ಫೆ. 22: ಟೋಲ್ ವಿನಾಯತಿ ಆಗ್ರಹಿಸಿ ಕೋಟ ಜಿಪಂ ವ್ಯಾಪ್ತಿ ಬಂದ್- ಸೂಕ್ತ ನ್ಯಾಯ ಸಿಗುವ ತನಕ ಹೋರಾಟ ಮುಂದುವರಿಸುವ ಎಚ್ಚರಿಕೆ

Spread the love

ಫೆ. 22: ಟೋಲ್ ವಿನಾಯತಿ ಆಗ್ರಹಿಸಿ ಕೋಟ ಜಿಪಂ ವ್ಯಾಪ್ತಿ ಬಂದ್- ಸೂಕ್ತ ನ್ಯಾಯ ಸಿಗುವ ತನಕ ಹೋರಾಟ ಮುಂದುವರಿಸುವ ಎಚ್ಚರಿಕೆ

ಉಡುಪಿ: ಸ್ಥಳೀಯ ವಾಹನಗಳಿಗೆ ಶುಲ್ಕ ವಿನಾಯತಿ ಆಗ್ರಹಿಸಿ ಸೋಮವಾರ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಂದ್ ಕರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು 85ಕ್ಕೂ ಅಧಿಕ ಸಂಘಟನೆಗಳು ತಮ್ಮ ಬೆಂಬಲ ವ್ಯಕ್ತಪಡಿಸಿದ್ದು ಎಲ್ಲಾ ಸಾರ್ವಜನಿಕರು, ಸಂಘ ಸಂಸ್ಥೆಯವರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ವಾಹನ ಇತರ ವ್ಯವಹಾರ ಸ್ಥಗಿತಗೊಳಿಸಿ ಬೆಳಗ್ಗೆ 10 ಗಂಟೆಯಿಂದ ಸಾಸ್ತಾನ ಸುಂಕ ವಸೂಲಾತಿ ಕೇಂದ್ರದ ಬಳಿ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷರಾದ ಶ್ಯಾಮ ಸುಂದರ ನಾಯರಿ ಹೇಳಿದರು.

ಅವರು ಭಾನುವಾರ ಸಂಜೆ ಕೋಟದ ಅಘೋರೇಶ್ವರ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠೀಯಲ್ಲಿ ಮಾತನಾಡಿ ಇದು ಸಾರ್ವಜನಿಕರ ಹಕ್ಕಿಗಾಗಿ ಹಾಗೂ ಸುರಕ್ಷತೆಗಾಗಿ ಮಾಡುವ ಹೋರಾಟವಾಗಿದ್ದು, ಎಲ್ಲಾ ಸಾರ್ವಜನಿಕರು, ಸಂಘ ಸಂಸ್ಥೆಯವರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ವಾಹನ ಇತರ ವ್ಯವಹಾರ ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಪ್ರತಿಭಟನೆಯಲ್ಲಿ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸುಮಾರು 7000 ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು ಇದಕ್ಕಾಗಿ ಸಕಲ ಸಿದ್ದತೆಗಳನ್ನು ಮಾಡಲಾಗಿದೆ ಎಂದರು.

ಈ ಹೋರಾಟ ಸಂಪೂರ್ಣವಾಗಿ ಪಕ್ಷಾತೀತ ಮತ್ತು ಧರ್ಮಾತೀತವಾಗಿದ್ದು ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ಭಾಗವಹಿಸಲಿದ್ದು ಸಭೆಯ ವೇದಿಕೆಯಲ್ಲಿ ಬಾಳ್ಕುದ್ರು ಮಠದ ಶ್ರೀ ನರಶಿಂಹಶ್ರಮ ಸ್ವಾಮೀಜಿ, ಸಾಸ್ತಾನ ಸಂತ ಅಂತೋನಿ ದೇವಾಲಯದ ಧರ್ಮಗುರುಗಳಾದ ವಂ|ಜೋನ್ ವಾಲ್ಟರ್ ಮೆಂಡೊನ್ಸಾ, ಸಾಸ್ತಾನ ಸಂತ ಥೋಮಸ್ ಸಿರೀಯನ್ ಚರ್ಚಿನ ಧರ್ಮಗುರುಗಳಾದ ವಂ|ನೊಯೆಲ್ ಲೂವಿಸ್, ಗುಂಡ್ಮಿ ಜುಮ್ಮ ಮಸೀದಿಯ ಮೌಲಾನರಾದ ಮೌಲಾನಾ ರಿಜ್ವಾನ್ ಮೌಲಾನಾ ಮಹಮ್ಮದ್ ಆಲಿ ಸಹಾದಿ ಬರ್ವಾ ಉಪಸ್ಥಿತಿ ಇರಲಿದ್ದು, ಇವರೊಂದಿಗೆ ಪರಿಸರದ ಜನನಾಯಕರು, ಎಲ್ಲಾ ವಾಹನ ಚಾಲಕ ಮಾಲಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸದಸ್ಯರು, ವ್ಯಾಪಾರಸ್ಥರು ಹಾಗೂ ಸಾವಿರಾರು ಮಂದಿ ಸ್ಥಳೀಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಜಿಲ್ಲೆಗೆ ಗ್ರಹಣದಂತೆ ಬಂದ ನವಯುಗ ಕಂಪೆನಿ ತನ್ನ ಅವೈಜ್ಞಾನಿಕ ಹಾಗೂ ಅಸಮರ್ಪಕ ಕಾಮಗಾರಿಯಿಂದ ಈಗಾಗಲೇ ಇಡೀ ಜಿಲ್ಲೆಯಲ್ಲಿ ಸಾಕಷ್ಟು ಸಾವು ನೋವು ಶಾಶ್ವತ ಅಂಗವಿಕಲತೆ ಗಳಿಗೆ ಕಾರಣವಾಗಿದೆ. ಅದಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಇದೀಗ ಫಾಸ್ಟ್ಯಾಗ್ ನೆಪದಲ್ಲಿ ಸಾರ್ವಜನಿಕರಿಂದ ವಸೂಲಿಗೆ ಹೊರಟಿದ್ದು, ಸ್ಥಳೀಯರ ಹಕ್ಕನ್ನು ಕಿತ್ತುಕೊಳ್ಳಲು ಹೊರಟಿದೆ.

