ಬಂಟಕಲ್ಲು ಶ್ರೀ ದುರ್ಗಾ ಮಹಿಳಾ ಚೆಂಡೆ ಬಳಗಕ್ಕೆ ದೆಹಲಿಯಲ್ಲಿ ಅಭಿನಂದನೆ

Spread the love

ಬಂಟಕಲ್ಲು ಶ್ರೀ ದುರ್ಗಾ ಮಹಿಳಾ ಚೆಂಡೆ ಬಳಗಕ್ಕೆ ದೆಹಲಿಯಲ್ಲಿ ಅಭಿನಂದನೆ

ದೆಹಲಿಯಲ್ಲಿ ಚೆಂಡೆ ವಾದನ ಕಾರ್ಯಕ್ರಮವನ್ನು ನೀಡಲು ಹೋಗಿರುವ ಬಂಟಕಲ್ಲಿನ ಶ್ರೀ ದುರ್ಗಾ ಮಹಿಳಾ ಚೆಂಡೆ ಬಳಗದ ಸದಸ್ಯರಿಗೆ ದೆಹಲಿಯ ಕರ್ನಾಟಕ ಸಂಘದ ಅಮೃತ ಮಹೋತ್ಸವದ ಸಮಾರಂಭದಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ  ಸಿ.ಎಂ.ನಾಗರಾಜ್, ಕಾರ್ಯದರ್ಶಿ  ಆರ್.ರೇಣುಕುಮಾರ್ , ಉಪಾಧ್ಯಕ್ಷೆ  ಪೂಜಾ ಪ್ರದೀಪ್ ರಾವ್,  ರಾಧಾಕೃಷ್ಣ ,  ಮಾಲಿನಿ ಪ್ರಹ್ಲಾದ್ ಅವರು ಚೆಂಡೆ ಬಳಗದ ಅಧ್ಯಕ್ಷರಾದ  ಗೀತಾ ವಾಗ್ಳೆ ಅವರಿಗೆ ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಅಭಿನಂದಿಸುವುದರೊಂದಿಗೆ ಇತರ ಸದಸ್ಯರಿಗೂ ಗೌರವ ಪ್ರಮಾಣ ಪತ್ರ, ಹಾಗೂ ಗೌರವ ಪದಕಗಳನ್ನು ನೀಡಿ. ಅಭಿನಂದಿಸಿ ಚೆಂಡೆ ಬಳಗದ ಸಾಧನೆಯನ್ನು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಮಹಿಳಾ ಆಯೋಗದ ಮಾಜಿ ಸದಸ್ಯೆ  ಶ್ಯಾಮಲಾ ಕುಂದರ್ ಅವರು ನಮ್ಮ ಜಿಲ್ಲೆಯ ಮಹಿಳೆಯರು ದೆಹಲಿಗೆ ಬಂದು ತಮ್ಮ ಕಲೆಯನ್ನು ಪ್ರದರ್ಶಿಸುತ್ತಿರುವುದು ಸಂತಸ ತಂದಿದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ವಿಧಾನ ಪರಿಷತ್ ನ ಮಾಜಿ ಸದಸ್ಯರೂ,ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ  ಐವನ್ ಡಿ’ಸೋಜ ಅವರು ಬಂಟಕಲ್ಲಿನಂತಹ ಒಂದೊಂದು ಚಿಕ್ಕ ಹಳ್ಳಿಯಲ್ಲಿ ಹುಟ್ಟಿಕೊಂಡ ಕಲಾ ಸಂಘಟನೆ ಶ್ರೀ ದುರ್ಗಾ ಮಹಿಳಾ ಚೆಂಡೆ ಬಳಗವು ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾರ್ಯಕ್ರಮವನ್ನು ನೀಡಿ ಸೈ ಎನಿಸಿರುವುದು ಆ ಊರಿನವನಾದ ನನಗೆ ಹೆಮ್ಮೆ ಎನ್ನಿಸುತ್ತಿದೆ.ಅವರ ಕಲೆಯನ್ನು ಗುರುತಿಸಿ ದೆಹಲಿಗೆ ಕರೆಸಿಕೊಂಡ ದೆಹಲಿ ಕರ್ನಾಟಕ ಸಂಘದ ಪದಾಧಿಕಾರಿಗಳು ನಿಜಕ್ಕೂ ಅಭಿನಂದನಾರ್ಹರು ಎಂದು ನುಡಿದರು.

ವೇದಿಕೆಯಲ್ಲಿ ಬಿಗ್ ಬಾಸ್ ಖ್ಯಾತಿಯ ಗಾಯಕ, ಚಲನಚಿತ್ರ ನಟ ಹಾಗೂ ನಿರೂಪಕರಾದ  ಶೈನ್ ಶೆಟ್ಟಿ, ಕಾಮನ್ವೆಲ್ತ್ ಕ್ರೀಡಾಕೂಟದ ಪದಕ ವಿಜೇತ ಕರಾವಳಿಯ ಕ್ರೀಡಾ ಪಟು  ಗುರುರಾಜ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.ಚೆಂಡೆ ಬಳಗದ ಸದಸ್ಯರಾದ  ಸುನೀತಾ ನಾಯಕ್, ಸಂಗೀತಾ ಪಾಟ್ಕರ್, ಆಶಾ ನಾಯಕ್, ಶೈಲಜಾ ಪಾಟ್ಕರ್,ಭವಾನಿ ನಾಯಕ್, ಸಂಜನಾ ಪಾಟ್ಕರ್, ಪ್ರೀತಿಕಾ ವಾಗ್ಳೆ ಹಾಗೂ  ಕುಸುಮಾ ಕಾಮತ್ ಉಪಸ್ಥಿತರಿದ್ದು ಅಭಿನಂದನೆ ಸ್ವೀಕರಿಸಿದರು.


Spread the love