ಫಲಾನುಭವಿಯ ಮನೆಗೆ ಅಧಿಕಾರಿಗಳಿಂದ ಸೌಲಭ್ಯ: ಡಿಸಿ ಡಾ. ರಾಜೇಂದ್ರ ಕೆ.ವಿ

Spread the love

ಫಲಾನುಭವಿಯ ಮನೆಗೆ ಅಧಿಕಾರಿಗಳಿಂದ ಸೌಲಭ್ಯ: ಡಿಸಿ ಡಾ. ರಾಜೇಂದ್ರ ಕೆ.ವಿ

ಮಂಗಳೂರು: ಅಧಿಕಾರಿಗಳು ಕಚೇರಿಯ ಕಡತಗಳ ನಿರ್ವಹಣೆಯೊಂದಿಗೆ ಅರ್ಹ ಫಲಾನುಭವಿಯ ಮನೆ ಬಾಗಿಲಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಸಂತಸ ಪಟ್ಟರು.

ಅವರು ಆ.20ರ ಶನಿವಾರ ಮುಲ್ಕಿ ತಾಲೂಕಿನ ಅತಿಕಾರಿ ಬೆಟ್ಟು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದರು.

ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಸರ್ಕಾರದ ಕನಸಿನ ಯೋಜನೆಯಾಗಿದೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದು ಯಶಸ್ವಿಯಾಗಿ ಸಾಗುತ್ತಿದೆ, ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳಲಾಗಿದೆ. ಇಂದು ಕಾಲ ಮತ್ತು ವ್ಯವಸ್ಥೆ ಬದಲಾಗಿದೆ ಅಧಿಕಾರಿಗಳೇ ಜನರ ಸಮಸ್ಯೆ ಆಲಿಸಲು ಮನೆ ಬಾಗಿಲಿಗೆ ಬರುತ್ತಿದ್ದಾರೆ ಎಂದರು.

ಅತಿಕಾರಿ ಬೆಟ್ಟು ಗ್ರಾಮವನ್ನು ಕಂಡು ಖುಷಿಯಾಗಿದೆ, ಇಲ್ಲಿನ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಜೊತೆಗೆ ಜನರೂ ಕೂಡ ಸರ್ಕಾರದಿಂದ ದೊರಕುವ ಯೋಜನೆಗಳನ್ನು ಸದುಪಯೋಗ ಪಡಸಿಕೊಳ್ಳುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಅತಿಕಾರಿ ಬಿಟ್ಟು ಗ್ರಾಮದಲ್ಲಿ ಹೆಚ್ಚಿನ ಸಮಸ್ಯೆಗಳಿಲ್ಲ, ಇರುವಂತಹ ಕೆಲವು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಹಾಗೂ ಭವಿಷ್ಯಕ್ಕೂ ಸಹಕಾರಿಯಾಗುವಂತಹ ಸೌಲಭ್ಯಗಳನ್ನು ಕೊಡಿಸುವಲ್ಲಿ ಈ ಗ್ರಾಮ ವಾಸ್ತವ್ಯದ ಮೂಲಕ ಕೂಲಂಕುಷವಾಗಿ ಈ ಕಾರ್ಯಕ್ರಮದಲ್ಲಿ ಚರ್ಚಿಸಲಾಗುವುದು ಎಂದರು.

ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಲಾಗುವುದು, ಜತೆಗೆ ಕೊರಗ ಹಾಗೂ ದಲಿತ ಕುಟುಂಬಗಳ ಕಾಲೋನಿಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಾಧ್ಯವಾದಷ್ಟು ಸ್ಥಳದಲ್ಲೇ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸಲಾಗುವುದು ಮತ್ತು ಇಲ್ಲಿನ ಅಂಗನವಾಡಿಗಳು, ಶಾಲೆಗಳು, ಸ್ಮಶಾನಗಳ ಅಭಿವೃದ್ಧಿಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಹಿಂದೆ ನಡೆಯುತ್ತಿದ್ದ ಮರಳುಗಾರಿಕೆಯಿಂದಾಗಿ ರಸ್ತೆಗಳು ಹದಗೆಟ್ಟಿರುವುದು ತಿಳಿದಿದ್ದು, ಅವುಗಳ ದುರಸ್ತಿಗಾಗಿ ಶಾಸಕರು 3ಕೋಟಿ ರೂ. ಅನುದಾನ ನೀಡಿದ್ದಾರೆ, ಕಾಮಗಾರಿಗಳು ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದರು.

ವಿದ್ಯುತ್, ಭೂ ಒಡೆತನ, ಪಟ್ಟಾ ಜಾಗ, ರಸ್ತೆ ದುರಸ್ತಿ, ತಡೆಗೋಡೆ ನಿರ್ಮಾಣ, ಸರ್ಕಾರಿ ಕಟ್ಟಡಗಳ ಅಭಿವೃದ್ಧಿ, ಮುಚ್ಚಲ್ಪಟ್ಟ ಬ್ಯಾಂಕ್ ತೆರೆಯುವುದು ಸೇರಿದಂತೆ ಗ್ರಾಮಸ್ಥರು ಅಹವಾಲು ಸಲ್ಲಿಸಿದರು.

ಶಾಸಕರಾದ ಉಮನಾಥ್ ಕೋಟ್ಯಾನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಸಹಾಯಕ ಆಯುಕ್ತ ಮದನ್ ಮೋಹನ್, ತಹಶೀಲ್ದಾರ್ ಗುರುಪ್ರಸಾದ್, ಭೂ ದಾಖಲೆಗಳ ಉಪನಿರ್ದೇಶಕ ನಿರಂಜನ್, ಗ್ರಾಮ ಪಂಚಾಯತ್ ಅಧ್ಯಕ್ಷ ಮನೋಹರ್ ಕೋಟ್ಯಾನ್ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


Spread the love