
ಫೆಬ್ರವರಿ ಕೊನೆಯೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ – ಬಿ ಕೆ ಹರಿಪ್ರಸಾದ್
ಉಡುಪಿ: ಮುಂಬರುವ ವಿಧಾನಸಭಾ ಚುನಾವಣೆಗೆ ಫೆಬ್ರವರಿ ತಿಂಗಳ ಕೊನೆಯೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಸಾಧ್ಯತೆ ಇದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಹೇಳಿದರು.
ಅವರು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಭ್ಯರ್ಥಿಗಳ ಪಟ್ಟಿಗಳು ಈಗಾಗಲೇ ನಿನ್ನೆ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ 37 ಜನರ ಸಮ್ಮುಖ ಬಂದಿದ್ದು, ನಿನ್ನೆ ಸಂಜೆ ನಾಲ್ಕು ಗಂಟೆಯವರೆಗೂ ಸುದೀರ್ಘವಾಗಿ ಚರ್ಚೆ ಮಾಡಲಾಗಿದೆ. ಎಲ್ಲರು ಅನಿಸಿಕೆ, ಶಿಫಾರಸುಗಳನ್ನು ಕೊಟ್ಟಿದ್ದಾರೆ, ಮುಂದಿನ ಹಂತದಲ್ಲಿ ಸ್ಕ್ರೀನಿಂಗ್ ಕಮಿಟಿ ಮುಂದೆ ಹೋಗಲಿದೆ. ಸ್ಕ್ರೀನಿಂಗ್ ಕಮಿಟಿ ಆಯ್ಕೆಯಾಗಬೇಕು, ಅದರಲ್ಲಿ ಮೂರು ಜನ ಎಐಸಿಸಿ ಅವರು ಇರಲಿದ್ದು ಸ್ಕ್ರೀನಿಂಗ್ ಕಮಿಟಿ ಫೈನಲ್ ಮಾಡಿ ಆಮೇಲೆ ಸೆಂಟ್ರಲ್ ಎಲೆಕ್ಷನ್ ಕಮಿಟಿಗೆ ಹೋಗುತ್ತದೆ. ಪ್ರಾಥಮಿಕ ಹಂತದ ಪ್ರಕ್ರಿಯೆ ಮುಗಿದು ಬಂದಿದ್ದು, ನಿನ್ನೆ ಪ್ರದೇಶ ಕಾಂಗ್ರೆಸ್ ಚುನಾವಣಾ ಸಮಿತಿ ಜವಾಬ್ದಾರಿ ಮುಕ್ತಾಯವಾಗಿದೆ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಅವರು ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲಿದ್ದಾರೆ ಎಂದರು.
ಕುದುರೆ ವ್ಯಾಪಾರದ ಕುರಿತು ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಪ್ರತಿಕ್ರಿಯಸಿ ಅತಂತ್ರ ಸರಕಾರ ಬಂದರೆ ಕುದುರೆ ವ್ಯಾಪಾರಕ್ಕೆ ಅವಕಾಶ ಆಗಲಿದ್ದು ಈ ಬಾರಿ ಯಾವುದೇ ಕಾರಣಕ್ಕೂ ಅತಂತ್ರ ಸರಕಾರ ಬರುವುದಿಲ್ಲ ಜನರಿಗೆ ಬಿಜೆಪಿ ಸರಕಾರದಿಂದ ನೋವಾಗಿದೆ, ಆದ್ದರಿಂದ ಕಾಂಗ್ರೆಸ್ ಗೆ ಸ್ಪಷ್ಟವಾದ ಬಹುಮತ ಬರಲಿದೆ ಎಂದರು.
ಕೋಲಾರ ಕಾರ್ಯಕ್ರಮದಲ್ಲಿ ಭಾಗಿಯಾದ ಕುರಿತು ಪ್ರತಿಕ್ರಿಯಿಸಿದ ಅವರು ಕೋಲಾರದ ಕಾರ್ಯಕ್ರಮ ಇವತ್ತು ಇದ್ದಿತ್ತು, ಆದರೆ ನಾನು ಇವತ್ತು ಇಲ್ಲಿ ಇದ್ದೇನೆ. ನನಗೆ ಕರಾವಳಿ ಮತ್ತು ಮಲೆನಾಡಿನ ಜವಾಬ್ದಾರಿಯನ್ನು ನೀಡಲಾಗಿದೆ. ಕರಾವಳಿಯ ಪ್ರಜಾಧ್ವನಿ ಕಾರ್ಯಕ್ರಮದ ಸಂಘಟನೆ ಹಿನ್ನೆಲೆಯಲ್ಲಿ ನಾನು ಇಲ್ಲಿದ್ದೇನೆ. ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕದಲ್ಲಿದ್ದಾರೆ, ಡಿಕೆ ಶಿವಕುಮಾರ್ ಅವರು ದಕ್ಷಿಣ ಕರ್ನಾಟಕದಲ್ಲಿದ್ದಾರೆ ಎಂದರು.
ಪರಮೇಶ್ವರ್ ಅವರಿಗೆ ಪಕ್ಷದಲ್ಲಿ ಯಾವುದೇ ಮುನಿಸಿಲ್ಲ ಅದು ಕೇವಲ ಮಾಧ್ಯಮದಲ್ಲಿದೆ ಬಿಟ್ಟರೆ ಪಕ್ಷದಲ್ಲಿ ಯಾರ ಮೇಲೂ ಯಾರಿಗೂ ಭಿನ್ನಾಭಿಪ್ರಾಯಗಳಿಲ್ಲ. ಪರಮೇಶ್ವರ್ ಅವರು ಯಾರ ಮೇಲೂ ಸಿಟ್ಟು ಮಾಡಿಕೊಂಡಿಲ್ಲ, ಹಾಗಾಗಿ ಸಮಾಧಾನದ ಅಗತ್ಯವಿಲ್ಲ. ನಾವು ಜೊತೆಯಾಗಿ ಊಟ ಕಾಫಿಗೆ ಹೋಗುತ್ತಿರುತ್ತೇವೆ, ಸಿಟ್ಟು ಮಾಡಿಕೊಂಡಿದ್ದರೆ ನಾವು ಹೋಗುತ್ತಿದ್ದೇವಾ ? ಎಂದು ಪ್ರಶ್ನಸಿದರು.
ಡಾ. ಜಿ ಪರಮೇಶ್ವರ್ ಅವರು ಚುನಾವಣಾ ಪ್ರಣಾಳಿಕೆಯ ಸಮಿತಿಯ ಅಧ್ಯಕ್ಷರು. ಚುನಾವಣಾ ಪ್ರಣಾಳಿಕೆಯ ವಿಚಾರವಾಗಿ ಅವರೊಂದಿಗೆ ಕೆಲವೊಂದು ಚರ್ಚೆ ಮಾಡಬೇಕಾಗಿತ್ತು ಇವೆಲ್ಲವೂ ಕೂಡ ಮಾಧ್ಯಮಗಳು ಮಾಡಿರುವ ಸೃಷ್ಟಿಯಷ್ಟೇ ಬೇರೇನಿಲ್ಲ ಎಂದರು.