ಪ್ರವಾಸಿಗರ ಸೆಳೆಯುವ ಕೊಡಗಿನ ದುಬಾರೆ

Spread the love

ಪ್ರವಾಸಿಗರ ಸೆಳೆಯುವ ಕೊಡಗಿನ ದುಬಾರೆ

ಮಡಿಕೇರಿ: ಕಾವೇರಿ ನದಿಯಿಂದ ನಿರ್ಮಿತವಾಗಿರುವ ದ್ವೀಪ ಪ್ರದೇಶವಾದ ದುಬಾರೆ ಆನೆಗಳ ಶಿಬಿರವಾಗಿದ್ದು, ಕಳೆದ ಕೆಲವು ವರ್ಷಗಳಿಂದ ರಿವರ್ ರಾಫ್ಟಿಂಗ್ ಸೇರಿದಂತೆ ಆನೆ ಸಫಾರಿ ನಡೆಯುತ್ತಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರೊಂದಿಗೆ ಪ್ರಮುಖ ಪ್ರವಾಸಿ ತಾಣವಾಗಿ ಗಮನಸೆಳೆಯುತ್ತಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಇಲ್ಲಿನ ಕಾವೇರಿ ನದಿಯಲ್ಲಿ ದಿನನಿತ್ಯ ನಡೆಯುವ ರಿವರ್ ರಾಫ್ಟಿಂಗ್‌ ಜನಪ್ರಿಯವಾಗಿದ್ದು, ಉಕ್ಕಿ ಹರಿಯುವ ನದಿಯಲ್ಲಿ ನಡೆಯುವ ಸಾಹಸಮಯವಾದ ಈ ಕ್ರೀಡೆಯನ್ನು ಆಡಲೆಂದೇ ಮಹಿಳೆಯರು, ಮಕ್ಕಳು ಸೇರಿದಂತೆ ಜನ ಮುಗಿ ಬೀಳುತ್ತಿದ್ದಾರೆ. ಹರಿಯುವ ನದಿಯಲ್ಲಿ ತೇಲುತ್ತಾ ಸಾಗುವ ವಿಹಾರ ಹೊಸ ಅನುಭವ ನೀಡುತ್ತದೆ. ಉಳಿದಂತೆ ಆನೆ ಸಫಾರಿ ಹಾಗೂ ಗಜಮಜ್ಜನ ವಿಶೇಷವಾಗಿದೆ. ಹೀಗಾಗಿ ಇಲ್ಲಿಗೆ ಬರುವ ಪ್ರವಾಸಿಗರು ದೋಣಿಯಲ್ಲಿ ವಿಹರಿಸಿ, ಆನೆ ಸಫಾರಿ ಮಾಡಿ ಒಂದಷ್ಟು ಹೊತ್ತು ನಿಸರ್ಗದ ಮಡಿಲಲ್ಲಿ ಮೈಮರೆತು ನೀರಾಟವಾಡಿ ತಮ್ಮ ಊರುಗಳಿಗೆ ಹಿಂತಿರುಗುತ್ತಾರೆ.

ಕುಶಾಲನಗರ ಬಳಿಯ ನಂಜರಾಯಪಟ್ಟಣದ ಸಮೀಪ ಕಾವೇರಿ ಕವಲೊಡೆದು ದುಬಾರೆಯನ್ನು ಸೃಷ್ಟಿಸಿದ್ದು, ದುಬಾರೆಗೆ ತೆರಳಬೇಕಾದರೆ ದೋಣಿಯಲ್ಲಿ ವಿಹರಿಸಬೇಕು. ಬೇಸಿಗೆಯಲ್ಲಿ ಕಾವೇರಿ ನದಿಯಲ್ಲಿ ನೀರು ಕಡಿಮೆಯಾದಾಗ ಕೆಲವರು ಕಲ್ಲಿನಿಂದ ಕಲ್ಲಿಗೆ ಹಾರುತ್ತಾ ಸಾಗಬಹುದಾಗಿದೆ. ದುಬಾರೆ ಆನೆಶಿಬಿರದಲ್ಲಿರುವ ಸಾಕಾನೆಗಳೆಲ್ಲವೂ ಅರಣ್ಯ ಇಲಾಖೆ ಅಧೀನದಲ್ಲಿವೆಯಾದರೂ ಇಲ್ಲಿ ಆನೆಸಫಾರಿಯ ಉಸ್ತುವಾರಿಯನ್ನು ಜಂಗಲ್ ಲಾಡ್ಜ್‌ನವರು ವಹಿಸಿಕೊಂಡಿದ್ದಾರೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಆನೆ ಸಫಾರಿ ನಡೆಯುತ್ತದೆ.

