
ಫೆ.23, ಮಂಡ್ಯ ಡಿಸಿ ಕಚೇರಿ ಮುತ್ತಿಗೆಗೆ ನಿರ್ಧಾರ
ಮೈಸೂರು: ಕಬ್ಬಿಗೆ ನ್ಯಾಯಯುತ ಬೆಲೆ ಮತ್ತು ಎಸ್‌ಎಪಿ ಘೋಷಿಸುವಂತೆ ಸರ್ಕಾರವನ್ನು ಆಗ್ರಹಿಸಿ ನಡೆಯುತ್ತಿರುವ ಚಳವಳಿಯ ಮುಂದುವರಿದ ಭಾಗವಾಗಿ ಫೆ.23 ರಂದು ಮಂಡ್ಯ ಜಿಧಿಕಾರಿ ಕಚೇರಿಗೆ ರೈತರಿಂದ ದಿಗ್ಬಂಧನ ಮಾಡುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತಿ ದೇವನೂರ ಮಹಾದೇವ ಅವರು ಹೇಳಿದಂತೆ, ಬಿಜೆಪಿ ಸರ್ಕಾರ ಜನಪ್ರತಿನಿಧಿ ಸರ್ಕಾರವಲ್ಲ, ಹಣಪ್ರತಿನಿಧಿ ಸರ್ಕಾರ. ಅಂತಃಕರಣವಿಲ್ಲದ ಜೀವ ವಿರೋಧಿ ಸರ್ಕಾರವನ್ನು ವಿಧಾನಸೌಧದಿಂದ ಖಾಲಿ ಮಾಡಿಸಲು ಮೆರವಣಿಗೆ ಮತ್ತು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.
100 ದಿನಗಳಿಂದ ಅಹೋರಾತ್ರಿ ಧರಣಿ ಮಾಡುತ್ತಿzವೆ. 6ದಿನ ಅಮರಣಾಂತ ಉಪವಾಸ ಮಾಡಿದ್ದಾರೆ. ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಕಳುಹಿಸಿದ ಬಳಿಕವೂ ತಲೆಕಡೆಸಿಕೊಂಡಿಲ್ಲ. ಸರ್ಕಾರದ ರೈತ ವಿರೋಧಿ ನಡೆ ಖಂಡಿಸಿ ನಡೆಯಲಿರುವ ಪ್ರತಿಭಟನೆಯಲ್ಲಿ 100 ಟ್ರ್ಯಾಕ್ಟರ್, ಎತ್ತಿನ ಗಾಡಿ, ರೈತರು ಪಶುಗಳೊಂದಿಗೆ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಫೆ.24ರ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸುವುದಾಗಿ ಹೇಳಿದ್ಧಾರೆ. ಒಂದು ವೇಳೆ ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ ರಾಜ್ಯ ಮಟ್ಟದಲ್ಲಿ ಹೋರಾಟ ವಿಸ್ತರಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ ಎಲ್ಲಿಯೇ ಸಭೆ ಸಮಾರಂಭ ಮಾಡಿದರೂ. ಆ ಜಾಗದಲ್ಲಿಯೇ ಪ್ರತಿಭಟನೆ, ಧರಣಿ ನಡೆಸಲು ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ಪ್ರಸನ್ನ ಎನ್.ಗೌಡ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ವಿಜಯೇಂದ್ರ, ಪಿ.ಮರಂಕಯ್ಯ ಪತ್ರಿಕಾಗೋಷ್ಠಿಯಲ್ಲಿ ಇದ್ದರು.