ಫೆ.22-27: ಕೆಂದ್ರ ಸರಕಾರದ ಜನವಿರೋಧಿ ನಿಲುವಿನ ವಿರುದ್ದ ಕಾಂಗ್ರೆಸ್ ವತಿಯಿಂದ ಹೆಜಮಾಡಿಯಿಂದ – ಶಿರೂರುವರೆಗೆ ಜನಧ್ವನಿ ಪಾದಯಾತ್ರೆ

Spread the love

ಫೆ.22-27: ಕೆಂದ್ರ ಸರಕಾರದ ಜನವಿರೋಧಿ ನಿಲುವಿನ ವಿರುದ್ದ ಕಾಂಗ್ರೆಸ್ ವತಿಯಿಂದ ಹೆಜಮಾಡಿಯಿಂದ – ಶಿರೂರುವರೆಗೆ ಜನಧ್ವನಿ ಪಾದಯಾತ್ರೆ

ಉಡುಪಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಂದಿರುವ ರೈತ ವಿರೋಧಿ ನೀತಿಗಳಿಂದ ಎ.ಪಿ.ಎಂ.ಸಿ, ಕಾಯ್ದೆ ತಿದ್ದುಪಡಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದು, ವಿದ್ಯುತ್ ಕಾಯ್ದೆ ತಿದ್ದುಪಡಿ ಹಾಗೂ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗಳ ವಿರುದ್ದ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಫೆಬ್ರವರಿ 22 ರಿಂದ 27ರ ವರೆಗೆ ಹೆಜಮಾಡಿಯಿಂದ – ಶಿರೂರಿನ ವರೆಗೆ 108 ಕಿಮಿಗಳ ‘ಜನಧ್ವನಿ’ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು.

ಅವರು ಶುಕ್ರವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಸರಕಾರದಸೆಸ್ ಹೇರಿಕೆಯಿಂದ ತೈಲ ಬೆಲೆ ಏರಿಕೆಗೊಂಡು ಸರಕು ಸಾಗಣೆ ವೆಚ್ಚ ಹೆಚ್ಚಳವಾಗಿ ದಿನ ಬಳಕೆ ವಸ್ತುಗಳ ಬೆಲೆಗಳು ಹಾಗೂ ಸಿಮೆಂಟ್ ಮತ್ತು ಸ್ಟೀಲ್ ಬೆಲೆಗಳು ನಿಯಂತ್ರಣವಿಲ್ಲದಂತೆ ಮುನ್ನುಗ್ಗುತ್ತಿದೆ. ಅಗತ್ಯ ವಸ್ತುಗಳ ಕಾಯ್ದೆಯಿಂದ ಕೆಲವು ವಸ್ತುಗಳನ್ನು ತೆಗೆದು ಹಾಕಲಾಗಿದೆ. ಇದರಲ್ಲಿ ಅಕ್ರಮ ದಾಸ್ತಾನಿನ ಮೇಲೆ ದಾಳಿ ಮಾಡಲು ಅವಕಾಶವಿಲ್ಲದಂತಾಗಿ ಕೃತಕ ಅಭಾವ ಸೃಷ್ಟಿಗೆ ಸರಕಾರವೇ ಪ್ರೇರಣೆ ನೀಡಿದಂತಾಗಿದೆ. ತೈಲ ಬೆಲೆಯನ್ನು ಜಿ ಎಸ್ ಟಿ ವ್ಯಾಪ್ತಿಗೆ ತರಬೇಕೆಂಬ ಬೇಡಿಕೆ ಕನಸಾಗಿ ಉಳಿದಿದೆ.

ಕೇಂದ್ರ ಮಾಗೂ ರಾಜ್ಯ ಸರಕಾರಗಳ ಈ ಜನವಿರೋಧಿ ನೀತಿಗಳ ವಿರುದ್ಧ ಜನಜಾಗೃತಿ ಮೂಡಿಸಲು ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ಪಾದಯಾತ್ರೆಯು ಹೆಜಮಾಡಿ ಟೋಲ್ ಗೇಟ್ ನಿಂದ ಪ್ರಾರಂಭಗೊಂಡು ಕಾಪು-ಕಟಪಾಡಿ-ಉಡುಪಿ-ಕಲ್ಯಾಣಪುರ-ಸಂತೆಕಟ್ಟೆ-ಬ್ರಹ್ಮಾವರ-ಕುಂದಾಪುರ- ಅರೆಹೊಳೆ-ಬೈಂದೂರಿನಲ್ಲಿ ಸಮಾಪನಗೊಳ್ಳಲಿರುವುದು.

ಹೆಜಮಾಡಿಯಿಂದ ಬೈಂದೂರು ಶಿರೂರಿನವರೆಗಿನ 108 ಕಿ.ಮೀ. ಪಾದಯಾತ್ರೆಯಲ್ಲಿ ಪಕ್ಷದ ರಾಜ್ಯ ಮುಖಂಡರು ಭಾಗವಹಿಸಲಿದ್ದಾರೆ. *ಜನಧ್ವನಿ” ಪಾದಯಾತ್ರೆಯು ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರ ಘನ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡು, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ಭಾಗವಹಿಸುವಿಕೆಯೊಂದಿಗೆ ಸಮಾಪನಗೊಳ್ಳಲಿರುವುದು. ಈ ಪಾದಯಾತ್ರೆಯಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರುಗಳು ಹಾಗೂ ಜಿಲ್ಲಾ ಮುಖಂಡರುಗಳು ಭಾಗವಹಿಸಲಿರುವರು ಎಂದರು.

ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಹುಟ್ಟುಹಾಕಿದ ಹಲವಾರು ಸರಕಾರಿ ಸೌಮ್ಯದ ಸಂಸ್ಥೆಗಳನ್ನು ಕೇಂದ್ರ ಸರಕಾರ ಮಾರಾಟ ಮಾಡುತ್ತಿದೆ, ಎಲ್.ಐ.ಸಿ, ರೈಲ್ವೆ, ವಿಮಾನ ನಿಲ್ದಾಣ, ಬೆಮೆಲ್, ಬ್ಯಾಂಕುಗಳು ಮಾಗ್ರ ನೂರಕ್ಕೂ ಹೆಚ್ಚು ಸರಕಾರಿ ಹಾಗೂ ಅರೆ ಸರಕಾರಿ ಸೌಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತಿದೆ. ಇದು ಸರಕಾರದ ವೈಫಲ್ಯದ ಪ್ರತೀಕವಾಗಿದೆ. ಇದರಿಂದಾಗಿ ಸಹಸ್ರಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿ ಏರ್ಪಟ್ಟಿದೆ. ಬರೇ ಬಂಡವಾಳಶಾಹಿಗಳನ್ನು ನೆಚ್ಚಿಕೊಂಡು ಆಡಳಿತ ನಡೆಸುತ್ತಿರುವ ಈ ಸರಕಾರಕ್ಕೆ ಜನರ ಬದುಕಿನ ಬಗ್ಗೆ ಬದ್ಧತೆ ಇಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ವಾಸ್ತವ ಅಲ್ಲದ ಸರಕಾರದ ಸುಳ್ಳಿನ ಹೇಳಿಕೆಗಳಿಂದ ಜನರು ಭ್ರಮಾಲೋಕದಲ್ಲಿ ಸಂಚರಿಸುತ್ತಿದ್ದರು, ಆದರೆ ಅರಿವಾಗುತ್ತಿದೆ. 60 ವರ್ಷ ದೇಶದ ಚುಕ್ಕಾಣಿ ಹಿಡಿದು ಅಭಿವೃದ್ಧಿ ಪಥದತ್ತ ಕೊಂಡೊಯ್ದ ಕಾಂಗ್ರೆಸ್ ಪಕ್ಷವನ್ನು ಹಿಂದೂ ವಿರೋಧಿ, ದೇಶ ದ್ರೋಹಿಗಳು ಎಂದು ಹೀಗಳೆಯುವ ಬಿಜೆಪಿಯ ಮನಸ್ಥಿತಿ ಆ ಪಕ್ಷ ಎತ್ತ ಸಾಗುತ್ತಿದೆ ಎಂಬುದನ್ನು ಬಿಂಬಿಸುತ್ತದೆ. ಇದರ ಬಗ್ಗೆ ಜನಸಾಮಾನ್ಯರಿಗೆ ಎಚ್ಚರ ಮಾಡಿಸುವುದೂ ಪಕ್ಷದ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ಪಾದಯಾತ್ರೆಯ ಮೂಲಕ ಪಕ್ಷವನ್ನು ಜನರ ಹತ್ತಿರ ಕೊಂಡೊಯ್ಯುದರೊಂದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ಅರಿವು ಮೂಡಿಸುವ ಉದ್ದೇಶವನ್ನು ಪಕ್ಷ ಹೊಂದಿರುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಬ್ಲಾಕ್ ಅಧ್ಯಕ್ಷರುಗಳಾದ ಮಂಜುನಾಥ ಪೂಜಾರಿ, ನವೀನ್ ಚಂದ್ರ ಸುವರ್ಣ, ದಿನಕರ ಹೇರೂರು, ಶಂಕರ್ ಕುಂದರ್, ಸದಾಶಿವ ಸಾಲ್ಯಾನ್, ಸದಾಶಿವ ದೇವಾಡಿಗ, ಪದಾಧಿಕಾರಿಗಳಾದ ದೀಪಕ್ ಕೋಟ್ಯಾನ್, ಸೌರಭ್ ಬಲ್ಲಾಳ್, ಗೀತಾ ವಾಗ್ಳೆ, ಶಶಿಧರ ಶೆಟ್ಟಿ, ಇಸ್ಮಾಯಿಲ್, ರೋಶನಿ ಒಲಿವೇರಾ, ಹರೀಶ್ ಪಾಂಗಾಳ, ಹರೀಶ್ ಕಿಣಿ, ನರಸಿಂಹ ಮೂರ್ತಿ, ಕಿಶೋರ್ ಎರ್ಮಾಳ್, ಹಬೀಬ್ ಆಲಿ, ವೈ ಸುಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love

1 Comment

Comments are closed.