ಕಾವೇರಿ ನದಿಯಿಂದ ಸೃಷ್ಠಿಯಾಗಿರುವ ದುಬಾರೆ ಆನೆ ಶಿಬಿರವಾಗಿದೆ. ಇಲ್ಲಿ ಪುಂಡ ಆನೆಗಳನ್ನು ಹಿಡಿದು ಪಳಗಿಸಲಾಗುತ್ತದೆ. ಈ ತಾಣ ಜನರ ಸಂಪರ್ಕದಲ್ಲಿದ್ದರೂ ಸೌಲಭ್ಯಗಳ ವಿಚಾರದಲ್ಲಿ ಕುಗ್ರಾಮವೇ. ತಕ್ಷಣಕ್ಕೆ ಹೋಗಬೇಕೆಂದರೆ ನದಿ ದಾಟಲು ಸೇತುವೆಯಿಲ್ಲ. ವಿದ್ಯುತ್ ಇಲ್ಲ. ಶಾಲೆಯಿಲ್ಲ ಹೀಗೆ ಇಲ್ಲಗಳ ನಡುವೆಯೇ ದುಬಾರೆಯಲ್ಲಿ ಅನಾದಿ ಕಾಲದಿಂದಲೂ ನೆಲೆನಿಂತಿರುವ ಗಿರಿಜನರು ಜೀವನ ಸಾಗಿಸುತ್ತಿರುವುದು ವಿಶೇಷವಾಗಿದೆ.

ಎಲ್ಲದಕ್ಕೂ ಕಾವೇರಿ ನದಿಯನ್ನು ದೋಣಿಯಲ್ಲಿ ದಾಟಿ ಹೋಗಬೇಕಾಗಿರುವುದರಿಂದ ಅನಾರೋಗ್ಯ ಅಥವಾ ಇನ್ನೇನಾದರು ಅವಘಡ ಸಂಭವಿಸಿದರೆ ದೇವರೇ ಗತಿ. ಆನೆಶಿಬಿರದಲ್ಲಿರುವ ಸಾಕಾನೆಗಳನ್ನು ನೋಡಿಕೊಳ್ಳಲು ಮಾವುತರು ಹಾಗೂ ಕಾವಾಡಿಗಳ ಕುಟುಂಬಗಳು ನೆಲೆಸಿದ್ದು ಮುರುಕಲು ಗುಡಿಸಲಲ್ಲೇ ಜೀವನ ಸಾಗಿಸುತ್ತಿದ್ದಾರೆ.

ಸುಮಾರು 12,757 ಎಕರೆ ವಿಸ್ತೀರ್ಣ ಹೊಂದಿರುವ ದುಬಾರೆ ಅರಣ್ಯ ಪ್ರದೇಶದಲ್ಲಿ ತಲತಲಾಂತರದಿಂದ ಗಿರಿಜನರು ವಾಸಿಸುತ್ತಾ ಬಂದಿದ್ದಾರೆ. ಸುತ್ತಲೂ ಕಾವೇರಿ ನದಿ ಹರಿಯುತ್ತಿದ್ದು, ನಿಸರ್ಗದ ಸುಂದರ ನೋಟ ಇಲ್ಲಿ ಲಭ್ಯವಾಗುತ್ತದೆ. ಹೀಗಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದನ್ನು ಕಾಣಬಹುದಾಗಿದೆ.


Spread the love