
ಫರಂಗಿಪೇಟೆಯ ಸ್ಟುಡಿಯೋ ಮಾಲಕ ದಿನೇಶ್ ಕೊಟ್ಟಿಂಜ ಕೊಲೆ ಯತ್ನ – ಮೂವರ ಬಂಧನ
ಬಂಟ್ವಾಳ: ಬುಧವಾರ ರಾತ್ರಿ ಫರಂಗಿಪೇಟೆಯ ಸ್ಟುಡಿಯೋ ಮಾಲಕ ದಿನೇಶ್ ಕೊಟ್ಟಿಂಜ ಅವರ ಕೊಲೆಗೆ ಯತ್ನ ನಡೆಸಿದ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅಮ್ಮೆಮ್ಮಾರು ನಿವಾಸಿ ಮುಹಮ್ಮದ್ ಅರ್ಷದ್(19),ಅಬ್ದುಲ್ ರಹ್ಮಾನ್(22) ಮತ್ತು ಮುಹಮ್ಮದ್ ಸೈಪುದ್ದೀನ್(22) ಎಂದು ಗುರುತಿಸಲಾಗಿದೆ.
ರಾತ್ರಿ ಸುಮಾರು 7:15ರ ವೇಳೆಗೆ ಪುದು ಗ್ರಾಮದ ಫರಂಗಿಪೇಟೆಯಲ್ಲಿನ ದಿನೇಶ್ ಅವರಿಗೆ ಸೇರಿದ ತೃಷಾ ಸ್ಟುಡಿಯೋಗೆ 4 ಮಂದಿ ಯುವಕರ ತಂಡ ಫೋಟೋ ತೆಗೆಸುವ ನೆಪದಲ್ಲಿ ಬಂದು ದಿನೇಶ್ ಅವರ ತಲೆಗೆ, ಬಲ ಕೈಗೆ ಹಾಗೂ ಎಡ ಕಿಬ್ಬೊಟ್ಟೆಗೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಸ್ಥಳದಲ್ಲಿದ್ದ ಶೇಖರ ಪೂಜಾರಿ ಎಂಬವರು ಹಲ್ಲೆ ತಡೆಯಲು ಅಲ್ಲೇ ಇದ್ದ ಕುರ್ಚಿಯನ್ನು ಬಲವಾಗಿ ಇಬ್ಬರು ಆರೋಪಿಗಳ ಮೇಲೆ ಬೀಸಿದ್ದು, ಶೇಖರ ಪೂಜಾರಿ ಅವರಿಗೂ ಘಟನೆಯಿಂದ ಗಾಯವಾಗಿರುತ್ತದೆ. ಗಾಯಗೊಂಡ ದಿನೇಶ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.