ಫಾ|ಸ್ಟ್ಯಾನ್‌ ಸ್ವಾಮಿ ಅವರ ಸಾವಿಗೆ ಕೇಂದ್ರ ಸರಕಾರ ಪರೋಕ್ಷ ಕಾರಣ – ಅಮೃತ್‌ ಶೆಣೈ

Spread the love

ಫಾ|ಸ್ಟ್ಯಾನ್‌ ಸ್ವಾಮಿ ಅವರ ಸಾವಿಗೆ ಕೇಂದ್ರ ಸರಕಾರ ಪರೋಕ್ಷ ಕಾರಣ – ಅಮೃತ್‌ ಶೆಣೈ

ಉಡುಪಿ: ಸಾಮಾಜಿಕ ಹೋರಾಟಗಾರ ಫಾ|ಸ್ಟ್ಯಾನ್‌ ಸ್ವಾಮಿ ಅವರ ಸಾವಿಗೆ ಮೋದಿ ನೇತೃತ್ವದ ಕೇಂದ್ರ ಸರಕಾರ ಪರೋಕ್ಷವಾಗಿ ಕಾರಣವಾಗಿದೆ ಎಂದು ಸಹಬಾಳ್ವೆ ಸಂಘಟನೆಯ ಸಂಚಾಲಕ ಅಮೃತ್‌ ಶೆಣೈ ಆಕ್ರೋಶ ವ್ಯಕ್ತಪಡಿಸಿದರು.

ಅವರು ಸೋಮವಾರ ಉಡುಪಿ ಅಜ್ಜರಕಾಡು ಬಳಿಯ ಹುತಾತ್ಮ ಸ್ವಾರಕದ ಬಳಿ ಸಹಬಾಳ್ವೆ ಸಂಘಟನೆ ಹಾಗೂ ಇತರ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ಸಾಮಾಜಿಕ ಹೋರಾಟಗಾರ ಫಾ|ಸ್ಟ್ಯಾನ್‌ ಸ್ವಾಮಿ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ಭಾರತದ ಸಂವಿಧಾನವನ್ನು ಶೇಷ್ಠ ಸಂವಿದಾನ ಎಂದು ಹೇಳುತ್ತಿದ್ದರೂ ಕೂಡ ಅದು ಭಾರತೀಯ ಪಾಲಿಗೆ ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗಿದೆ. ಸ್ಟಾನ್‌ ಸ್ವಾಮೀಯವರನ್ನು ಜೈಲಿನಲ್ಲಿ ಅಧಿಕಾರಿಗಳು ಹೀನಾಯವಾಗಿ ನಡೆಸಿಕೊಂಡಿದ್ದಲ್ಲದೆ 84ರ ಹರೆಯದ ಅವರಿಗೆ ಜೈಲಿನಲ್ಲಿ ಇನ್ನಿಲ್ಲದ ಕಿರುಕುಳ ನೀಡಲಾಯಿತು. ಕನಿಷ್ಠ ಆಹಾರ ನೀಡದೆ ಪಾರ್ಕಿನ್ಸನ್ ಕಾಯಿಲೆಯಿಂದ ನರಳುತ್ತಿದ್ದ ಅವರು ತಾವೇ ನೀರೂ ಕುಡಿಯಲಾಗದ ಕಾರಣ ನೀರು ಕುಡಿಯಲು ಸಿಪ್ಪರ್ ಪೈಪ್ ನೀಡಲು ಜೈಲು ಸಿಬ್ಬಂದಿ ನಿರಾಕರಿಸಿತು. ಸುಮಾರು ಹಲವಾರು ದಿನಗಳ ನಂತರ ಕೋರ್ಟ್ ಆದೇಶದ ಮೇರೆಗೆ ಸಿಪ್ಪರ್ ಪೈಪ್ ಕೊಡಲಾಯಿತು. ಕನಿಷ್ಠ ಔಷಧೋಪಚಾರದಿಂದ ವಂಚಿತರಾದರು, ತೀವ್ರ ಅನಾರೋಗ್ಯಕ್ಕೆ ತುತ್ತಾದರು. ಹೀಗೆ ಅವರನ್ನು ಅತ್ಯಂತ ಅಮಾನವೀಯಾವಾಗಿ ನಡೆಸಿಕೊಳ್ಳಲಾಯಿತು ಎಂದರು.

