
ಪ್ರವೀಣ್ ನೆಟ್ಟಾರು ಹತ್ಯೆ: ದಕ ಜಿಲ್ಲೆಯಲ್ಲಿ ಸಂಪೂರ್ಣ ಹದಗೆಟ್ಟ ಕಾನೂನು ಸುವ್ಯವಸ್ಥೆ – ಅಕ್ಷಿತ್ ಸುವರ್ಣ
ಮಂಗಳೂರು: ದಕ ಜಿಲ್ಲೆಯಲ್ಲಿ ಕಳೆದ 4 ವರ್ಷಗಳಿಂದ ಅಮಾಯಕ ಜೀವಗಳು ಬಲಿಯಾಗುತ್ತಿದ್ದು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎನ್ನುವುದಕ್ಕೆ ನಡೆದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಕೊಲೆಯಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಅಮಾನವೀಯವಾಗಿ ಕಡಿದು ಕೊಲೆ ಮಾಡಿರುವುದು ಖಂಡನೀಯ. ಒಂದು ಕೊಲೆಗೆ ಇನ್ನೊಂದು ಕೊಲೆ ಪ್ರತಿಕಾರ ಸರಿಯಲ್ಲ. ಕೋಮು ಸೂಕ್ಷ್ಮ ಪ್ರದೇಶ ಎಂಬ ಖ್ಯಾತಿಗೆ ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಅಮಾಯಕ ಯುವಕರು ಬಲಿಯಾಗುತ್ತಿರುವುದು ಖೇದಕರ ಸಂಗತಿ.
ರಾಜ್ಯ ಬಿಜೆಪಿ ಅಧ್ಯಕ್ಷರ ಜಿಲ್ಲೆಯಲ್ಲಿಯೇ ಶಾಂತಿ ಸುವ್ಯವಸ್ಥೆ ಇಂತಹ ಪರಿಸ್ಥಿತಿ ಆದರೆ ಉಳಿದ ಜಿಲ್ಲೆಯ ಪರಿಸ್ಥಿತಿ ಹೇಗಾಗಲಾರದು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರಕಾರ ರಾಜ್ಯದ ಅಮಾಯಕರ ರಕ್ಷಣೆಯನ್ನು ಮಾಡುವ ಬದಲು ಕೊಲೆ ಮಾಡುತ್ತಿದೆ. ಜಿಲ್ಲೆಯಲ್ಲಿ ಆಗಾಗ ಕೊಲೆಗಳು ನಡೆಯುತ್ತಿರುವುದು ಗೃಹ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಕೊಲೆ ಮಾಡಿದವರು ಯಾವುದೇ ಧರ್ಮಕ್ಕೆ ಸೇರಿದ್ದರೂ ಸಹ ಅವರ ವಿರುದ್ದ ನಿರ್ದಾಕ್ಷಿಣ್ಯವಾದ ಕ್ರಮ ಕೈಗೊಳ್ಳಲು ಇದುವರೆಗೂ ಸರಕಾರ ವಿಫಲವಾಗಿದೆ.
ಪ್ರತಿ ಬಾರಿ ಕೊಲೆಗಳು ನಡೆದ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳುವ ಗೃಹ ಸಚಿವರು ಮತ್ತೆ ಮತ್ತೆ ತನ್ನ ಕರ್ತವ್ಯದಲ್ಲಿ ವಿಫಲತೆಯನ್ನು ಕಾಣುತ್ತಿದ್ದಾರೆ. ಈ ವರೆಗೆ ನಡೆದಿರುವ ಇಷ್ಟೊಂದು ಕೊಲೆಗಳ ತನಿಖೆ ಯಾವ ಹಂತದಲ್ಲಿ ಇದೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಇಂತಹ ಲಜ್ಜೇಗೇಡಿ ಸರಕಾರದ ವಿರುದ್ದ ಮುಂದಿನ ದಿನಗಳಲ್ಲಿ ಜನರು ದಂಗೆ ಏಳುವುದು ಖಂಡಿತ.
ಪ್ರವೀಣ್ ನೆಟ್ಟಾರು ಕೊಲೆಗೆ ಕಾರಣರಾದ ಹಾಗೂ ಇದುವರೆಗೆ ರಾಜ್ಯದಲ್ಲಿ ಕೊಲೆಯಾದ ಅಮಾಯಕರ ನ್ಯಾಯ ದೊರಕಿಸುವ ಕೆಲಸ ರಾಜ್ಯ ಸರಕಾರ ಕೂಡಲೇ ಮಾಡಬೇಕು. ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡುವ ಕೆಲಸ ಮಾಡಬೇಕು ಎಂದು ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಆಗ್ರಹಿಸಿದ್ದಾರೆ.