ಪ್ರೀತಿ, ಶಾಂತಿ ಆಯುಧಗಳಾದರೆ ಸಮಾಜದಲ್ಲಿ ನೆಮ್ಮದಿ ಸಾಧ್ಯ

Spread the love

ಪ್ರೀತಿ, ಶಾಂತಿ ಆಯುಧಗಳಾದರೆ ಸಮಾಜದಲ್ಲಿ ನೆಮ್ಮದಿ ಸಾಧ್ಯ

ಚಿಕ್ಕಬಳ್ಳಾಪುರ: ಎಲ್ಲ ಧರ್ಮಗಳೂ ಶಾಂತಿ, ಪ್ರೀತಿ ಮತ್ತು ಸಹಬಾಳ್ವೆಯನ್ನು ಸಾರಿದ್ದು, ಪ್ರೀತಿ ಮತ್ತು ಶಾಂತಿಯನ್ನು ಆಯುಧಗಳನ್ನಾಗಿ ಬಳಸಿಕೊಂಡು, ದೇಶದ ಅಭಿವೃದ್ಧಿಯಲ್ಲಿ ಎಲ್ಲರೂ ಭಾಗಿಯಾಗೋಣ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕರೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಸಭಾಪಾಲಕರ ಸಂಘದಿಂದ ಆಚರಿಸಿದ ಕ್ರಿಸ್ ಮಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಸೆಂಬರ್ 25ರಂದು ಆಚರಿಸಬೇಕಾದ ಕ್ರಿಸ್ ಮಸ್ ಮೊದಲೇ ಆಚರಣೆ ಮಾಡುತ್ತಿರುವುದು ಸಂತಸದ ವಿಷಯವಾಗಿದ್ದು, ಎಲ್ಲರೂ ಪ್ರೀತಿಯಿಂದ ಸಮಾಜದ ಉನ್ನತಿಗೆ ಶ್ರಮಿಸಬೇಕೆಂದು ಸಲಹೆ ನೀಡಿದರು.

ಜೀಸಸ್ ಜನನಕ್ಕೂ ಮೊದಲು ಜಗತ್ತು ಹಿಂಸೆಯಿಂದ ತುಂಬಿತ್ತು, ಭಗವಂತನ ಪ್ರಾರ್ಥನೆಯ ಫಲವಾಗಿ ಲೋಕ ಕಲ್ಯಾಣಕ್ಕಾಗಿ ಜನಿಸಿದವರು ಜೀಸಸ್. ಕ್ರೈಸ್ತರಿಗೆ ಪ್ರಮುಖವಾಗಿ ಮೂರು ದಿನಗಳು ಪ್ರಾಮುಖ್ಯತೆ ಪಡೆದಿವೆ. ಅವುಗಳೆಂದರೆ ಕ್ರಿಸ್ತ ಜನಿಸಿದ ದಿನವಾದ ಕ್ರಿಸ್ ಮಸ್, ಅಂತಹ ಶಾಂತಿಯ ಮೂರ್ತಿಯನ್ನೂ ಶಿಲುಬೆಗೇರಿಸಿ ಹಿಂಸೆಯ ಪ್ರವೃತ್ತಿ ಪ್ರದರ್ಶಿಸಿದ ದಿನವಾದ ಗುಡ್ ಫ್ರೈಡೆ. ಮತ್ತು ಶಿಲುಬೆಗೇರಿ ಪ್ರಾಣ ತ್ಯಾಗ ಮಾಡಿದ ನಂತರವೂ ಜೀಸಸ್ ಅವರ ಅನುಯಾಯಿಗಳಿಗೆ ದರ್ಶನ ನೀಡಿದ ದಿನವಾದ ಪುನುರುತ್ಥಾನ ದಿನ. ಈ ಮೂರೂ ದಿನಗಳೂ ಕ್ರೈಸ್ತ ಧರ್ಮಕ್ಕೆ ಪವಿತ್ರವಾಗಿವೆ ಎಂದರು

ಸಮಾಜದಲ್ಲಿ ಎಲ್ಲ ಧರ್ಮಗಳನ್ನೂ ಗೌರವಿಸುವುದು ಭಾರತದ ಪರಂಪರೆ, ಪವಿತ್ರ ಭಾರತದಲ್ಲಿ ಮಾತ್ರ ಮೂಲ ಧರ್ಮ ಹಿಂದು, ಜೈನ, ಕ್ರೈಸ್ತ, ಇಸ್ಲಾಂ, ಬೌದ್ಧ, ಸಿಖ್, ಪಾರ್ಸಿ ಧರ್ಮಗಳು ಈ ನೆಲದಲ್ಲಿ ಹುಟ್ಟಿವೆ. ಈ ಎಲ್ಲ ಧರ್ಮಗಳೂ ಅನ್ಯೋನ್ಯವಾಗಿರಲು ಈ ಮಣ್ಣಿನ ಗುಣವೇ ಕಾರಣ. ಪ್ರೀತಿ, ಶಾಂತಿಯೇ ನಮ್ಮ ಆಯುಧಗಳಾಗಲಿ. ಪ್ರೀತಿಯ ಮೂಲಕ ಶತೃವಿನ ಮನವನ್ನು ಗೆಲ್ಲುವ ಗುಣ ಬೆಳೆಸಿಕೊಳ್ಳುವಂತೆ ಹೇಳಿದರು.

ಕಾರ್ಯಕ್ರಮದಲ್ಲಿ ಮಂಜುನಾಥ್, ರವೆರೆಂಡ್ ಬಯಳ್ಳಹಳ್ಳಿ ರಾಜಪ್ಪ, ಬಾಲಕುಂಟಹಳ್ಳಿ ಗಂಗಾಧರ್, ಸುಧಾ ವೆಂಕಟೇಶ್, ನರಸಿಂಹಮೂರ್ತಿ, ಸುಶಾಂತ್, ಅನಿಲ್, ಶ್ರೀನಿವಾಸ್ ಹಾಗೂ ಸಭಾ ಪಾಲಕರ ಸಂಘದ ಪದಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.


Spread the love