ಸಾಮಾಜಿಕ ಹೋರಾಟಗಾರ ಪ್ರೋ.ಫಣಿರಾಜ್‌ ಮಾತನಾಡಿ ಸ್ಟ್ಯಾನ್ ಸ್ವಾಮಿ ಒಬ್ಬ ಸಂತ. ಅಸಮಾನತೆ ಸಹಿಸದೆ ಪ್ರಭುತ್ವದ ಜೊತೆ ರಾಜಿ ಮಾಡಿಕೊಳ್ಳದೆ, ನಿಷ್ಠುರತೆಯಿಂದ ಆದಿವಾಸಿಗಳ ಸಾಮಾಜಿಕ ನ್ಯಾಯಕ್ಕಾಗಿ ಕಾನೂನು ಚೌಕಟ್ಟಿನಲ್ಲಿ ಹೋರಾಟ ನಡೆಸಿದವರು. ಅವರ ಮೇಳೆ ಸುಳ್ಳು ಕೇಸು ದಾಖಲಿಸಿ ಭೀಮ ಕೊರೆಗಾಂವ್ ಪ್ರಕರಣಕ್ಕೆ ಲಿಂಕ್ ಮಾಡಿ ಕಾನೂನುಬಾಹಿರವಾಗಿ 2020ರ ಆಗಸ್ಟ್ 8 ರಂದು ಬಂಧಿಸಿ ಅವರನ್ನು ಮುಂಬೈ ತಳೋಜ ಜೈಲಿಗಟ್ಟಲಾಯಿತು.

ಪೊಲೀಸರು ಮತ್ತು ಎನ್‍ಐಎ ಅಧಿಕಾರಿಗಳು ಕರಾಳ ಕಾನೂನು ಯುಎಪಿಎ ಕಾಯ್ದೆಯಡಿ ಸ್ಟ್ಯಾನ ಸ್ವಾಮಿಯನ್ನು ಬಂಧಿಸಿದ್ದರು. ಒರ್ವ ಅಮಾಯಕ ಹೋರಾಟಗಾರನ್ನನ್ನು ನಮ್ಮ ದೇಶದ ಆಡಳಿತ ಅಮಾನವೀಯವಾಗಿ ನಡೆಸಿಕೊಂಡಿದ್ದಲ್ಲದೆ ಅವರ ಸಾವಿಗೆ ಕಾರಣವಾಗಿದೆ. ಇವರ ಸಾವಿನ ಜವಾಬ್ದಾರಿ ಕೇಂದ್ರ ಸರಕಾರವೇ ಹೊರಬೇಕಾಗಿದೆ ಎಂದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ, ಕೆಥೊಲಿಕ್‌ ಸಭಾ ಅಧ್ಯಕ್ಷರಾದ ಮೇರಿ ಡಿಸೋಜಾ, ಕಾರ್ಯದರ್ಶಿ ಗ್ರೆಗರಿ ಪಿಕೆ ಡಿಸೋಜಾ, ಉಡುಪಿ ಧರ್ಮಪ್ರಾಂತ್ಯದ ಧರ್ಮಗುರುಗಳಾದ ವಂ|ಚೇತನ್‌ ಲೋಬೊ, ವಂ|ರೊಯ್‌ ಸ್ಟನ್‌ ಫೆರ್ನಾಂಡಿಸ್‌, ವಂ|ವಿಲಿಯಂ ಮಾರ್ಟಿಸ್‌, ನಾಯಕರುಗಳಾದ ಸುಂದರ ಮಾಸ್ತರ್‌, ವೆರೋನಿಕಾ ಕರ್ನೆಲಿಯೊ, ವಾಲ್ಟರ್‌ ಸಿರಿಲ್‌ ಪಿಂಟೊ, ರೋಶನಿ ಒಲಿವರ್‌, ಶಾಂತಿ ಪಿರೇರಾ, ರಮೇಶ ಕಾಂಚನ್‌, ಯತೀಶ್‌ ಕರ್ಕೇರಾ, ಯಾಸಿನ್‌ ಮಲ್ಪೆ, ಹುಸೇನ್‌ ಕೋಡಿಬೆಂಗ್ರೆ, ಶ್ಯಾಮ್‌ ರಾಜ್‌ ಬಿ̧ರ್ತಿ, ಪ್ರಶಾಂತ್‌ ಜತ್ತನ್ನ ಹಾಗೂ ಇತರ ಹಲವು ಸಂಘಟನೆಗಳ ನಾಯಕರುಗಳು ಭಾಗವಹಿಸಿದ್ದರು.


Spread the love