ಹಿಂದೊಮ್ಮೆ ಈ ಪರಿಸರದಲ್ಲಿ ಸಾರ್ವಜನಿರು ಸೇರಿ ಹೋರಾಟ ಮಾಡಿದಾಗ ಸ್ವತ ಸಂಸದರು ಎಲ್ಲಾ ಜನಪ್ರತಿನಿದಿನಗಳ, ಜಿಲ್ಲಾಡಳಿತದ, ನವಯುಗದ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ವಾಹನ ಗಳಿಗೆ ಉಚಿತ ಸಂಚಾರದ ಘೋಷಣೆ ಮಾಡಿದ್ದರು. ಇದೀಗ ಫಾಸ್ಟ್ಯಾಗ್ ನೆಪದಲ್ಲಿ ಈ ಸೌಲಭ್ಯ ಕಿತ್ತುಕೊಂಡಿರುವುದರ ವಿರುದ್ಧ ಎಲ್ಲರೂ ಸೇರಿ ಪ್ರತಿಭಟಿಸಲು ಉದ್ದೇಶಿಸಲಾಗಿದ್ದು, ಕೇವಲ ಸುಂಕದ ವಿಚಾರವಲ್ಲದೇ ಇನ್ನೂ ಹಲವಾರು ವಿಚಾರಗಳು ಕೂಡ ಪ್ರತಿಭಟನೆಗೆ ಕಾರಣವಾಗಿವೆ ಎಂದರು.

12 ವರ್ಷಗಳಾದರೂ ಫ್ಲೈ ಓವರ್ ಕಾಮಗಾರಿ ಮುಗಿದಿಲ್ಲ ಅಲ್ಲದೆ ಪ್ರಮುಖ ಊರುಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡದೆ, ಅವೈಜ್ಞಾನಿಕ ರಸ್ತೆ ವಿಭಾಜಕ ಮತ್ತು ಅಂಡರ್ ಪಾಸ್ ಗಳ ಪರಿಣಾಮ ವಾಹನ ಸವಾರರು ಹಾಗೂ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ರಸ್ತೆಯಲ್ಲಿ ಸೂಕ್ತ ಬೀದಿ ದೀಪಗಳ ಕೊರತೆ, ಮೊದಲಿದ್ದ ಚರಂಡಿಗಳನ್ನೆಲ್ಲಾ ಅಗೆದು ತೆಗೆದು ಇದೀಗ ಹೊಸದಾಗಿ ನಿರ್ಮಿಸದ ಚರಂಡಿಗಳು ಹಾಗೂ ಮಳೆಗಾಲದಲ್ಲಿ ನೆರೆಯಂತೆ ನೀರು ನಿಲ್ಲುವುದರಿಂದ ಸಮಸ್ಯೆಗಳು ಉಂಟಾಗುತ್ತಿವೆ ಎಂದರು.

ನಮ್ಮ ಹೋರಾಟ ಸೂಕ್ತ ನ್ಯಾಯ ಸಿಗುವ ತನಕ ಮುಂದುವರೆಯಲಿದ್ದು, ಸಂಸದರ ದಿಶಾ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದ್ದು, ಸ್ಥಳೀಯರಿಗೆ ಶಾಶ್ವತವಾಗಿ ಸಂಪೂರ್ಣ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಘೋಷಣೆ ಮಾಡುವ ತನಕ ಪ್ರತಿಭಟನೆ ಕೈಬೀಡುವುದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಪ್ರತಾಪ್ ಶೆಟ್ಟಿ, ಆಲ್ವಿನ್ ಅಂದ್ರಾದೆ, ದಿನೇಶ್ ಗಾಣಿಗ, ಭೋಜ ಪೂಜಾರಿ, ಅಚ್ಯುತ ಪೂಜಾರಿ, ಸಹದೇವ ಹಾಗೂ ಇತರರು ಉಪಸ್ಥಿತರಿದ್ದರು.


Spread the love