ಪ್ರಿಯಕರನೊಂದಿಗೆ ಸೇರಿ ಪತ್ನಿಯಿಂದಲೇ ಪತಿ ಕೊಲೆ

Spread the love

ಪ್ರಿಯಕರನೊಂದಿಗೆ ಸೇರಿ ಪತ್ನಿಯಿಂದಲೇ ಪತಿ ಕೊಲೆ

ರಾಮನಗರ: ಪತಿಯನ್ನು ಪತ್ನಿಯೇ ಪ್ರಿಯಕರನ ಜತೆ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿ ಎಸೆದು ನಾಪತ್ತೆ ದೂರು ದಾಖಲಿಸಿದ ಘಟನೆ ಚನ್ನಪಟ್ಟಣದಲ್ಲಿ ನಡೆದಿದ್ದು, ಪೊಲೀಸರ ತನಿಖೆಯಿಂದ ಕೊಲೆ ರಹಸ್ಯ ಬಯಲಾಗಿದೆ.

ಚನ್ನಪಟ್ಟಣ ತಾಲೂಕಿನ ರಾಮನರಸಿಂಹರಾಜಪುರ ಗ್ರಾಮದ ದೇಸಿಗೌಡ(48) ಕೊಲೆಯಾದ ದುರ್ದೈವಿ. ಈತನನ್ನು ಪತ್ನಿ ಜಯಲಕ್ಷ್ಮಿ ಮತ್ತು ಆಕೆ ಪ್ರಿಯಕರ ರಾಜೇಶ್ ಸೇರಿ ನ.26ರಂದು ಶನಿವಾರ ರಾತ್ರಿ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ರಾಮನಗರ ತಾಲ್ಲೂಕಿನ ಕೆಂಪೇಗೌಡನದೊಡ್ಡಿ ಬಳಿಯ ಮೈಸೂರು-ಬೆಂಗಳೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿನ ಸುರಂಗದ ಚರಂಡಿಯಲ್ಲಿ ಬಿಸಾಡಿ ಪರಾರಿಯಾಗಿದ್ದರು.

ಬೆಂಗಳೂರಿನ ಚಿಕ್ಕಬಾಣವರ ಬಳಿಯ ಸೋಮಶೆಟ್ಟಿಹಳ್ಳಿ ಗ್ರಾಮದ ಫಾರ್ಮ್ ಹೌಸ್‌ನಲ್ಲಿ ದೇಸಿಗೌಡ ಕೆಲಸ ಮಾಡುತ್ತಿದ್ದನು. ಅಲ್ಲಿಯೇ ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದನು. ಕಳೆದ ನ.27ರಂದು ದೇಸಿಗೌಡ ನಾಪತ್ತೆಯಾಗಿರುವ ಬಗ್ಗೆ ಪತ್ನಿ ಜಯಲಕ್ಷ್ಮಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ತನಿಖೆಗೆ ಮುಂದಾದ ಪೊಲೀಸರು ಜಯಲಕ್ಷ್ಮಿ ಮತ್ತು ಆತನ ಸ್ನೇಹಿತ ರಾಜೇಶ್ ನನ್ನು ವಿಚಾರಣೆಗೆ ಒಳ ಪಡಿಸಿದಾಗ ಕೊಲೆ ರಹಸ್ಯ ಬಯಲಿಗೆ ಬಂದಿದೆ. ನ.26 ರಂದು ಫಾರ್ಮ್ ಹೌಸ್ ನಲ್ಲಿಯೇ ದೇಸಿಗೌಡನನ್ನು ಕೊಲೆ ಮಾಡಿ ಮೃತದೇಹವನ್ನು ರಾತ್ರಿಯೇ ತಂದು ಚರಂಡಿಯೊಳಗೆ ಬಿಸಾಡಿ ಪರಾರಿಯಾಗಿದ್ದರು. ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಪರಿಶೀಲಿಸಿದಾಗ ಚರಂಡಿಯಲ್ಲಿ ದೇಸಿಗೌಡನ ಮೃತದೇಹ ಪತ್ತೆಯಾಗಿದೆ.

ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ಅಡ್ಡಲಾಗಿ ನಿರ್ಮಿಸಿರುವ ಸುರಂಗದ ಚರಂಡಿಯಲ್ಲಿ ಸುಮಾರು 20 ಅಡಿಯಷ್ಟು ಒಳಭಾಗದಲ್ಲಿ ಮೃತದೇಹವನ್ನು ಬಚ್ಚಿಡಲಾಗಿತ್ತು. ಚರಂಡಿಯನ್ನು ಕಲ್ಲುಗಳಿಂದ ಮುಚ್ಚಲಾಗಿದ್ದು ಆರೋಪಿಗಳಿಂದ ಶವ ಇರುವ ಜಾಗವನ್ನು ಪತ್ತೆ ಮಾಡಿ ಮೃತದೇಹವನ್ನು ಹೊರ ತೆಗೆಯಲಾಯಿತು.

ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇಸಿಗೌಡನ ಮೃತದೇಹವನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಸೋಲದೇವನಹಳ್ಳಿ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.


Spread the love