ಪ್ರವಾಸ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಭೀಕರ ಅಪಘಾತ: ಯುವಕ ಸ್ಥಳದಲ್ಲೇ ಮೃತ್ಯು

Spread the love

ಪ್ರವಾಸ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಭೀಕರ ಅಪಘಾತ: ಯುವಕ ಸ್ಥಳದಲ್ಲೇ ಮೃತ್ಯು

ಕುಂದಾಪುರ: ಉತ್ತರಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ಸಾಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಇಲ್ಲಿನ ಕಿರಿಮಂಜೇಶ್ವರ ಸಮೀಪ ಬುಧವಾರ ಸಂಜೆ ನಡೆದಿದೆ‌.

ಮೃತ ಯುವಕನನ್ನು ಬೆಂಗಳೂರು ಮೂಲದ ಅಕ್ಷಯ್‌ (23) ಎಂದು ಗುರುತಿಸಲಾಗಿದೆ.

ಬೆಂಗಳೂರು ಮೂಲದ ನಾಲ್ವರು ಯುವಕರು ಪ್ರವಾಸಕ್ಕೆಂದು ಇನ್ನೋವಾ ಕಾರಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಾಣಕ್ಕೆ ಆಗಮಿಸಿ ವಾಪಾಸಾಗುತ್ತಿದ್ದ ವೇಳೆ ಈ ಅವಘಡ ನಡೆದಿದೆ‌. ವೇಗವಾಗಿ ಚಲಿಸುತ್ತಿದ್ದ ಕಾರು ಕಿರಿಮಂಜೇಶ್ವರ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್‌ ಗೆ ಡಿಕ್ಕಿ ಹೊಡೆದು ರಸ್ತೆಯ ಇನ್ನೊಂದು ಮಗ್ಗುಲಿಗೆ ಹೋಗಿ ಪಲ್ಟಿಯಾಗಿದೆ. ಈ ವೇಳೆ ಕಾರಿನಲ್ಲಿದ್ದ ಅಕ್ಷಯ್‌ ಸ್ಥಳದಲ್ಲೇ ಮೃತಪಟ್ಟಿದ್ದು, ಇತರ ಮೂವರು ಪ್ರಯಾಣಿಕರಾದ ತೇಜಸ್‌, ಪವನ್‌ ಮತ್ತು ಹರ್ಷ ಗಂಭೀರ ಗಾಯಗಳೊಂದಿಗೆ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಂಗೊಳ್ಳಿಯ ಆಪತ್ಬಾಂಧವ ಆಂಬುಲೆನ್ಸ್ ನಿರ್ವಾಹಕ ಇಬ್ರಾಹಿಂ ಹಾಗೂ ತಂಡ ರಕ್ತಸಿಕ್ತವಾಗಿ ಜರ್ಜರಿತಗೊಂಡ ಮೃತದೇಹವನ್ನು ಕುಂದಾಪುರದ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸುವಲ್ಲಿ ನೆರವಾದರು.

ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love