ಫೆ.28, ರೈತರಿಂದ ಮೈಸೂರು ಡಿಸಿ ಕಚೇರಿಗೆ ಮುತ್ತಿಗೆ

Spread the love

ಫೆ.28, ರೈತರಿಂದ ಮೈಸೂರು ಡಿಸಿ ಕಚೇರಿಗೆ ಮುತ್ತಿಗೆ

ಮೈಸೂರು: ಕಬ್ಬಿನ ಹೆಚ್ಚುವರಿ ರೂ.150ನ್ನು ಸಕ್ಕರೆ ಕಾರ್ಖಾನೆಗಳಿಂದ ಕೊಡಿಸುವಂತೆ ಹಾಗೂ ರೈತರ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಫೆ.28 ರಂದು ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ನಗರದ ಜಲದರ್ಶಿನಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಸಂಘದ ಸತತ 39ದಿನಗಳ ಹೋರಾಟದ ಪರಿಣಾಮ ಕಬ್ಬಿಗೆ ರೂ.150 ಹೆಚ್ಚುವರಿ ಆದೇಶವನ್ನು ಸರ್ಕಾರ ಮಾಡಿತ್ತು. ಬಣ್ಣಾರಿ ಸಕ್ಕರೆ ಕಾರ್ಖಾನೆ ಹೆಚ್ಚುವರಿ ಹಣ ಪಾವತಿಸದೆ ಇರುವ ಬಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ವಹಿಸಿಲ್ಲ. ಹೀಗಾಗಿ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಹೇಳಿದರು.

ಅರಿಶಿಣ ಬೆಳೆಗೆ ಬೆಲೆ ಕುಷಿತವಾಗಿದ್ದು ಉತ್ಪಾದನಾ ವೆಚ್ಚವು ಸಿಗುತ್ತಿಲ್ಲ. ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್‌ಗೆ ರೂ. 17,500 ಬೆಂಬಲ ಬೆಲೆ ನಿಗದಿ ಮಾಡಬೇಕು. ಕಾವೇರಿ- ಕಬಿನಿ ಅಚ್ಚುಕಟ್ಟು ನಾಲೆಗಳ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಕಬ್ಬು ಬಾಳೆ ಇನ್ನಿತರ ಬೆಳೆಗಳ ರಕ್ಷಣೆಗಾಗಿ ಬೇಸಿಗೆಯಲ್ಲಿ ದನ ಕರುಗಳ ಕುಡಿಯುವ ನೀರಿಗಾಗಿ ಕೆರೆ ಕಟ್ಟೆಗಳನ್ನು ತುಂಬಿಸಲು, ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಕೃಷಿ ಪಂಪ್‌ಸೆಟ್‌ಗಳಿಗೆ ಬೆಳಗ್ಗೆ 6 ರಿಂದ ಸಂಜೆ 6 ರವರಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ನೀಡಬೇಕು. ಕಾಡು ಪ್ರಾಣಿಗಳ ದಾಳಿಯಿಂದ ರೈತರು ಭಯ ಬೀತರಾಗಿರುವ ಕಾರಣ ಹಗಲು ವೇಳೆ ವಿದ್ಯುತ್ ನೀಡಬೇಕು. ಕನಿಷ್ಠ ಬೆಂಬಲ ಬೆಲೆ ಭತ್ತ, ರಾಗಿ ಇತರೆ ಉತ್ಪನ್ನಗಳ ಖರೀದಿ ಕೇಂದ್ರಗಳಲ್ಲಿ, ರೈತರಿಂದ ಖರೀದಿ ಮಿತಿ ವಿಧಿಸಿರುವುದನ್ನು ರದ್ದುಗೊಳಿಸಬೇಕು. ಪಂಜಾಬ್, ಹರಿಯಾಣ, ತೆಲಂಗಾಣ ರಾಜ್ಯಗಳಲ್ಲಿ ರೈತರಿಗೆ ಯಾವುದೇ ಮಿತಿ ಇರುವುದಿಲ್ಲ. ಸರಬರಾಜು ಮಾಡಿದ ಐದು ದಿನದ ಒಳಗಾಗಿ ರೈತರಿಗೆ ಹಣ ಪಾವತಿಯಾಗುತ್ತದೆ ಎಂದರು.

ಕಾಡು ಪ್ರಾಣಿಗಳ ಹಾವಳಿಯಿಂದ ನಾಶವಾಗುವ ಪರಿಹಾರ ಧನ ಸಂಪೂರ್ಣ ನಷ್ಟ ಭರಿಸಬೇಕು, ಜೀವ ಹಾನಿಗೆ ಕನಿಷ್ಠ ರೂ.50 ಲಕ್ಷ ಪರಿಹಾರ ನೀಡಬೇಕು. ಕಾಡಂಚಿನಲ್ಲಿ ಪ್ರಾಣಿಗಳ ಸಾವಿಗೆ ರೈತರನ್ನ ಬಂಽಸಿ ಜೈಲಿಗೆ ಕಳಿಸುವ, ರೈತರನ್ನ ಭಯೋತ್ಪಾದಕರಂತೆ ಬಿಂಬಿಸುವ ಅರಣ್ಯ ಅಽಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಪ್ರಧಾನಿ ಫಸಲ್ ಬೀಮಾ ಬೆಳೆ ವಿಮೆ ಪದ್ಧತಿ ರೈತರಿಗೆ ಸಹಕಾರಿಯಲ್ಲ, ಕಂಪನಿಗಳಿಗೆ ಲಾಭ ತರುವ ಯೋಜನೆಯಾಗಿದೆ. ಇನ್ನಾದರೂ ರೈತರ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ಬದಲಾಯಿಸಬೇಕು. ಬ್ಯಾಂಕ್‌ಗಳಲ್ಲಿ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಮಾನದಂಡ ನೀತಿ ಕೈ ಬಿಡಬೇಕು. ಕೃಷಿ ಸಾಲ ನೀತಿ ಬದಲಾಗಬೇಕು. ರಸಗೊಬ್ಬರ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೆಲವು ಕಡೆ ಕಳಪೆ ರಸಗೊಬ್ಬರ, ಕೀಟನಾಶಕ ಮಾರಾಟ ಮಾಡುವುದನ್ನು ತಡೆಗಟ್ಟಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯದಲ್ಲಿ ಜಾರಿಗೆ ಬಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ರದ್ದುಗೊಳಿಸಬೇಕು. ಜಿಲ್ಲೆಯಲ್ಲಿ ಸಾವಿರಾರು ರೈತರು ಹತ್ತಾರು ವರ್ಷಗಳಿಂದಲೂ ಸಾಗುವಳಿ ಮಾಡಿಕೊಂಡು ಹೋಗುತ್ತಿರುವ ಜಮೀನುಗಳಿಗೆ ಸಾಗುವಳಿ ಪತ್ರವನ್ನು ನೀಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ರೈತರಿಗೆ ನ್ಯಾಯಬದ್ಧವಾಗಿ ಸಾಗುವಳಿ ಪತ್ರವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸಂಘದ ಪದಾಧಿಕಾರಿಗಳಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಲಕ್ಷ್ಮಿಪುರ ವೆಂಕಟೇಶ್, ಕಾಟೂರು ಮಹದೇವಸ್ವಾಮಿ ಇದ್ದರು.


Spread the love