ಫೆ. 20: ಗುರ್ಮೆ ಗೋ ವಿಹಾರ ಕೇಂದ್ರ ಲೋಕಾರ್ಪಣೆ

Spread the love

ಫೆ. 20: ಗುರ್ಮೆ ಗೋ ವಿಹಾರ ಕೇಂದ್ರ ಲೋಕಾರ್ಪಣೆ

ಉಡುಪಿ: ಗುರ್ಮೆ ಫೌಂಡೇಶನ್‌ ಕಳತ್ತೂರು ವತಿಯಿಂದ ಕಳತ್ತೂರು ಗ್ರಾಮದ ಗುರ್ಮೆಯಲ್ಲಿ ನೂತನವಾಗಿ ನಿರ್ಮಿಸಲಾದ ಗುರ್ಮೆ ಗೋ ವಿಹಾರ ಕೇಂದ್ರ ಲೋಕಾರ್ಪಣೆ ಮತ್ತು ದಿ. ಪದ್ಮಾವತಿ ಪಿ. ಶೆಟ್ಟಿ ಗುರ್ಮೆ ಅವರ 4 ನೇ ಪುಣ್ಯತಿಥಿಯ ಪ್ರಯುಕ್ತ ಫೆಬ್ರವರಿ 20 ಕಳತ್ತೂರು ಗುರ್ಮೆಯಲ್ಲಿ ಕೀರ್ತನ-ಸಾಂತ್ವನ-ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕೀರ್ತನ-ಸಾಂತ್ವನ -ಯಕ್ಷಗಾನ ಕಾರ್ಯಕ್ರಮದ ಅಂಗವಾಗಿ ಸಂಜೆ 4 ಗಂಟೆಗೆ ಶ್ರಿಕಾಂತ ಶೆಟ್ಟಿ ಕಾರ್ಕಳ ಮತ್ತು ಬಳಗ, ಸಂದೇಶ ನೀರುಮಾರ್ಗ ಮತ್ತು ಬಳಗ ಮಂಗಳೂರು ಇವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಸಂಜೆ 4.30 ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಸಾಂತ್ವಾನ ಕಾರ್ಯಕ್ರಮದಡಿ ಸುಮಾರು 500 ಮಂದಿ ಅನಾರೋಗ್ಯ ಪೀಡಿತರಿಗೆ ಧನ ಸಹಾಯ, 280 ಮಂದಿ ಕೊರೋನಾ ವಾರಿಯರ್ಸ್‌ ಗೆ ಸಮ್ಮಾನ, ಪೌರ ಕಾರ್ಮಿಕರಿಗೆ ಗೌರವಾರ್ಪಣೆ ಸಹಿತವಾಗಿ ವಿವಿಧ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬಳಿಕ ಭಜನಾ ಸಂಕೀರ್ತನೆ ಕಾರ್ಯಕ್ರಮ ಮುಂದುವರೆಯಲಿದೆ. ರಾತ್ರಿ 8 ರಿಂದ ಶ್ರೀ ಗುರು ನರಸಿಂಹ ದಶಾವತಾರ ಯಕ್ಷಗಾನ ಮಂಡಳಿ ಸಾಲಿಗ್ರಾಮ ಇವರಿಂದ ದಕ್ಷ ಯಜ್ಞ-ರಾಜಾ ರುದ್ರ ಕೋಪ ಎಂಬ ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್‌, ಡಾ ಜೀವನ್‌ ಕಿಣಿ ಮುಂಬಯಿ, ಸಾಹಿತಿ ಡಾ ಭರತ್‌ ಕುಮಾರ್‌ ಪೊಲಿಪು, ಸೂರಿ ಶೆಟ್ಟಿ ಕಾಪು ಇವರುಗಳನ್ನು ಸನ್ಮಾನಿಸಲಾಗುವುದು.

ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಉದ್ಘಾಟಿಸಲಿದ್ದು, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಸ್ವರ್ಣ ಪೀಠಿಕಾಪುರ ಗೌರಿಗದ್ದೆಯ ಶ್ರೀ ವಿನಯ ಗುರೂಜಿ ಆಶೀರ್ವಚನ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಸಚಿವರಾದ ಎಸ್‌ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ವಿ ಸುನೀಲ್‌ ಕುಮಾರ್‌, ಶಾಸಕರಾದ ರಘುಪತಿ ಭಟ್‌, ಲಾಲಾಜಿ ಆರ್‌ ಮೆಂಡನ್‌, ಎಮ್‌ ಆರ್‌ ಜಿ ಗ್ರೂಪ್‌ ಇದರ ಮುಖ್ಯಸ್ಥರಾದ ಕೆ ಪ್ರಕಾಶ್‌ ಶೆಟ್ಟಿ, ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಮೋಹನ್‌ ಆಳ್ವಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿಲಿದ್ದಾರೆ ಎಂದು ಗುರ್ಮೆ ಫೌಂಡೇಶನ್‌ ಅಧ್ಯಕ್ಷ ಸುರೇಶ ಪಿ ಶೆಟ್ಟಿ ಗುರ್ಮೆ ತಿಳಿಸಿದ್ದಾರೆ.


Spread the love