತರದ ಕರಿವರದರಾಜ ವೆಂಕಟರಮಣಸ್ವಾಮಿಯ ಸುಂದರ ಮೂರ್ತಿಯೂ ಇದೆ. ಈ ದೇವಸ್ಥಾನಕ್ಕೆ ಸುಮಾರು ಮೂರು ಶತಮಾನಗಳ ಇತಿಹಾಸವಿದ್ದು ಕ್ರಿ.ಶ. 1688ರಲ್ಲಿ ನಿರ್ಮಾಣ ಮಾಡಿರಬಹುದೆಂದು ಹೇಳಲಾಗುತ್ತಿದೆ.

ಮೈಸೂರು ಒಡೆಯರ್ ಕಾಲದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಬೆಟ್ಟಕ್ಕೆ ಭೇಟಿ ನೀಡಿದ್ದರು ಅಲ್ಲದೆ ದೇವಸ್ಥಾನಕ್ಕೆ ಕಚ್ಚಾ ರಸ್ತೆ ಹಾಗೂ ಮೆಟ್ಟಿಲನ್ನು ನಿರ್ಮಿಸಲು ವ್ಯವಸ್ಥೆ ಮಾಡಿದರು ಎನ್ನಲಾಗಿದೆ. ನಗರಕ್ಕೆ ಹೊಂದಿಕೊಂಡಿರುವುದರಿಂದ ತೆರಳಲು ಅನುಕೂಲವಿದೆ. ಈ ತಾಣವನ್ನು ಇನ್ನಷ್ಟು ಅಭಿವೃದ್ಧಿ ಮಾಡಿದ್ದೇ ಆದರೆ ಪ್ರವಾಸಿಗರ ಗಮನಸೆಳೆಯುವುದರಲ್ಲಿ ಸಂಶಯವಿಲ್ಲ.


Spread the love

Leave a Reply

Please enter your comment!
Please enter your name here