ಪ್ರಾಣಿಗಳ ಮೇಲಿನ ದೌರ್ಜನ್ಯ ಕಂಡುಬಂದರೆ ಜೈಲು ಶಿಕ್ಷೆ

Spread the love

ಪ್ರಾಣಿಗಳ ಮೇಲಿನ ದೌರ್ಜನ್ಯ ಕಂಡುಬಂದರೆ ಜೈಲು ಶಿಕ್ಷೆ

ಬೆಂಗಳೂರು: ರಾಜ್ಯಾದ್ಯಂತ ಪ್ರಾಣಿಗಳ ಮೇಲೆ ದೌರ್ಜನ್ಯ ಮತ್ತು ಕ್ರೌರ್ಯಗಳು ಹೆಚ್ಚಾಗುತ್ತಿರುವ ಪ್ರಕರಣಗಳು ಸಾಮಾಜಿಕ ಜಾಲತಾಣಗಳ ಮೂಲಕ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಗೆ ವರದಿಯಾಗುತ್ತಿದೆ ಹಾಗೂ ಬೀದಿ ನಾಯಿಗಳ ಆರೈಕೆದಾರರು, ಪೀಡರ್ಸ್ ಗಳಿಗೆ ಕಿರುಕುಳ ಮತ್ತು ಅನ್ಯಾಯಕ್ಕೆ ಒಳಗಾಗುತ್ತಿರುವ ಬಗ್ಗೆ ವಿವಿಧ ದೂರುಗಳು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಗೆ ಸ್ವೀಕೃತಗೊಂಡಿದ್ದು ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.

ಇತ್ತೀಚೆಗೆ ಬೆಳಗಾವಿ, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಈ ರೀತಿಯ ಪ್ರಕರಣಗಳು ದಾಖಲಾಗಿದೆ. ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1960 ರ ಪ್ರಕಾರ ಪ್ರಾಣಿಗಳಿಗೆ ನೋವು, ಯಾತನೆ ತೊಂದರೆ, ದೌರ್ಜನ್ಯ ಮಾಡುವುದು ನಿಷಿದ್ಧ ಹಾಗೂ ಭಾರತೀಯ ದಂಡ ಸಂಹಿತೆ ಅನುಚ್ಛೇದ 428 ಮತ್ತು 429 ರ ಪ್ರಕಾರ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.

ಬೀದಿ ನಾಯಿಗಳನ್ನು ಹೊಡೆಯುವುದು ಓಡಿಸುವುದು, ಎಸೆಯುವುದು ಮತ್ತು ಕೊಲ್ಲುವುದು ಶಿಕ್ಷಾರ್ಹ ಅಪರಾಧ. ಆದರೆ ಪ್ರಾಣಿಗಳ ಜನನ ನಿಯಂತ್ರಣ (ನಾಯಿ) ನಿಯಮ 2001 ರನ್ವಯ ಪ್ರಾಣಿ ಸಂತಾನಹರಣ ಚಿಕಿತ್ಸೆಗೆ ಒಳಪಡಿಸಿದ ನಂತರ ಲಸಿಕೆ ನೀಡಿ, ಅವುಗಳ ಮೂಲ ಸ್ಥಾನಕ್ಕೆ ಬಿಡುವುದು. ಯಾವುದೇ ವ್ಯಕ್ತಿಗಳು, ಸ್ಥಳೀಯ ಪ್ರಾಧಿಕಾರಗಳು ಅಂದರೆ ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್, ಪುರಸಭೆ, ನಗರ ಸಭೆಗಳು ಬೀದಿ ನಾಯಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವುದು ಕಾನೂನು ಪ್ರಕಾರ ನಿಷಿದ್ಧ ಹಾಗೂ ಶಿಕ್ಷಾರ್ಹ ಅವರಾಧವಾಗಿದೆ.

ಬೀದಿ ನಾಯಿಗಳು, ಬಿಡಾಡಿ ಧನಗಳಿಗೆ ಆರೈಕೆ ಮಾಡುವುದು, ಆಹಾರ ನೀಡುವುದು ಹಾಗೂ ಕರುಣೆ ತೋರುವುದು ಸಂವಿಧಾನದ ಪ್ರಕಾರ ನಾಗರೀಕರ ಜವಾಬ್ದಾರಿಯಾಗಿರುತ್ತದೆ. ಪ್ರಾಣಿಗಳ ಮೇಲಿನ ಎಲ್ಲಾ ದೌರ್ಜನ್ಯಗಳನ್ನು ದಾಖಲೆ ಮಾಡಿ, ನಿಯಮಾನುಸಾರ ಕ್ರಮ ಕೈಗೊಳ್ಳುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಿರಲು ತಿಳಿಸಿದೆ.

ಎಲ್ಲಾ ಸಾರ್ವಜನಿಕರಲ್ಲಿ ಸಂಘ ಸಂಸ್ಥೆಗಳಲ್ಲಿ ಕೋರುವುದೇನೆಂದರೆ, ಬೀದಿ ನಾಯಿಗಳ ಆರೈಕೆದಾರರು, ಪೀಡರ್ಸ್ ಗಳಿಗೆ ಯಾವುದೇ ರೀತಿಯ ಕಿರುಕುಳ, ತೊಂದರೆ ನೀಡದಂತೆ ಅಧಿಕೃತ ತಿಳಿಸಿದ್ದು, ಈ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ಸಾರ್ವಜನಿಕರು ಪೊಲೀಸ್‍ ಕಂಟ್ರೋಲ್‍ ರೂಂ 112 ಅಥವಾ ಪಶುಸಂಗೋಪನಾ ಸಹಾಯವಾಣಿ ಸಂಖ್ಯೆ 8277100200 ಗೆ ತಿಳಿಸುವಂತೆ ಸೂಚಿಸಲಾಗಿದೆ.


Spread the love