
ಫೆ 19: ಕುಂದಾಪುರದಲ್ಲಿ ನೂತನ ನ್ಯಾಯಾಲಯ ಮತ್ತು ವಕೀಲರ ಸಂಘದ ಕಟ್ಟಡದ ಉದ್ಘಾಟನೆ
ಕುಂದಾಪುರ: ಇಲ್ಲಿನ ನ್ಯಾಯಾಲಯ ಆವರಣದಲ್ಲಿ ಅಂದಾಜು 6 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನ್ಯಾಯಾಲಯ ಮತ್ತು ವಕೀಲರ ಸಂಘದ ಕಟ್ಟಡದ ಉದ್ಘಾಟನಾ ಸಮಾರಂಭವು ಫೆಬ್ರವರಿ 19 ರ ಶನಿವಾರ ಮಧ್ಯಾಹ್ನ 2 ಗಂಟೆಗೆ ನ್ಯಾಯಾಲಯದ ಆವರಣದಲ್ಲಿ ನಡೆಯಲಿದೆ ಎಂದು ಕುಂದಾಪುರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್. ಪ್ರಮೋದ್ ಹಂದೆ ಹೇಳಿದರು.
ಇಲ್ಲಿನ ವಕೀಲರ ಸಂಘದ ಭವನದಲ್ಲಿ ಗುರುವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮಗಳ ಮಾಹಿತಿ ನೀಡಿದರು.
ಸರ್ವೋಚ್ಛ ನ್ಯಾಯಾಲಯ ನವದೆಹಲಿ ಇದರ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರು ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಋತು ರಾಜ್ ಅವಸ್ಥಿ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ರಂಗಸ್ವಾಮಿ ನಟರಾಜ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾದುಸ್ವಾಮಿ, ಲೋಕೋಪಯೋಗಿ ಇಲಾಖೆಯ ಸಚಿವ ಸಿ.ಸಿ ಪಾಟೀಲ್, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕರ್ನಾಟಕ ಉಚ್ಛ ನ್ಯಾಯಾಲಯದ ಮಹಾ ವಿಲೇಖನಾಧಿಕಾರಿಗಳಾದ ಟಿ.ಜಿ ಶಿವಶಂಕರೇ ಗೌಡ ಹಾಗೂ ಕರ್ನಾಟಕ ಸರ್ಕಾರದ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಟಿ. ವೆಂಕಟೇಶ್ ನಾಯ್ಕ್ ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಮಾತನಾಡಿದ ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಸಳ್ವಾಡಿ ನಿರಂಜನ್ ಹೆಗ್ಡೆ, ಎರಡು ಅಂತಸ್ತಿನ ಅತ್ಯಂತ ಸುಸಜ್ಜಿತ ಕಟ್ಟಡ ತಲೆ ಎತ್ತಿದ್ದು, ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ, ವಕೀಲರ ಭವನ, ಮಹಿಳಾ ವಕೀಲರಿಗೆ ಪ್ರತ್ಯೇಕ ಕೊಠಡಿ, ಕಾನ್ಫರೆನ್ಸ್ ಹಾಲ್ಗಳಿಗೆ ಈ ಕಟ್ಟಡದಲ್ಲಿ ಅವಕಾಶ ನೀಡುವ ಉದ್ದೇಶಗಳಿವೆ. ಉದ್ಘಾಟನಾ ಸಮಾರಂಭದ ಬಳಿಕ ವಕೀಲರ ಸಂಘದ ವಾರ್ಷಿಕ ಕಾರ್ಯಕ್ರಮ ಜರುಗಲಿದ್ದು, ಇದರ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಲಿದೆ ಎಂದರು.
ವಕೀಲರಾದ ಗಿಳಿಯಾರು ರಾಮಣ್ಣ ಶೆಟ್ಟಿ, ಬನ್ನಾಡಿ ಸುಭಾಶ್ಚಂದ್ರ ಶೆಟ್ಟಿ, ಕೊತ್ತಾಡಿ ರಾಧಕೃಷ್ಣ ಶೆಟ್ಟಿ, ಕೈಲಾಡಿ ಬಾಲಕೃಷ್ಣ ಶೆಟ್ಟಿ ಹಾಗೂ ಕಟ್ಟಡದ ಗುತ್ತಿಗೆದಾರ ಪ್ರಶಾಂತ್ ಮೊಳಹಳ್ಳಿ ಇದ್ದರು.