ಪ್ರಾಮಾಣಿಕರಾದರೆ ನ್ಯಾಯಾಂಗ ತನಿಖೆ ನಡೆಸಿ: ಸಿದ್ದು ಸವಾಲ್

Spread the love

ಪ್ರಾಮಾಣಿಕರಾದರೆ ನ್ಯಾಯಾಂಗ ತನಿಖೆ ನಡೆಸಿ: ಸಿದ್ದು ಸವಾಲ್

ಮೈಸೂರು: 40 ಪರ್ಸೆಂಟ್ ಆರೋಪ ಎದುರಿಸುತ್ತಿರುವ  ಬಿಜೆಪಿಯವರು ರಾಜ್ಯ ಗುತ್ತಿಗೆದಾರರ ಸಂಘ ಮಾಡಿರುವ ಆರೋಪದ ವಿಚಾರವನ್ನು ಹೈಕೋರ್ಟಿನ ಹಾಲಿ ನ್ಯಾಯಾಧೀಶರ ಉಸ್ತುವಾರಿಯಲ್ಲಿ  ನ್ಯಾಯಾಂಗ ತನಿಖೆ ನಡೆಸಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.

ನಗರದ ಜಿಲ್ಲಾ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಒಂದು ರೂಪಾಯಿ ಲಂಚ ಮುಟ್ಟಿಲ್ಲ ಎನ್ನುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಮ್ಮ ವಿರುದ್ಧ ಮಾಡಿರುವ ಆರೋಪ ಸುಳ್ಳು ಎಂದು ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಮುನಿರತ್ನ, ಲಂಚ ಎಂದರೆ ಏನೆಂದು ನಮಗೆ ಗೊತ್ತಿಲ್ಲ ಎನ್ನುವ ಸಚಿವ ಸುಧಾಕರ್ ಅವರು ನ್ಯಾಯಾಂಗ ತನಿಖೆಗೆ ಯಾಕೆ ಒಪ್ಪುತ್ತಿಲ್ಲ?. ಇವರು ಪ್ರಾಮಾಣಿಕರಾಗಿದ್ದಾರೆ ನ್ಯಾಯಾಂಗ ತನಿಖೆಗೆ ಒಪ್ಪಿಸಲಿ ಎಂದು ಆಗ್ರಹಿಸಿದರು.

ಸಾಮಾನ್ಯವಾಗಿ ಕಮಿಷನ್ ಕೊಡುವ ಹಾಗೂ ಲಂಚ ನೀಡುವಾಗ ದಾಖಲೆ ಇರಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾಖಲೆ ಕೊಡಿ ತನಿಖೆ ನಡೆಸುತ್ತೇವೆ ಎನ್ನುತ್ತಿದ್ದಾರೆ. ಆದರೆ ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಬೇಕು?, ಇದನ್ನೆಲ್ಲ ಕೇಳಿದರೇ ಸಿದ್ದರಾಮಯ್ಯ ಸತ್ಯ ಹರಿಶ್ಚಂದ್ರನಾ? ಎಂದು ಪ್ರಶ್ನೆ ಮಾಡುತ್ತಾರೆ. ನನ್ನನ್ನು ನಾನು ಯಾವತ್ತೂ ಹರಿಶ್ಚಂದ್ರ ಎಂದುಕೊಂಡಿಲ್ಲ, ಹರಿಶ್ಚಂದ್ರನ ವಂಶದವನು ಎಂದು ಹೇಳಿಕೊಂಡಿಲ್ಲ, ನಾನು ಸಿದ್ದರಾಮಯ್ಯ ಅಷ್ಟೇ. ನಮ್ಮ ಕಾಲದಲ್ಲೂ ಹಗರಣ ಆಗಿದೆ ಎನ್ನುತ್ತಾರೆ. ಆದರೆ ಆರೋಪ ಬಂದ ಕೂಡಲೇ ನಾನು ೫ ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆ. ಆಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತು. ಈಗಲೂ ರಾಜ್ಯ ಹಾಗೂ ಕೇಂದ್ರದಲ್ಲೂ ಇವರದ್ದೆ ಸರ್ಕಾರ ಇದೆ. ಇವರೂ ಸಿಬಿಐಗೆ ಕೊಡಲಿ, ತನಿಖೆ ನಡೆಸಲಿ. ನಮ್ಮ ಕಾಲದಲ್ಲೂ ಹಗರಣ ನಡೆದಿದ್ದರೆ ಅದನ್ನೂ ಸೇರಿಸಿ ತನಿಖೆಗೆ ಒಪ್ಪಿಸಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗಂಭೀರ ಆರೋಪಗಳು ಬಂದಾಗ ನೆಪ ಹೇಳುವ ಅಥವಾ ಅದರಿಂದ ತಪ್ಪಿಸಿಕೊಳ್ಳುವ ಭಂಡತನ ಪ್ರದರ್ಶನ ಮಾಡಬಾರದು ಎಂದರು.

ನಿಷೇಧಾಜ್ಞೆಯ ಹಿನ್ನೆಲೆಯಲ್ಲಿ ಕೊಡುಗು ಭೇಟಿಯನ್ನು ರದ್ದುಗೊಳಿಸಲಾಗಿತ್ತು. ನಿಷೇಧಾಜ್ಞೆ ತೆರವಾಗಲಿ, ಅಲ್ಲಿಗೆ ಹೋಗುವ ವಿಚಾರವನ್ನು ಪಕ್ಷದ ಮುಖಂಡರ ಜತೆ ಚರ್ಚಿಸಿ ತೀರ್ಮಾನಿಸಲಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ನಗರ ಉಪಾಧ್ಯಕ್ಷ ಅನುರಾಗ್ ಬಸವರಾಜ್, ನಗರ ಕಾರ್ಯದರ್ಶಿ ರಂಗಸ್ವಾಮಿ ಸಂವಾದದಲ್ಲಿ ಹಾಜರಿದ್ದರು.


Spread the love