
ಬಂಟರನ್ನು 2ಎಗೆ ಸೇರಿಸಲು ಸರ್ಕಾರಕ್ಕೆ ಆಗ್ರಹ
ಮೈಸೂರು: ಬಂಟರ ಸಮುದಾಯದವರು ಶ್ರಮಜೀವಿಗಳಾಗಿದ್ದು, ಶೇ.60ರಷ್ಟು ಮಂದಿ ಬಡವರೇ ಆಗಿದ್ದಾರೆ. ಇವರು ಬಹಳ ವರ್ಷದ ಹಿಂದೆಯೇ ತಮ್ಮ ಜಮೀನು ಕಳೆದುಕೊಂಡಿರುವ ಕಾರಣ ಪರಿಶ್ರಮದಿಂದ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಇವರನ್ನು ಕೆಟಗರಿ 3ಬಿಯಿಂದ ಕೆಟಗರಿ 2ಎಗೆ ವರ್ಗಾಯಿಸಬೇಕೆಂದು ಮೈಸೂರು ಬಂಟರ ಸಂಘ ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಟಿ.ಪ್ರಭಾಕರ್ ಶೆಟ್ಟಿ, ಬಂಟರ ಸಮುದಾಯದಿಂದ ಐವರು ಶಾಸಕರು, ಓರ್ವ ಎಂಎಲ್‌ಸಿ, ಒಬ್ಬರು ಎಂಪಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಒಬ್ಬರು ಆಯ್ಕೆಯಾಗಿದ್ದರೂ ಈವರೆಗೆ ಬಂಟ ಸಮುದಾಯಕ್ಕೆ ಒಂದು ನಿಗಮ ಸ್ಥಾಪನೆಯಾಗಿಲ್ಲ ಎಂದು ಕಿಡಿ ಕಾರಿದರು.
ಎಲ್ಲ ವರ್ಗಕ್ಕೂ ಒಂದೊಂದು ನಿಗಮ ಇದ್ದರೂ ಈ ವರ್ಗಕ್ಕೆ ಮಾತ್ರ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ. ಹೀಗಾಗಿ ಕೂಡಲೇ ಸರ್ಕಾರ ನಿಗಮ ಸ್ಥಾಪನೆಗೆ ಮುಂದಾಗಬೇಕು. ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಈವರೆಗೆ ಈ ನಿಟ್ಟಿನಲ್ಲಿ ಹೋರಾಟ ಸಹಾ ನಡೆದಿರಲಿಲ್ಲ. ಈಗ ಸಮುದಾಯದವರು ಜಾಗೃತರಾಗಿದ್ದು, ಸಮುದಾಯದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗೂ ಸರ್ಕಾರ ಕೈಗೊಳ್ಳದಿದ್ದಲ್ಲಿ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ಪದಾಧಿಕಾರಿಗಳಾದ ಕೆ.ಗಣೇಶ್ ನಾರಾಯಣ ಹೆಗ್ಡೆ, ಎಂ.ನಂದ್ಯಪ್ಪಶೆಟ್ಟಿ, ಹರೀಶ್ ಆಳ್ವ, ಸೌಮ್ಯ ವಿ.ಶೆಟ್ಟಿ, ಇನ್ನಿತರರು ಇದ್ದರು.